ಮುಂಬೈ(ಅ.14): ಸ್ವಂತ ಪರಿಶ್ರಮದಿಂದ ಕಂಪನಿ ಸ್ಥಾಪಿಸಿ ತಮ್ಮ 40ನೇ ವಯಸ್ಸಿನೊಳಗೆ ಒಂದು ಸಾವಿರ ಕೋಟಿ ರು.ಗಿಂತ ಅಧಿಕ ಆಸ್ತಿ ಸಂಪಾದನೆ ಮಾಡಿದ ಪ್ರಮುಖ 16 ವ್ಯಕ್ತಿಗಳ ಪಟ್ಟಿಯೊಂದು ಬಿಡುಗಡೆಯಾಗಿದೆ. ವಿಶೇಷ ಎಂದರೆ, ಅದರಲ್ಲಿ ಶೇ.50ರಷ್ಟುಅಂದರೆ 8 ಮಂದಿ ದೇಶದ ಸ್ಟಾರ್ಟಪ್‌ಗಳ ತವರೂರು ಎನಿಸಿಕೊಂಡಿರುವ ಬೆಂಗಳೂರಿನವರಾಗಿದ್ದಾರೆ!

ಐಐಎಫ್‌ಎಲ್‌ ವೆಲ್ತ್‌ ಹಾಗೂ ಹುರೂನ್‌ ಇಂಡಿಯಾ ಸಂಸ್ಥೆಗಳು ‘40 ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ ಸ್ವಯಂಪರಿಶ್ರಮದ ಶ್ರೀಮಂತರ ಪಟ್ಟಿ2020’ ಅನ್ನು ಬಿಡುಗಡೆ ಮಾಡಿವೆ. ಈ ಪಟ್ಟಿಯಲ್ಲಿ 16 ರಾರ‍ಯಂಕ್‌ಗಳನ್ನು 17 ವ್ಯಕ್ತಿಗಳಿಗೆ ನೀಡಲಾಗಿದೆ. ಇವರೆಲ್ಲರ ಒಟ್ಟಾರೆ ಆಸ್ತಿ 45 ಸಾವಿರ ಕೋಟಿ ರು. ಆಗುತ್ತದೆ ಎಂದು ಪಟ್ಟಿತಿಳಿಸಿದೆ.

ಬೆಂಗಳೂರಿಗರೇ ನಂ.1:

ಜೀರೋಧಾ ಎಂಬ ಷೇರು ವ್ಯವಹಾರ ಕಂಪನಿಯನ್ನು ಸ್ಥಾಪಿಸಿ, ಜನಸಾಮಾನ್ಯರು ತೀರಾ ಕಡಿಮೆ ವೆಚ್ಚದಲ್ಲಿ ಷೇರು ವ್ಯವಹಾರ ಮಾಡುವುದಕ್ಕೆ ಅನುಕೂಲ ಕಲ್ಪಿಸಿಕೊಟ್ಟಬೆಂಗಳುರಿನ ನಿತಿನ್‌ ಕಾಮತ್‌ (40) ಹಾಗೂ ನಿಖಿಲ್‌ ಕಾಮತ್‌ (34) ಅವರು ಜಂಟಿಯಾಗಿ ಸ್ವಯಂ ಪರಿಶ್ರಮದ ಉದ್ಯಮಿಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಬ್ಬರ ಒಟ್ಟಾರೆ ಆಸ್ತಿ 24 ಸಾವಿರ ಕೋಟಿ ರು.

ದುಬೈ ಮೂಲದ ದಿವ್ಯಾಂಕ್‌ ತುರಾಖಿಯಾ ಅವರು ಮೀಡಿಯಾ.ನೆಟ್‌ ಕಂಪನಿ ಸ್ಥಾಪಿಸಿ, 14 ಸಾವಿರ ಕೋಟಿ ರು.ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಉದ್ಯಮಗಳಿಂದ ವ್ಯಾಪಾರಿಗಳಿಗೆ ವಸ್ತು ಪೂರೈಸುವ ಉಡಾನ್‌ ಕಂಪನಿಯ ಸ್ಥಾಪಕರಾದ ಬೆಂಗಳೂರಿನ ಅಮೋದ್‌ ಮಾಳವೀಯ, ಸುಜೀತ್‌ ಕುಮಾರ್‌, ನವದೆಹಲಿಯ ವೈಭವ್‌ ಕುಮಾರ್‌ ಅವರು 3ನೇ ಸ್ಥಾನವನ್ನು ಸಮಾನವಾಗಿ ಹಂಚಿಕೊಂಡಿದ್ದಾರೆ. ಈ ಮೂವರೂ ತಲಾ 13,100 ಕೋಟಿ ರು. ಆಸ್ತಿ ಹೊಂದಿದ್ದಾರೆ. ಬೈಜು ಆನ್‌ಲೈನ್‌ ತರಗತಿಗಳ ಮೂಲಕ ಹೆಸರುವಾಸಿಯಾಗಿರುವ ಬೆಂಗಳೂರು ಮೂಲದ ರಿಜು ರವೀಂದ್ರನ್‌ ಅವರು 7800 ಕೋಟಿ ರು. ಆಸ್ತಿಯ ಮಾಲೀಕರಾಗಿ 6ನೇ ಸ್ಥಾನದಲ್ಲಿದ್ದಾರೆ.

