ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆ: ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ
ಜೋಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರ ಕಳೆದ 9 ವರ್ಷಗಳಲ್ಲಿ ಕೈಗೊಂಡ ವಿವಿಧ ಸುಧಾರಣಾ ಕ್ರಮಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಜೋಹಾನ್ಸ್ ಬರ್ಗ್ (ಆ.23): ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಜಗತ್ತಿನ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಾಗಿದ್ದು, ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಮೂಡಿಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೋಹಾನ್ಸ್ ಬರ್ಗ್ ನಲ್ಲಿ ಬಿಕ್ಸ್ ಉದ್ಯಮ ವೇದಿಕೆ ನಾಯಕರ ಮಾತುಕತೆಯಲ್ಲಿ ಪಾಲ್ಗೊಂಡ ಪ್ರಧಾನಿ, ತಮ್ಮ ಸರ್ಕಾರ ಕೈಗೊಂಡ 'ಮಿಷನ್ ಮೋಡ್' ಸುಧಾರಣೆಗಳ ಪರಿಣಾಮವಾಗಿ ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಜಾಗತಿಕ ಪೂರೈಕೆ ಸರಪಳಿಗಳಲ್ಲಿ ನಂಬಿಕೆ ಹಾಗೂ ಪ್ರಾಮಾಣಿಕತೆ ಹೆಚ್ಚಬೇಕು ಎಂದು ಕರೆ ನೀಡಿದ್ದಾರೆ. ಇನ್ನು ನವದೆಹಲಿಯಲ್ಲಿ ನಡೆಯಲಿರುವ ಜಿ20 ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಮೋದಿ ಹಾಗ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವೆ ಈ ಸಮ್ಮೇಳನದಲ್ಲಿ ಮಾತುಕತೆ ನಡೆಯುವ ನಿರೀಕ್ಷೆಯಿದೆ. ಇಂದು (ಆ.23) ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗುವ ಕಾರಣ ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸೋದಿಲ್ಲ ಎಂದು ಹೇಳಲಾಗಿತ್ತು. ಆದರೆ, ದಕ್ಷಿಣ ಆಫ್ರಿಕಾದ ಅಧ್ಯಕ್ಷರ ಮನವಿಯ ಬಳಿಕ ಪ್ರಧಾನಿ ಮನಸ್ಸು ಬದಲಾಯಿಸಿ ಶೃಂಗಸಭೆಗೆ ತೆರಳಿದ್ದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಒಂದು ದಿನ ಮೊದಲೇ ಜೋಹಾನ್ಸ್ ಬರ್ಗ್ ಗೆ ತೆರಳಿದ್ದರು. ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕೆ ದೋವಲ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಮಾತುಕತೆ ನಡೆದಿರುವ ಬೆನ್ನಲ್ಲೇ ಮೋದಿ ಹಾಗೂ ಜಿನ್ ಪಿಂಗ್ ನಡುವೆ ಮಾತುಕತೆ ನಡೆಯುವ ಸಾಧ್ಯತೆಯಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಇರಾನ್ ಸೇರಿದಂತೆ ಕೆಲವು ರಾಷ್ಟ್ರಗಳ ನಾಯಕರ ಜೊತೆಗೆ ಶೃಂಗಸಭೆಯ ಬಿಡುವಿನ ವೇಳೆಯಲ್ಲಿ ಮಾತುಕತೆ ನಡೆಸೋದಾಗಿ ತಿಳಿಸಿದ್ದಾರೆ.
ಜೋಹಾನ್ಸ್ ಬರ್ಗ್ ನಲ್ಲಿ ಸಮ್ಮೇಳನದ ಮೊದಲ ದಿನ ಮಾತನಾಡಿದ ಮೋದಿ 'ಜಗತ್ತಿನಲ್ಲಿ ಇಂದು ಭಾರತ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಮೂಡಿಬರಲಿದೆ' ಎಂದು ತಿಳಿಸಿದ್ದರು. ಬ್ರೆಜಿಲ್ ಹಾಗೂ ರಷ್ಯಾದ ಅಧ್ಯಕ್ಷರ ಬಳಿಕ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಕಳೆದ 9 ವರ್ಷಗಳಲ್ಲಿ ಅವರ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳನ್ನು ಪ್ರಸ್ತಾಪಿಸಿದರು ಕೂಡ.
ಭಾರತ ಜಗತ್ತಿನ ಮೂರನೇ ಅತೀದೊಡ್ಡ ಸ್ಟಾರ್ಟ್ ಅಪ್ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ 100ಕ್ಕೂ ಅಧಿಕ ಯುನಿಕಾರ್ನ್ ಗಳಿವೆ ಎಂದು ಅವರು ತಿಳಿಸಿದ್ದಾರೆ. ಇನ್ನು ಉದ್ಯಮವನ್ನು ಅಭಿವೃದ್ಧಿಪಡಿಸಲು ಭಾರತ ಕೈಗೊಂಡ ವಿವಿಧ ಸುಧಾರಣೆಗಳನ್ನು ಪ್ರಧಾನಿ ಈ ಸಂದರ್ಭದಲ್ಲಿ ಹೈಲೈಟ್ ಮಾಡಿದ್ದರು. ಸಾಮಾಜಿಕ ಹಾಗೂ ಆರ್ಥಿಕ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಆಧಾರಿತ ಪರಿಹಾರಗಳು ಸೇರಿದಂತೆ ವಿವಿಧ ಕ್ರಮಗಳನ್ನು ಅವರು ಕೈಗೊಂಡಿದ್ದರು. ಇನ್ನು ಮೋದಿ ಬ್ರಿಕ್ಸ್ ಉದ್ಯಮ ನಾಯಕರನ್ನು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದರು ಕೂಡ.
ಭಾರತೀಯ ವಿದ್ಯಾರ್ಥಿಗಳಿಗೆ 5 ವರ್ಷದ ಶೆಂಜೆನ್ ವೀಸಾ ನೀಡಲಿದೆ ಫ್ರಾನ್ಸ್ ಸರ್ಕಾರ; ಶೀಘ್ರದಲ್ಲಿಆಯ್ಕೆ ಪ್ರಕ್ರಿಯೆ
ಬ್ರಿಕ್ಸ್ ಶೃಂಗಸಭೆಯ ಬಳಿಕ ಆಗಸ್ಟ್ 25 ರಂದು ಪ್ರಧಾನಿ ನರೇಂದ್ರ ಮೋದಿ ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಅವರ ಆಹ್ವಾನದ ಮೇರೆಗೆ ಗ್ರೀಸ್ ದೇಶಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಗ್ರೀಸ್‌ಗೆ ಭೇಟಿ ನೀಡುತ್ತಿರುವುದು ಇದು ಮೊದಲ ಬಾರಿ ಆಗಿರಲಿದೆ.