ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 180 ಕಿ.ಮೀ ವೇಗದಲ್ಲಿ ಯಶಸ್ವಿ 'ವಾಟರ್ ಟೆಸ್ಟ್' ಪೂರ್ಣಗೊಳಿಸಿದೆ. ರೈಲಿನ ಅಸಾಧಾರಣ ಸ್ಥಿರತೆಯು ಜಗತ್ತನ್ನು ಬೆರಗುಗೊಳಿಸಿದ್ದು, BEML ನಿರ್ಮಿತ ಈ ಐಷಾರಾಮಿ ಸ್ಲೀಪರ್ ರೈಲು ಶೀಘ್ರದಲ್ಲೇ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ.

ನವದೆಹಲಿ (ಡಿ.30): ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಸುದರ್ಣಾಕ್ಷರದಲ್ಲಿ ಬರೆದಿಡುವಂತಹ ಸಾಧನೆಯಿದು. ಗಾಳಿಯ ವೇಗದಲ್ಲಿ ಚಲಿಸುವ ರೈಲಿನಲ್ಲಿ ಕುಳಿತು, ಕೈಯಲ್ಲಿರುವ ನೀರಿನ ಗ್ಲಾಸ್ ಅಲುಗಾಡದಂತೆ ಕಾಫಿ ಕುಡಿಯುವ ಕಾಲ ಹತ್ತಿರ ಬಂದಿದೆ. ಇದೀಗ ವಂದೇ ಭಾರತ್ ಸ್ಲೀಪರ್ ರೈಲಿನ 'ವಾಟರ್ ಟೆಸ್ಟ್' ಯಶಸ್ವಿಯಾಗಿದ್ದು, ಇಡೀ ಜಗತ್ತು ಭಾರತದ ತಂತ್ರಜ್ಞಾನದತ್ತ ತಿರುಗಿ ನೋಡುವಂತೆ ಮಾಡಿದೆ.

ಶೂನ್ಯ ಕಂಪನ, ಬುಲೆಟ್ ವೇಗ: ಅಶ್ವಿನಿ ವೈಷ್ಣವ್ ಹಂಚಿಕೊಂಡ ಬೆರಗುಗೊಳಿಸುವ ವಿಡಿಯೋ!

ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು ಇಂದು ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡ ವಿಡಿಯೋವೊಂದು ಮಿಂಚಿನಂತೆ ವೈರಲ್ ಆಗುತ್ತಿದೆ. ರೈಲು ಗಂಟೆಗೆ 180 ಕಿಲೋಮೀಟರ್ ವೇಗವನ್ನು ದಾಟುತ್ತಿದ್ದರೂ, ಒಳಗಿದ್ದ ನೀರಿನ ಗ್ಲಾಸ್‌ನಲ್ಲಿ ಯಾವುದೇ ಕಂಪನವಿರಲಿಲ್ಲ. ಒಂದು ಹನಿ ನೀರೂ ಕೆಳಗೆ ಬೀಳದೆ, ರೈಲಿನ ಅಸಾಧಾರಣ ಸ್ಥಿರತೆ ಮತ್ತು ಸಮತೋಲನವನ್ನು ಈ ಪರೀಕ್ಷೆ ಸಾಬೀತುಪಡಿಸಿದೆ.

ಕೋಟಾ-ನಾಗ್ಡಾ ಹಳಿಯಲ್ಲಿ ಇತಿಹಾಸ ಸೃಷ್ಟಿ: ಮುಗಿಯಿತು ಅಂತಿಮ ಪರೀಕ್ಷೆ!

