ನವದೆಹಲಿ[ನ.16]: ಔಪಚಾರಿಕ ವಲಯದ ನೌಕರರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ‘ಒಂದೇ ದೇಶ-ಒಂದೇ ವೇತನ ದಿನ’ ಎಂಬ ವ್ಯವಸ್ಥೆಯನ್ನು ಆರಂಭಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಹೇಳಿದ್ದಾರೆ.

ಶುಕ್ರವಾರ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ಕೆಲಸಗಾರರಿಗೆ ಸಕಾಲಕ್ಕೆ ವೇತನ ದೊರಕುವಂತಾಗಲು ಇಡೀ ಭಾರತಕ್ಕೆ ಒಂದೇ ಮಾಸಿಕ ವೇತನ ದಿನಾಂಕ ಇರಬೇಕು. ಅದು ಯಾವುದೇ ವಲಯವಾಗಿರಲಿ ಒಂದೇ ದಿನ ವೇತನ ದೊರಕುವಂತಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಕಾನೂನು ರೂಪಿಸಲು ಹಾಗೂ ಅದನ್ನು ಪಾಸು ಮಾಡಿಸಲು ಆಸಕ್ತಿ ತೋರಿಸಿದ್ದಾರೆ’ ಎಂದರು.

‘ಇದೇ ವೇಳೆ ಯಾವುದೇ ವಲಯವಿರಲಿ, ನೌಕರರಿಗೆ ಇಷ್ಟುಕನಿಷ್ಠ ವೇತನ ಇರಲೇಬೇಕು ಎಂದು ಕೂಡ ನಾವು ಚಿಂತನೆ ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದರು.

‘ನೌಕರರ ವೃತ್ತಿ ಸುರಕ್ಷತೆ, ಆರೋಗ್ಯ ಹಾಗೂ ಸೇವಾ ನಿಯಮಗಳ ಸಂಹಿತೆ ಹಾಗೂ ವೇತನ ಸಂಹಿತೆ (ಒಎಚ್‌ಎಸ್‌ ಕೋಡ್‌) ಜಾರಿಗೊಳಿಸುವ ಪ್ರಕ್ರಿಯೆ ನಡೆದಿದೆ. ಸಂಸತ್ತು ಈಗಾಗಲೇ ಇದನ್ನು ಅಂಗೀಕರಿಸಿದೆ’ ಎಂದು ಗಂಗ್ವಾರ್‌ ಹೇಳಿದರು.

ಒಎಚ್‌ಎಸ್‌ ಸಂಹಿತೆಯು 13 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಲಿದೆ. ಇದು ನೌಕರರ ಸುರಕ್ಷತೆ, ಸೇವಾ ಭದ್ರತೆ ಹಾಗೂ ಆರೋಗ್ಯ ವಿಷಯಗಳನ್ನು ಏಕೀಕೃತಗೊಳಿಸಲಿದೆ. ನೌಕರರಿಗೆ ಕಂಪನಿಯು ನೇಮಕಾತಿ ಪತ್ರ ನೀಡಲೇಬೇಕು. ವಾರ್ಷಿಕ ಉಚಿತ ವೈದ್ಯಕೀಯ ತಪಾಸಣೆ ನಡೆಸಬೇಕು ಎಂಬ ನಿಯಮಗಳೂ ಇದರಲ್ಲಿವೆ.