ನವದೆಹಲಿ(ಜ.30): ಜಾಗತಿಕ ಉಕ್ಕಿನ ಉತ್ಪಾದನೆಯಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿರುವ ಭಾರತ, ಎರಡನೇ ಸ್ಥಾನವನ್ನು ಅಲಂಕರಿಸಿದೆ. 

ಹೌದು, ಜಾಗತಿಕ ಮಟ್ಟದಲ್ಲಿ ಉಕ್ಕಿನ ಉತ್ಪಾದನೆ ಮಾಡುವ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿದ್ದ ಭಾರತ, ಇದೀಗ ಜಪಾನ್ ದೇಶವನ್ನು ಹಿಂದಿಕ್ಕೆ ಎರಡನೇ ಸ್ಥಾನಕ್ಕೆ ಏರಿದೆ. 

ಇನ್ನು ನೆರೆಯ ಚೀನಾ ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಉಕ್ಕಿನ ಉತ್ಪಾದನೆ ಮಾಡುವ ದೇಶವಾಗಿದೆ. ಜಗತ್ತಿನ ಉಕ್ಕಿನಲ್ಲಿ ಶೇ.51ರಷ್ಟು ಉತ್ಪಾದನೆಯನ್ನು ಚೀನಾ ದೇಶವೊಂದೇ ಮಾಡುತ್ತದೆ. ಚೀನಾದ ಉಕ್ಕಿನ ಉತ್ಪಾದನೆ 2018ರಲ್ಲಿ ಶೇ.6.6ರಷ್ಟು ಏರಿಕೆಯಾಗಿದ್ದು 92.8 ಕೋಟಿ ಟನ್‌ ಉಕ್ಕಿನ ಉತ್ಪಾದನೆಯಾಗಿದೆ. 

ಈ ಕುರಿತು ವರ್ಲ್ಡ್‌ ಸ್ಟೀಲ್‌ ಅಸೋಷಿಯೇಷನ್‌ನ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು, ಭಾರತವು 2018ರಲ್ಲಿ 10.65 ಕೋಟಿ ಟನ್‌ ಉಕ್ಕಿನ ಉತ್ಪಾದನೆ ಮಾಡುವ ಮೂಲಕ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ ಎಂದು ತಿಳಿಸಿದೆ. 2017ರಲ್ಲಿ ಭಾರತ 10.15 ಕೋಟಿ ಟನ್‌ ಉಕ್ಕನ್ನು ಉತ್ಪಾದಿಸಿತ್ತು. ಅಂದರೆ ಒಂದು ವರ್ಷದಲ್ಲಿ ಭಾರತ ಉಕ್ಕಿನ ಉತ್ಪಾದನೆಯಲ್ಲಿ ಶೇ.4.9ರಷ್ಟು ಏರಿಕೆ ದಾಖಲಿಸಿದೆ.

ಅದರಂತೆ ಜಪಾನ್‌ 2018ರಲ್ಲಿ 10.43 ಕೋಟಿ ಟನ್‌ ಉತ್ಪಾದಿಸಿದ್ದು, 2017ಕ್ಕೆ ಹೋಲಿಸಿದರೆ ಶೇ.0.3ರಷ್ಟು ಇಳಿಕೆಯಾಗಿದೆ. ಇನ್ನು ಉಕ್ಕಿನ ಉತ್ಪಾದನೆಯಲ್ಲಿ  ಅಮೆರಿಕ 4ನೇ ಸ್ಥಾನ(8.6 ಕೋಟಿ ಟನ್‌)ದಲ್ಲಿದ್ದು, ದಕ್ಷಿಣ ಕೊರಿಯಾ, ರಷ್ಯಾ, ಜರ್ಮನಿ, ಟರ್ಕಿ, ಬ್ರೆಜಿಲ್‌, ಇರಾನ್‌ ನಂತರದ ಸ್ಥಾನದಲ್ಲಿವೆ.  2018ರಲ್ಲಿ ಜಾಗತಿಕ ಕಚ್ಚಾ ಉಕ್ಕು ಉತ್ಪಾದನೆ ಒಟ್ಟು 180 ಕೋಟಿ ಟನ್‌ ಆಗಿತ್ತು ಎಂದು ವರದಿ ತಿಳಿಸಿದೆ.

ಮೋದಿ ಸೈಲೆಂಟ್ ಸಾಧನೆ: ದುಪ್ಪಟ್ಟಾಯ್ತು ಕೈಗಾರಿಕಾ ಉತ್ಪಾದನೆ!