ವೇಗವಾಗಿ ಆರ್ಥಿಕ ಪ್ರಗತಿ ಕಾಣುತ್ತಿರುವ ಭಾರತ ಈ ನಿಟ್ಟಿನಲ್ಲಿ ಮಹತ್ತರವಾದ ಸಾಧನೆ ಮಾಡಿದ್ದು, ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ 4ನೇ ದೊಡ್ಡ ಆರ್ಥಿಕತೆ ಎನಿಸಿಕೊಂಡಿದೆ. ಭಾರತದ ಆರ್ಥಿಕತೆಯ ಗಾತ್ರ 4.18 ಟ್ರಿಲಿಯನ್ ಡಾಲರ್ (375 ಲಕ್ಷ ಕೋಟಿ ರು.) ಆಗಿದ್ದು ಇದಕ್ಕೆ ಕಾರಣ.
ನವದೆಹಲಿ: ವೇಗವಾಗಿ ಆರ್ಥಿಕ ಪ್ರಗತಿ ಕಾಣುತ್ತಿರುವ ಭಾರತ ಈ ನಿಟ್ಟಿನಲ್ಲಿ ಮಹತ್ತರವಾದ ಸಾಧನೆ ಮಾಡಿದ್ದು, ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ 4ನೇ ದೊಡ್ಡ ಆರ್ಥಿಕತೆ ಎನಿಸಿಕೊಂಡಿದೆ. ಭಾರತದ ಆರ್ಥಿಕತೆಯ ಗಾತ್ರ 4.18 ಟ್ರಿಲಿಯನ್ ಡಾಲರ್ (375 ಲಕ್ಷ ಕೋಟಿ ರು.) ಆಗಿದ್ದು ಇದಕ್ಕೆ ಕಾರಣ. ಇದರೊಂದಿಗೆ, ಈ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರುವ ಕನಸಿಗೆ ಇನ್ನೊಂದು ಹೆಜ್ಜೆ ಹತ್ತಿರವಾಗಿದೆ.
2023ರ ವೇಳೆಗೆ ಆರ್ಥಿಕತೆಯ ಗಾತ್ರ 7.3 ಟ್ರಿಲಿಯನ್ ಡಾಲರ್‌ಗೆ (656 ಲಕ್ಷ ಕೋಟಿ ರು.) ಹಿಗ್ಗಿ, ಜರ್ಮನಿಯನ್ನು ಹಿಂದಿಕ್ಕಿ ಭಾರತ 3ನೇ ಸ್ಥಾನಕ್ಕೆ ಹೋಗುವ ಬಗ್ಗೆಯೂ ಆಶಾಭಾವನೆಯಿದೆ. ಪ್ರಸ್ತುತ ಅಮೆರಿಕ, ಚೀನಾ ಹಾಗೂ ಜರ್ಮನಿ ಮೊದಲ 3 ಸ್ಥಾನದಲ್ಲಿವೆ.
ಈ ಬಗ್ಗೆ ಸರ್ಕಾರ ವರದಿ ಬಿಡುಗಡೆ ಮಾಡಿದ್ದು, ‘ಸ್ವಾತಂತ್ರ್ಯದ ಶತಮಾನೋತ್ಸವ ವರ್ಷವಾದ 2047ರ ವೇಳೆಗೆ ಹೆಚ್ಚಿನ ಮಧ್ಯಮ-ಆದಾಯದ ಸ್ಥಾನಮಾನವನ್ನು ಪಡೆಯುವ ಮಹತ್ವಾಕಾಂಕ್ಷೆಯೊಂದಿಗೆ ದೇಶವು ಆರ್ಥಿಕ ಬೆಳವಣಿಗೆ, ರಚನಾತ್ಮಕ ಸುಧಾರಣೆಗಳು ಮತ್ತು ಸಾಮಾಜಿಕ ಪ್ರಗತಿಯ ಬಲವಾದ ಅಡಿಪಾಯಗಳ ಮೇಲೆ ನಿರ್ಮಾಣಗೊಳ್ಳುತ್ತಿದೆ’ ಎಂದು ತಿಳಿಸಿದೆ. ಜತೆಗೆ, ಹಣದುಬ್ಬರ ಕಡಿಮೆಯಿದ್ದು, ನಿರುದ್ಯೋಗ ದರದಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ರಫ್ತು ವೃದ್ಧಿಸುತ್ತಿದೆ ಎಂದು ಹೇಳಿದೆ.
ಕಾರಣವೇನು?:
2025-26ರ ಮೊದಲನೆ ತ್ರೈಮಾಸಿಕದಲ್ಲಿ ಶೇ.7.8ರಷ್ಟಿದ್ದ ಭಾರತದ ರಿಯಲ್ ಜಿಡಿಪಿ, 2ನೇ ತ್ರೈಮಾಸಿಕದಲ್ಲಿ ಶೇ.8.2ಕ್ಕೆ ಏರಿಕೆ ಕಂಡಿದೆ. ಇದು 6 ತ್ರೈಮಾಸಿಕಗಳ ಗರಿಷ್ಠ. ಅತ್ತ ಖಾಸಗಿ ಖರೀದಿಯಲ್ಲಿ ಭಾರೀ ಏರಿಕೆ ಆಗಿದೆ.
ಪ್ರಗತಿಯ ಭವಿಷ್ಯ:
ವಿಶ್ವ ಬ್ಯಾಂಕ್‌ನ ಪ್ರಕಾರ, 2026ರಲ್ಲಿ ಭಾರತದ ಆರ್ಥಿಕತೆ ಶೇ.6.5ರಷ್ಟು ಪ್ರಗತಿ ಸಾಧಿಸಲಿದೆ. ಮೂಡೀಸ್ ಅಂದಾಜಿನ ಪ್ರಕಾರ, ಮುಂದಿನ ವರ್ಷ ಶೇ.6.4 ಮತ್ತು 2027ರಲ್ಲಿ ಶೇ.6.5ರಷ್ಟು ಬೆಳವಣಿಗೆ ಆಗಲಿದೆ. ಐಎಂಎಫ್ 2025ಕ್ಕೆ ಶೇ.6.6 ಮತ್ತು 2026ಕ್ಕೆ ಶೇ.6.2 ದರವನ್ನು ನಿಗದಿಪಡಿಸಿದೆ.


