ಭಾರತ ಈಗ ಜಗತ್ತಿನ ಎರಡನೇ ಅತೀದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರ: ರಾಜೀವ್ ಚಂದ್ರಶೇಖರ್
*ಸಂಸತ್ತಿಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು
*ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರ ಭಾರತ
*2022ನೇ ಆರ್ಥಿಕ ಸಾಲಿನಲ್ಲಿ ಭಾರತದಲ್ಲಿ 5,277 ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳ ಉತ್ಪಾದನೆ
ನವದೆಹಲಿ (ಜು.27): ಭಾರತ ಈಗ ಜಗತ್ತಿನ ಎರಡನೇ ಅತೀದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಮಾಹಿತಿ ನೀಡಿದೆ. 2022ನೇ ಆರ್ಥಿಕ ಸಾಲಿನಲ್ಲಿ ಭಾರತದಲ್ಲಿ 5,277 ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳನ್ನು ಉತ್ಪಾದಿಸಲಾಗಿದೆ. ಇನ್ನು 2021ನೇ ಆರ್ಥಿಕ ಸಾಲಿನಲ್ಲಿ 2,334 ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳನ್ನು ಸಿದ್ಧಪಡಿಸಲಾಗಿತ್ತು. ಸರ್ಕಾರದ ಉತ್ಪಾದನೆ ಆಧಾರಿತ ಉತ್ತೇಜಕ ಯೋಜನೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಸರ್ಕಾರ ಹೇಳಿದೆ. 2022ನೇ ಆರ್ಥಿಕ ಸಾಲಿನಲ್ಲಿ ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆ ಮೌಲ್ಯದ ಆಧಾರದಲ್ಲಿ ಎರಡು ಪಟ್ಟು ಹೆಚ್ಚಳವಾಗಿದ್ದು, ಈ ಮೂಲಕ ಭಾರತ ವಿಶ್ವದ ಎರಡನೇ ಅತೀದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿ ಮೂಡಿಬಂದಿದೆ. ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಲಿಖಿತ ಉತ್ತರದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಈ ಮಾಹಿತಿ ನೀಡಿದ್ದಾರೆ. 'ಉತ್ಪಾದನೆ ಆಧಾರಿತ ಉತ್ತೇಜಕ (ಪಿಎಲ್ ಐ) ಯೋಜನೆಯಿಂದ ಪ್ರಸ್ತುತ ಭಾರತ ಪ್ರಮಾಣದ ಆಧಾರದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿ ಬೆಳೆದಿದೆ' ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಭಾರತದಲ್ಲಿ ಉತ್ಪಾದೆಯಾದ ಮೊಬೈಲ್ ಫೋನ್ ಗಳು ಹಾಗೂ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೂಲ ವರ್ಷದ ನಿವ್ವಳ ಹೆಚ್ಚಳ ಮಾರಾಟದ ಮೇಲೆ ಅರ್ಹ ಕಂಪನಿಗಳಿಗೆ ನಿವ್ವಳ ಶೇ. 4ರಿಂದ ಶೇ.6 ರಷ್ಟು ಪ್ರೋತ್ಸಾಹಧನವನ್ನು ಪಿಎಲ್ಐ ಯೋಜನೆ (PLI scheme) ನೀಡುತ್ತಿದೆ. 10 ಮೊಬೈಲ್ ಫೋನ್ ಉತ್ಪಾದಕರು ಹಾಗೂ 6 ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದಕರು ಸೇರಿದಂತೆ ಒಟ್ಟು 16 ಕಂಪನಿಗಳ ಹೆಸರುಗಳನ್ನು ಕೇಂದ್ರ ಸರ್ಕಾರ ಪಿಎಲ್ಐ ಯೋಜನೆ ಪ್ರಯೋಜನ ಪಡೆಯಲು ಅಂತಿಮಗೊಳಿಸಿದೆ.
ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಹಣದ ಪ್ರಮಾಣದ ನಿಖರ ಮಾಹಿತಿಯಿಲ್ಲ: ನಿರ್ಮಲಾ ಸೀತಾರಾಮನ್
2020-21ನೇ ಸಾಲಿನಲ್ಲಿ ಭಾರತದಲ್ಲಿ 30 ಕೋಟಿ ಮೊಬೈಲ್ ಫೋನ್ ಗಳನ್ನು ಉತ್ಪಾದಿಸಲಾಗಿದೆ. 2014-15ನೇ ಸಾಲಿನಲ್ಲಿ ಭಾರತದಲ್ಲಿ 6 ಕೋಟಿ ಮೊಬೈಲ್ ಫೋನ್ ಗಳಷ್ಟೇ ಉತ್ಪಾದನೆಯಾಗಿದ್ದವು ಎಂದು ಸರ್ಕಾರದ ಥಿಂಕ್ ಟ್ಯಾಂಕ್ ನೀತಿ ಆಯೋಗ ತಿಳಿಸಿದೆ. ಇನ್ನು ಇದೇ ಅವಧಿಯಲ್ಲಿ ದೇಶದಲ್ಲಿನ ಮೊಬೈಲ್ ಉತ್ಪಾದನಾ ಘಟಕಗಳ ಸಂಖ್ಯೆ ಎರಡರಿಂದ 200ಕ್ಕೆ ಏರಿಕೆಯಾಗಿದೆ. ಡೆಲೊಟ್ಟೆ ಇತ್ತೀಚಿನ ವರದಿ ಪ್ರಕಾರ ಭಾರತದಲ್ಲಿ ಸ್ಮಾರ್ಟ್ ಫೋನ್ ಗಳಿಗೆ ಬೇಡಿಕೆ 2021ರಲ್ಲಿ 30 ಕೋಟಿ ಇದ್ದು, 2026ರಲ್ಲಿ 40 ಕೋಟಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಅಂದರೆ ಸಮಗ್ರ ವಾರ್ಷಿಕ ಬೆಳವಣಿಗೆ ದರ (CAGR) ಶೇ.6 ರಷ್ಟಿರಲಿದೆ. 'ಈ ಅಧಿಕ ಬೇಡಿಕೆ 5ಜಿ ಬಿಡುಗಡೆಯಾದ ಮೇಲೆ ಸೃಷ್ಟಿಯಾಗಲಿದೆ, 2026ರ ವೇಳೆಗೆ ಕೇವಲ ಇದರಿಂದಲೇ ಮೊಬೈಲ್ ಫೋನ್ ಗಳಿಗೆ ಶೇ. 80ರಷ್ಟು ಬೇಡಿಕೆ ಉಂಟಾಗಲಿದೆ' ಎಂದು ಡೆಲೊಟ್ಟೆ ಅಭಿಪ್ರಾಯಪಟ್ಟಿದೆ.
ನೀವು ಉಳಿತಾಯ ಖಾತೆ ಹೊಂದಿದ್ದೀರಾ? ಹಾಗಾದ್ರೆ 10,000ರೂ. ತೆರಿಗೆ ಉಳಿಸಬಹುದು, ಹೇಗೆ ? ಇಲ್ಲಿದೆ ಮಾಹಿತಿ
ಭಾರತದಲ್ಲಿ ಮೊಬೈಲ್ ಫೋನ್ ಗಳ ದೇಶೀಯ ಉತ್ಪಾದನೆ ಹೆಚ್ಚಳಗೊಂಡ ಪರಿಣಾಮ 2022ನೇ ಆರ್ಥಿಕ ಸಾಲಿನಲ್ಲಿ ಭಾರತದ ಮೊಬೈಲ್ ಫೋನ್ ಆಮದು ಶೇ.33ರಷ್ಟು ಕುಸಿತಗೊಂಡಿದೆ ಎಂದು ಕ್ರಿಸಿಲ್ (CRISIL) ತಿಳಿಸಿದೆ. ಮೊಬೈಲ್ ಉತ್ಪಾದನೆ ಜೊತೆಗೆ ಭಾರತ ಟಿವಿ (TV), ಲ್ಯಾಪ್‌ಟಾಪ್ (Laptop), ಐಟಿ ಹಾರ್ಡ್‌ವೇರ್ (IT hardware), LED ಲೈಟ್ (LED light), ಎಲೆಕ್ಟ್ರಾನಿಕ್ ಕಾಂಪೋನೆಂಟ್ಸ್ (Electronic components), ಟೆಲಿಕಾಂ ಉತ್ಪನ್ನಗಳನ್ನು (Telecom products) ಉತ್ಪಾದಿಸುತ್ತಿದೆ. ಮುಂದಿನ 5 ವರ್ಷದಲ್ಲಿ ಭಾರತದಲ್ಲಿನ ದೇಸಿ ಉತ್ಪನ್ನ ಉತ್ಪಾದನೆ 65 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದಿಂದ 180 ಬಿಲಿಯನ್ ಅಮೆರಿಕನ್- ಡಾಲರ್‌ಗೆ ಏರಿಕೆಯಾಗಲಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.