ವಾಷಿಂಗ್ಟನ್‌(ಜ.28): ಕೃಷಿ ಕಾಯ್ದೆಗಳ ವಿರುದ್ಧ ರೈತರು ಭಾರಿ ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ‘ಭಾರತದಲ್ಲಿ ಇತ್ತೀಚೆಗೆ ಜಾರಿಗೊಳಿಸಿದ ಕೃಷಿ ಕಾಯ್ದೆಗಳು ರೈತರ ಆದಾಯ ಹೆಚ್ಚಿಸುವ ಶಕ್ತಿ ಹೊಂದಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

‘ಭಾರತದ ಕೃಷಿ ಕ್ಷೇತ್ರಕ್ಕೆ ಸುಧಾರಣೆಗಳ ಅಗತ್ಯವಿದೆ. ಈಗ ಜಾರಿಗೊಳಿಸಿರುವ ಸುಧಾರಣೆಗಳು ಮಾರುಕಟ್ಟೆವಿಭಾಗಕ್ಕೆ ಸಂಬಂಧಪಟ್ಟಿವೆ. ಇವು ರೈತರಿಗೆ ಲಭಿಸುವ ಮಾರುಕಟ್ಟೆಗಳ ಆಯ್ಕೆಯನ್ನು ವಿಸ್ತಾರಗೊಳಿಸುತ್ತವೆ. ಅದರಿಂದಾಗಿ ರೈತರಿಗೆ ಕೇವಲ ಮಂಡಿಗಳಲ್ಲಿ ಮಾತ್ರವಲ್ಲದೆ ಎಲ್ಲಿ ಬೇಕಾದರೂ ಉತ್ಪನ್ನಗಳನ್ನು ಮಾರಲು ಅವಕಾಶ ಸಿಗುತ್ತದೆ.

ಹೀಗಾಗಿ ರೈತರ ಆದಾಯ ಹೆಚ್ಚಲು ಸಾಧ್ಯವಿದೆ. ಆದರೆ, ಯಾವುದೇ ಸುಧಾರಣೆ ಜಾರಿಗೆ ತಂದಾಗಲೂ ಅದರಿಂದ ಸಂಕಷ್ಟಕ್ಕೆ ಸಿಲುಕಬಹುದಾದ ಒಂದು ವರ್ಗವಿರುತ್ತದೆ. ಅಂತಹ ರೈತವರ್ಗಕ್ಕೆ ಸಾಮಾಜಿಕ ಭದ್ರತೆ ಒದಗಿಸಬೇಕು’ ಎಂದು ಐಎಂಎಫ್‌ನ ಮೈಸೂರು ಮೂಲದ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್‌ ಹೇಳಿದ್ದಾರೆ.