2021ನೇ ಸಾಲಿನಲ್ಲಿ ಕನಿಷ್ಠ 94 ದಿನ ರಜೆಗೆ ಯಾವುದೇ ಮೋಸವಿಲ್ಲ. 20 ದಿನ ಸಾರ್ವತ್ರಿಕ ರಜಾ ದಿನ, 52 ಭಾನುವಾರ, 22 ಎರಡನೇ ಹಾಗೂ ನಾಲ್ಕನೇ ಶನಿವಾರಗಳನ್ನು ಲೆಕ್ಕಕ್ಕೆ ಹಿಡಿದರೆ ಅಷ್ಟುರಜೆ ಸಿಗುತ್ತವೆ. ಇನ್ನು ಬಹುರಾಷ್ಟ್ರೀಯ ಉದ್ಯೋಗಿಗಳಿಗೆ ಎಲ್ಲ ಶನಿವಾರ ರಜೆ ಇರುವುದರಿಂದ ಈ ಸಂಖ್ಯೆ ಇನ್ನಷ್ಟುಹಿಗ್ಗುತ್ತದೆ.

2021ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟ 

ಅಕ್ಟೋಬರ್‌ನಲ್ಲಿ 14 ದಿನ ರಜೆ

ಅಕ್ಟೋಬರ್‌ನಲ್ಲಿ ನೌಕರರಿಗೆ 14 ದಿನಗಳ ಕಾಲ ರಜೆ ಸಿಗಲಿದೆ. ಅಕ್ಟೋಬರ್‌ 2 ರಂದು ಗಾಂಧಿ ಜಯಂತಿ, 6ರಂದು ಮಹಾಲಯ ಅಮಾವಾಸ್ಯೆ, 14ರಂದು ಮಹಾನವಮಿ- ಆಯುಧಪೂಜೆ, 15ರಂದು ವಿಜಯದಶಮಿ, 20ರಂದು ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಈದ್‌ ಮಿಲಾದ್‌ ಹಬ್ಬಕ್ಕೆ ರಜೆ ಇದೆ. ಇದಲ್ಲದೇ ಕೊಡಗು ಜಿಲ್ಲೆಗೆ ಸೀಮಿತವಾಗುವಂತೆ 18ರಂದು ತುಲಾ ಸಂಕ್ರಮಣ, 20ರಂದು ಹುತ್ತರಿ ಹಬ್ಬ ಆಚರಿಸಲು ಸಾರ್ವತ್ರಿಕ ರಜೆ ಸಿಗಲಿದೆ. ಇದರ ಜೊತೆಗೆ ಐದು ಭಾನುವಾರ, ಎರಡು ಶನಿವಾರಗಳ ರಜೆ ಸಹ ದೊರೆಯಲಿದೆ.

ಮೇ, ನವೆಂಬರ್‌ನಲ್ಲೂ ಅಧಿಕ ರಜೆ

ಮೇ, ನವೆಂಬರ್‌ ತಿಂಗಳಲ್ಲಿ ಸಾರ್ವತ್ರಿಕ ರಜೆ, ಪರಿಮಿತ ರಜೆ, ಭಾನುವಾರ ಹಾಗೂ ಶನಿವಾರ ಸೇರಿಸಿದರೆ ತಲಾ 13 ದಿನಗಳ ಕಾಲ ರಜೆ ಸಿಗಲಿದೆ. ಉಳಿದಂತೆ ಜನವರಿ ತಿಂಗಳಲ್ಲಿ 9 ದಿನ, ಫೆಬ್ರವರಿಯಲ್ಲಿ 7, ಮಾಚ್‌ರ್‍ನಲ್ಲಿ 8, ಏಪ್ರಿಲ್‌ನಲ್ಲಿ 12, ಜೂನ್‌ನಲ್ಲಿ 6, ಜುಲೈನಲ್ಲಿ 6,ಆಗಸ್ಟ್‌ನಲ್ಲಿ 11, ಸೆಪ್ಟೆಂಬರ್‌ನಲ್ಲಿ 10 ಹಾಗೂ ಡಿಸೆಂಬರ್‌ನಲ್ಲಿ 8 ದಿನಗಳ ಕಾಲ ರಜೆ ಸಿಗಲಿದೆ.

