2021ರಲ್ಲಿ ಚೀನಾ ಹಿಂದಿಕ್ಕಲಿದೆ ಭಾರತದ ಆರ್ಥಿಕತೆಯ ಚೇತರಿಕೆ|ಶೇ 8.8ರಷ್ಟುಚೇತರಿಕೆ: ಐಎಂಎಫ್‌| ಈ ವರ್ಷ ಶೇ.10.3ರಷ್ಟುಕುಸಿತ

ವಾಷಿಂಗ್ಟನ್‌(ಅ.14): ಕೊರೋನಾ ವೈರಸ್‌ ಪಿಡುಗಿನಿಂದ ಭಾರತದ ಆರ್ಥಿಕತೆ ಈ ಸಲ ಶೇ.10.3ರಷ್ಟುಭಾರೀ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆ ಇದೆ. ಆದರೆ 2021ರಲ್ಲಿ ಅದು ಶೇ.8.8ರಷ್ಟುಚೇತರಿಕೆ ಕಾಣಲಿದೆ ಎಂಬ ನಿರೀಕ್ಷೆಯಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಹೇಳಿದೆ.

‘ಕೊರೋನಾ ಕಾರಣ ಆರ್ಥಿಕತೆ ಭಾರೀ ಕುಸಿತ ಕಂಡರೂ 2021ರಲ್ಲಿ ಅದು, ನಷ್ಟಹೊಂದಿದಷ್ಟುಪ್ರಮಾಣವನ್ನು ಬಹುತೇಕ ಸರಿದೂಗಿಸಿಕೊಳ್ಳಲಿದೆ. 2021ರಲ್ಲಿ ಚೀನಾ ಆರ್ಥಿಕತೆ ಶೇ.8.2ರ ಚೇತರಿಕೆ ಕಾಣಲಿದ್ದು, ಭಾರತವು ಶೇ.8.8ರ ಚೇತರಿಕೆ ಕಂಡು ಚೀನಾವನ್ನೂ ಹಿಂದಿಕ್ಕಲಿದೆ’ ಎಂದು ಐಎಂಎಫ್‌ನ ‘ವಲ್ಡ್‌ರ್‍ ಎಕಾನಮಿಕ್‌ ಔಟ್‌ಲುಕ್‌’ ವರದಿ ಅಂದಾಜಿಸಿದೆ.

ಇದೇ ವೇಳೆ, ಕೊರೋನಾ ಕಾರಣಕ್ಕೇ ವಿಶ್ವ ಆರ್ಥಿಕತೆ ಶೇ.4.4ರಷ್ಟುಕುಗ್ಗಲಿದೆ. ಆದರೆ 2021 ಇದು ಶೇ.5.2ರಷ್ಟುಚೇತರಿಕೆ ಕಾಣಲಿದೆ. ಅಮೆರಿಕದ ಆರ್ಥಿಕತೆ ಕ್ರಮವಾಗಿ ಈ 2 ಸಾಲಿನಲ್ಲಿ ಶೇ.5.8ರಷ್ಟುಕುಗ್ಗಿ ಶೇ.3.9ರಷ್ಟುಪ್ರಗತಿ ಕಾಣಲಿದೆ ಎಂದು ವರದಿ ಹೇಳಿದೆ.

ಆದರೆ ಕೊರೋನಾ ಉಗಮದ ಮೂಲ ದೇಶವಾದ ಚೀನಾ ಈ ಸಲ ಶೇ.1.9ರಷ್ಟುಪ್ರಗತಿ ಕಾಣಲಿದೆ ಎಂದು ಐಎಂಎಫ್‌ ಮಾಹಿತಿ ನೀಡಿದೆ.