ಜಿಡಿಪಿ ಪ್ರಗತಿ: ಭಾರತ ವಿಶ್ವಕ್ಕೆ ನಂ.1: 2023ರಲ್ಲಿ ಶೇ.7.2ರಷ್ಟು ಪ್ರಗತಿ
ಆರ್ಥಿಕ ಪ್ರಗತಿಯಲ್ಲಿ ನಾಗಾಲೋಟ ಮುಂದುವರೆಸಿರುವ ಭಾರತ 2022-23ನೇ ಸಾಲಿನಲ್ಲಿ ಶೇ.7.2ರಷ್ಟುಜಿಡಿಪಿ ಪ್ರಗತಿ ದಾಖಲಿಸಿದೆ.
ನವದೆಹಲಿ: ಆರ್ಥಿಕ ಪ್ರಗತಿಯಲ್ಲಿ ನಾಗಾಲೋಟ ಮುಂದುವರೆಸಿರುವ ಭಾರತ 2022-23ನೇ ಸಾಲಿನಲ್ಲಿ ಶೇ.7.2ರಷ್ಟುಜಿಡಿಪಿ ಪ್ರಗತಿ ದಾಖಲಿಸಿದೆ. ಇದು ಈ ಹಿಂದಿನ ನಿರೀಕ್ಷೆಗಿಂತ ಅಧಿಕ ಮತ್ತು ವಿಶ್ವದ ಎಲ್ಲಾ ಬೆಳವಣಿಗೆ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಪ್ರಗತಿಗಿಂತ ಹೆಚ್ಚು ಎಂಬುದು ಗಮನಾರ್ಹ. ಈ ಗಮನಾರ್ಹ ಪ್ರಗತಿಯ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎಂಬ ಹಿರಿಮೆಯನ್ನು ಮತ್ತೊಮ್ಮೆ ಭಾರತ ತನ್ನದಾಗಿಸಿಕೊಂಡಿದೆ.
2022-23ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದ ಅಂಕಿ ಅಂಶಗಳು ಬುಧವಾರ ಬಿಡುಗಡೆಯಾಗಿದ್ದು ಅದರನ್ವಯ ಕಡೆಯ ತ್ರೈಮಾಸಿಕದಲ್ಲಿ ಶೇ.6.1ರಷ್ಟುಪ್ರಗತಿ ದಾಖಲಾಗಿದೆ. ಕೃಷಿ (Agriculture), ಉತ್ಪಾದನಾ ವಲಯ, ನಿರ್ಮಾಣ, ಸೇವಾ, ಗಣಿಗಾರಿಕೆ (Mining) ಸೇರಿದಂತೆ ವಿವಿಧ ವಲಯಗಳಲ್ಲಿ ಉತ್ತಮ ಪ್ರಗತಿ ದಾಖಲಾಗಿರುವುದು ಆರ್ಥಿಕತೆಗೆ ಭರ್ಜರಿ ಬಲ ನೀಡಿದೆ. ಪ್ರಸಕ್ತ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್‌ನಲ್ಲಿ ಶೇ.6.2, ಅಕ್ಟೋಬರ್- ಡಿಸೆಂಬರ್‌ನಲ್ಲಿ ಶೇ.4.5ರಷ್ಟುಪ್ರಗತಿ ದಾಖಲಾಗಿತ್ತು. ಆದರೆ ಕಳೆದ ತ್ರೈಮಾಸಿಕದಲ್ಲಿ ಮತ್ತೆ ಆರ್ಥಿಕತೆ ಚಿಗಿತುಕೊಂಡಿರುವುದು, ಒಟ್ಟಾರೆ ಇಡೀ ವರ್ಷದ ಆರ್ಥಿಕ ಪ್ರಗತಿ ದರ ಶೇ.7.2 ಮುಟ್ಟಲು ನೆರವು ನೀಡಿದೆ.
ಜಗತ್ತಿನ ನಂ.4 ಆರ್ಥಿಕ ರಾಷ್ಟ್ರ ಜರ್ಮನಿಗೂ ಹಣ ಸಂಕಷ್ಟ
ಇದೇ ವೇಳೆ ದೇಶದ ಆರ್ಥಿಕತೆ ಕೂಡಾ 3.3 ಲಕ್ಷ ಕೋಟಿ ರು.ಗೆ ತಲುಪಿದ್ದು, ಮುಂದಿನ ಕೆಲ ವರ್ಷಗಳಲ್ಲಿ 5 ಲಕ್ಷ ಕೋಟಿ ಆರ್ಥಿಕತೆ ತಲುಪುವ ಗುರಿಗೆ ಮುನ್ನುಡಿ ಬರೆದಿದೆ.
ದೇಶ- ಜಿಡಿಪಿ ಪ್ರಗತಿ ದರ
- ಭಾರತ ಶೇ.7.2
- ಇಂಡೋನೇಷ್ಯಾ ಶೇ.5.3
- ಚೀನಾ ಶೇ.3
- ಬ್ರೆಜಿಲ್ ಶೇ.2.9
- ಬ್ರಿಟನ್ ಶೇ.4.1
- ಫ್ರಾನ್ಸ್ ಶೇ.2.6
- ಅಮೆರಿಕ ಶೇ.2.1
- ಜರ್ಮನಿ ಶೇ.1.9
- ಜಪಾನ್ ಶೆ.1.1
ಭಾರತ ದೊಡ್ಡ ಮಟ್ಟದಲ್ಲಿ ಬದಲಾಗುತ್ತಿದೆ: ಜಗತ್ತು ಇನ್ಮುಂದೆ ನಮ್ಮನ್ನು ನಿರ್ಲಕ್ಷಿಸಲಾಗಲ್ಲ!