ಕೊರೋನಾ ರಜೆಯಲ್ಲಿ ಮಕ್ಕಳನ್ನು ಬ್ಯುಸಿಯಾಗಿಡಲು ಇಲ್ಲಿವೆ ಐಡಿಯಾಗಳು

ಕೈತಪ್ಪುವ ರಜೆಗಳು

ಈ ವರ್ಷ ವಿಶೇಷವಾಗಿ ಮಹಾವೀರ ಜಯಂತಿ (ಏಪ್ರಿಲ್‌ 4), ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್‌ 15) ಭಾನುವಾರ ಹಾಗೂ ಕ್ರಿಸ್‌ಮಸ್‌ (ಡಿಸೆಂಬರ್‌ 25) ನಾಲ್ಕನೆ ಶನಿವಾರದಂದು ಬಂದಿರುವುದರಿಂದ ಅಷ್ಟರ ಮಟ್ಟಿಗೆ ಸರ್ಕಾರಿ ನೌಕರರಿಗೆ ರಜೆ ಕಡಿಮೆಯಾಗಿದೆ.

ಭಾನುವಾರ ಬಂದ ಪರಿಮಿತ ರಜೆ

2021ರಲ್ಲಿ ಒಟ್ಟು 19 ಪರಿಮಿತ ರಜೆಗಳು ಬಂದಿದ್ದರೂ ಮಧ್ವ ನವಮಿ (ಫೆ.21), ಹೋಳಿ ಹಬ್ಬ (ಮಾ. 28), ರಾಮಾನುಜಾಚಾರ್ಯ ಜಯಂತಿ (ಏ.4), ಯಜುರ್‌ ಉಪಾಕರ್ಮ(ಆ. 22), ಶ್ರೀಕೃಷ್ಣಜನ್ಮಾಷ್ಟಮಿ (ಆ.29) ಹಾಗೂ ಅನಂತ ಪದ್ಮನಾಭ ವೃತ (ಸೆ.9) ಭಾನುವಾರ ಬಂದಿರುವುದರಿಂದ ಇವುಗಳನ್ನು ಪರಿಮಿತ ರಜೆಗಳ ಪಟ್ಟಿಯಲ್ಲಿ ಸೇರಿಸಿಲ್ಲ. ಸರ್ಕಾರಿ ನೌಕರರು ಸಾರ್ವತ್ರಿಕ ರಜೆ ದಿನಗಳ ಜೊತೆಗೆ ಎರಡು ದಿನಗಳಿಗೆ ಮೀರದಂತೆ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಬಹುದು.

ಕೊಡಗು ಜಿಲ್ಲೆಗೆ 3 ದಿನ ಹೆಚ್ಚುವರಿ ರಜೆ

ವಿಶೇಷವಾಗಿ ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ 2021ರಲ್ಲಿ ಮೂರು ದಿನ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಕೊಡವರು ಆಚರಿಸುವ ಕೈಲ್‌ ಮುಹೂರ್ತ (ಸೆ. 3), ತುಲಾ ಸಂಕ್ರಮಣ (ಅ. 18) ಹಾಗೂ ಹುತ್ತರಿ ಹಬ್ಬ (ನ.11)ಕ್ಕೆ ರಜೆ ಘೋಷಿಸಲಾಗಿದೆ.

ಬ್ಯಾಂಕುಗಳಿಗೆ ಮಾತ್ರ ರಜೆ

ಏಪ್ರಿಲ್‌ 1 ರಂದು ವಾಣಿಜ್ಯ ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯದ ದಿನ ಆಗಿರುವುದರಿಂದ ಈ ದಿನದಂದು ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜಾ ಇರುತ್ತದೆ.

ಶಿಕ್ಷಕರಿಗೆ ಪ್ರತ್ಯೇಕ ರಜೆ

ಇದಲ್ಲದೆ ಶಿಕ್ಷಕರಿಗೆ ಬೇಸಿಗೆ ರಜೆ, ಅಕ್ಟೋಬರ್‌ ತಿಂಗಳಲ್ಲಿ ನೀಡುವ ದಸರಾ ರಜೆ (ಮಧ್ಯಂತರ ರಜೆ)ಗಳನ್ನು ಶಿಕ್ಷಣ ಇಲಾಖೆ ಪ್ರಕಟಿಸಬೇಕಿದೆ.