ಲಾಸ್ ವೆಗಾಸ್(ಜೂ.07): ಆತ ವಿಶ್ವದ ಆಗರ್ಭ ಶ್ರೀಮಂತ, ಅಮೆಜಾನ್ ಎಂಬ ದೈತ್ಯ ಆನ್ ಲೈನ್ ಕಂಪನಿಯ ಮುಖ್ಯಸ್ಥ, ಹೆಸರು ಜೆಫ್ ಬೆಜೋಸ್. ಈತ ಹೋದಲ್ಲಿ ಬಂದಲ್ಲಿ ಈತನಿಗೆ ರಾಜ ಮರ್ಯಾದೆ ಸಿಗುತ್ತದೆ. ಆದರೆ ಭಾರತೀಯ ನಾರಿಯೋರ್ವಳು ಎಲ್ಲರ ಸಮ್ಮುಖದಲ್ಲಿ ವೇದಿಕೆಯಲ್ಲೇ ಜೆಫ್ ಬೆವರಿಳಿಸಿ ಸುದ್ದಿಗೆ ಗ್ರಾಸವಾಗಿದ್ದಾಳೆ.

ಹೌದು, ಅಮೆಜಾನ್ ನ ರಿ-ಮಾರ್ಸ್ ಸಭೆಯಲ್ಲಿ ಭಾಗವಹಿಸಿದ್ದ ಜೆಫ್ ಬೆಜೋಸ್, ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಪ್ರಾಣಿ ದಯಾ ಸಂಘಟನೆಯ ಭಾರತೀಯ ಮೂಲದ ಯುವತಿಯೋರ್ವಳು ಆತನ ಭಾಷಣಕ್ಕೆ ಅಡ್ಡಿಪಡಿಸಿದ್ದಾಳೆ.

ಜೆಫ್ ಬೆಜೋಸ್ ಮಾತನಾಡುವಾಗ ವೇದಿಕೆಯೇರಿದ ಭಾರತೀಯ ಮೂಲದ ಪ್ರಿಯಾ ಸೌಹಾನೆ, ನೀವು ಜಗತ್ತಿನ ಶಗರ್ಭ ಶ್ರೀಮಂತರು ಆದರೆ ನಿಮ್ಮ ಸಂಸ್ಥೆಯಲ್ಲಿ ಚಿಕನ್ ಮಾರಾಟವನ್ನು ತಡೆಯುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದಾಳೆ.

ಅಮೆರಿಕದ ಡೈರೆಕ್ಟ್ ಆ್ಯಕ್ಷನ್ ಎವರಿವೇರ್(DXE) ಎಂಬ ಪ್ರಾಣಿದಯಾ ಸಂಘಟನೆಯ ಸದಸ್ಯಳಾಗಿರುವ ಪ್ರಿಯಾ, ವೇದಿಕೆಯಲ್ಲೇ ಪ್ರಾಣಿಗಳ ಕುರಿತು ಮಮತೆ ತೋರುವಂತೆ ಜೆಫ್ ಬೆಜೋಸ್ ಗೆ ಮನವಿ ಮಾಡಿದ್ದಾಳೆ.

ದಿಢೀರನೇ ನಡೆದ ಈ ಬೆಳವಣಿಗೆಯಿಂದ ಕಕ್ಕಾಬಿಕ್ಕಿಯಾದ ಜೆಫ್ ಬೆಜೋಸ್, ಯುವತಿಯ ಮಾತುಗಳನ್ನು ಗಂಭೀರವಾಗಿ ಕೇಳಿಸಿಕೊಂಡರು. ಕೂಡಲೇ ಮಧ್ಯ ಪ್ರವೇಶಿಸಿದ ಭದ್ರತಾ ಸಿಬ್ಬಂದಿ, ಪ್ರಿಯಾ ಸೌಹಾನೆಯನ್ನು ವೇದಿಕೆಯಿಂದ ಹೊರಗೆ ಕರೆದೊಯ್ದರು.

ಅಮೆಜಾನ್ ನೇರವಾಗಿ ಚಿಕನ್ ಫಾರ್ಮ್ ಗಳನ್ನು ನಡೆಸುತ್ತಿಲ್ಲವಾದರೂ, ಕೋಳಿ ಮಾಂಸವನ್ನು ಸಂಸ್ಕರಿಸಿ ಮಾರಾಟ ಮಾಡುತ್ತದೆ. ಈ ಕುರಿತು DXE ಈ ಹಿಂದೆಯೇ ಅಮೆಜಾನ್ ವಿರುದ್ಧ ಪ್ರತಿಭಟನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.