ರೈಲ್ವೆ ಸುರಕ್ಷತಾ ಆಯುಕ್ತರ ಕಣ್ಗಾವಲಿನಲ್ಲಿ ನಡೆದ ಈ ಪರೀಕ್ಷಾರ್ಥ ಓಟವು ಕೋಟಾ-ನಾಗ್ಡಾ ರೈಲ್ವೆ ವಿಭಾಗದಲ್ಲಿ ಸಂಚಲನ ಮೂಡಿಸಿದೆ. ಗಂಟೆಗೆ 180 ಕಿ.ಮೀ ವೇಗದಲ್ಲಿ ಈ 'ಮೇಡ್ ಇನ್ ಇಂಡಿಯಾ' ಸ್ಲೀಪರ್ ರೈಲು ಓಡಿ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಈ ಹೊಸ ಪೀಳಿಗೆಯ ರೈಲಿನ ಮುಂದುವರಿದ ತಾಂತ್ರಿಕ ವೈಶಿಷ್ಟ್ಯಗಳು ಜಾಗತಿಕ ಮಟ್ಟದ ರೈಲುಗಳಿಗೆ ಪೈಪೋಟಿ ನೀಡುವಂತಿವೆ.

Scroll to load tweet…

BEML ನಿರ್ಮಿತ ಐಷಾರಾಮಿ ಅರಮನೆ: ಶೀಘ್ರದಲ್ಲೇ ಜನಸಾಮಾನ್ಯರಿಗೆ ಮುಕ್ತ!

ಈ ರೈಲು ಕೇವಲ ವೇಗವಷ್ಟೇ ಅಲ್ಲ, ಐಷಾರಾಮಿ ಸೌಲಭ್ಯಗಳ ಗಣಿಯೇ ಆಗಿದೆ. ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಸಂಪೂರ್ಣ ಹವಾನಿಯಂತ್ರಿತ ವಂದೇ ಭಾರತ್ ಸ್ಲೀಪರ್ ರೈಲಿನ ಎರಡು ರೇಕ್‌ಗಳನ್ನು ಸಿದ್ಧಪಡಿಸಿದೆ. ದೀರ್ಘ ಪ್ರಯಾಣದ ಚೇರ್ ಕಾರ್ ರೈಲುಗಳಿಗಿಂತ ಇದು ಭಿನ್ನವಾಗಿದ್ದು, ಪ್ರಯಾಣಿಕರಿಗೆ ವಿಮಾನದಂತಹ ಅನುಭವವನ್ನು ನೀಡಲು ಸ್ಲೀಪರ್ ಆವೃತ್ತಿಯನ್ನು ವಿನ್ಯಾಸಗೊಳಿಸಲಾಗಿದೆ.

ನಿದ್ರಿಸುತ್ತಾ ಸಾಗುವ ಸುಖಕರ ಪ್ರಯಾಣಕ್ಕೆ ಕ್ಷಣಗಣನೆ!

ವಂದೇ ಭಾರತ್ ಸ್ಲೀಪರ್ ರೈಲಿನ ಈ ಅದ್ಭುತ ಯಶಸ್ಸಿನ ನಂತರ, ರೈಲು ಶೀಘ್ರದಲ್ಲೇ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ. ಈಗಿರುವ ಹಂತ ಹಂತದ ಪರೀಕ್ಷೆಗಳು ಬಹುತೇಕ ಪೂರ್ಣಗೊಂಡಿದ್ದು, ಮೊದಲ ಹಂತದಲ್ಲಿ ಪ್ರಮುಖ ನಗರಗಳ ನಡುವೆ ಈ ಸ್ಲೀಪರ್ ರೈಲು ಓಡಲಿದೆ. ನಿದ್ರಿಸುತ್ತಾ ಹೋದರೆ ಕಣ್ಣು ಬಿಡುವಷ್ಟರಲ್ಲಿ ಗಮ್ಯಸ್ಥಾನ ತಲುಪಿಸುವ ಈ ರೈಲಿಗಾಗಿ ದೇಶದ ಕೋಟ್ಯಂತರ ಜನರು ಕಾತರದಿಂದ ಕಾಯುತ್ತಿದ್ದಾರೆ.