ಫ್ಲಿಪ್‌ಕಾರ್ಟ್‌ ಕಂಪನಿಯನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಿ ಅದರಿಂದ ಸದ್ಯ ನಿರ್ಗಮಿಸಿರುವ ಬಿನ್ನಿ ಬನ್ಸಲ್‌ ಹಾಗೂ ಸಚಿನ್‌ ಬನ್ಸಲ್‌ ತಲಾ 7500 ಕೋಟಿ ರು. ಆಸ್ತಿಯೊಂದಿಗೆ 7ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ದೆಹಲಿ ಮೂಲದ ಒರಾವೆಲ್‌ ಸ್ಟೇಯ್‌್ಸ ಕಂಪನಿಯ ರಿತೇಶ್‌ ಅಗರ್‌ವಾಲ್‌ 4500 ಕೋಟಿ ರು.ಗಳೊಂದಿಗೆ 9ನೇ ಸ್ಥಾನದಲ್ಲಿದ್ದಾರೆ. ಓಲಾ ಕ್ಯಾಬ್ಸ್‌ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ಮುನ್ನಡೆಸುತ್ತಿರುವ ಭವೀಶ್‌ ಅಗರ್‌ವಾಲ್‌ 3500 ಕೋಟಿ ರು.ಗಳೊಂದಿಗೆ 10ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದಲ್ಲದೆ, ಅದೇ ಕಂಪನಿಯ ಅಂಕಿತ್‌ ಭಾತಿ ಅವರು 1600 ಕೋಟಿ ರು.ಗಳೊಂದಿಗೆ 14ನೇ ಸ್ಥಾನದಲ್ಲಿದ್ದಾರೆ.

40ರೊಳಗಿನ ಸ್ವಯಂ ಪರಿಶ್ರಮದ ಶ್ರೀಮಂತ ಉದ್ಯಮಿಗಳು

1. ನಿತಿನ್‌ ಕಾಮತ್‌, 24000 ಕೋಟಿ ಜೀರೋಧಾ 40, 34 ಬೆಂಗಳೂರು ನಿಖಿಲ್‌ ಕಾಮತ್‌

2. ದಿವ್ಯಾಂಕ್‌ ತುರಾಖಿಯಾ 14000 ಕೋಟಿ ಮೀಡಿಯಾ.ನೆಟ್‌ 38 ದುಬೈ

3. ಅಮೋದ್‌ ಮಾಳವೀಯ 13,100 ಉಡಾನ್‌ 40 ಬೆಂಗಳೂರು

3. ಸುಜೀತ್‌ ಕುಮಾರ್‌ 13,100 ಉಡಾನ್‌ 40 ಬೆಂಗಳೂರು

3. ವೈಭವ್‌ ಗುಪ್ತಾ 13,100 ಉಡಾನ್‌ 40 ನವದೆಹಲಿ

6. ರಿಜು ರವೀಂದ್ರನ್‌ 7800 ಕೋಟಿ ಬೈಜುಸ್‌ 39 ಬೆಂಗಳೂರು

7. ಬಿನ್ನಿ ಬನ್ಸಲ್‌ 7500 ಕೋಟಿ ಫ್ಲಿಪ್‌ಕಾರ್ಟ್‌ 37 ಬೆಂಗಳೂರು

7. ಸಚಿನ್‌ ಬನ್ಸಲ್‌ 7500 ಕೋಟಿ ಫ್ಲಿಪ್‌ಕಾರ್ಟ್‌ 39 ಬೆಂಗಳೂರು

9. ರಿತೇಶ್‌ ಅಗರ್‌ವಾಲ್‌ 4500 ಕೋಟಿ ಒರಾವೆಲ್‌ ಸ್ಟೇಯ್‌್ಸ 26 ನವದೆಹಲಿ

10. ಭವೀಶ್‌ ಅಗರ್‌ವಾಲ್‌ 3500 ಕೋಟಿ ಓಲಾ ಕ್ಯಾಬ್ಸ್‌ 35 ಬೆಂಗಳೂರು

11. ದೀಪಕ್‌ ಗರ್ಗ್‌ 3200 ಕೋಟಿ ರಿವಿಗೋ 39 ಗುರುಗ್ರಾಮ

12. ಹರ್ಮನ್‌ ನರುಲಾ 2900 ಕೋಟಿ ಇಪ್ರಾಬಲ್‌ ವಲ್ಡ್‌್ರ್ಸ 32 ಲಂಡನ್‌

13. ದೀಪಿಂದರ್‌ ಗೋಯಲ್‌ 2200 ಕೋಟಿ ಜೊಮ್ಯಾಟೋ ಮೀಡಿಯಾ 37 ಗುರುಗ್ರಾಮ

14. ಅಂಕಿತ್‌ ಭಾತಿ 1600 ಕೋಟಿ ಓಲಾ ಕ್ಯಾಬ್ಸ್‌ 34 ಬೆಂಗಳೂರು

15. ಶ್ರೀಹರ್ಷ ಮಜೆಟಿ 1400 ಕೋಟಿ ಬಂಡ್ಲ್‌ ಟೆಕ್ನಾಲಜೀಸ್‌ 34 ವಿಜಯವಾಡ

16. ದೇವಿತಾ ರಾಜಕುಮಾರ್‌ ಸರಾಫ್‌ 1200 ಕೋಟಿ ವಿಯು ಟೆಕ್ನಾಲಜೀಸ್‌ 39 ಮುಂಬೈ