ಏರುತ್ತಿರುವ ಅಕ್ಕಿ ಬೆಲೆಗೆ ಕಡಿವಾಣ; ನುಚ್ಚಕ್ಕಿ ರಫ್ತು ನಿಷೇಧ, ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ಶೇ.20 ಸುಂಕ
*ಮಳೆ ಅಭಾವದಿಂದ ತಗ್ಗಿದ ಅಕ್ಕಿ ಉತ್ಪಾದನೆ
*ಕಳೆದ ಒಂದು ವಾರದಲ್ಲಿ ದೇಶದಲ್ಲಿ ಅಕ್ಕಿ ಬೆಲೆಯಲ್ಲಿ ಶೇ.5ರಷ್ಟು ಏರಿಕೆ
*2021ರಲ್ಲಿ 21.5 ಮಿಲಿಯನ್ ಟನ್ ಅಕ್ಕಿ ರಫ್ತು ಮಾಡಿದ್ದ ಭಾರತ
ನವದೆಹಲಿ( ಸೆ.9): ಅಕ್ಕಿ ಬೆಲೆಯಲ್ಲಿ ಏರಿಕೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಗುರುವಾರ ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ಶೇ.20ರಷ್ಟು ಸುಂಕ ವಿಧಿಸಿದೆ. ಅಲ್ಲದೆ, ನುಚ್ಚಕ್ಕಿಯ ರಫ್ತನ್ನು ನಿಷೇಧಿಸಿದೆ. ಬಾಂಗ್ಲಾದೇಶ ಅಕ್ಕಿ ಮೇಲಿನ ಆಮದು ಸುಂಕ ಕಡಿತಗೊಳಿಸಿದ ಬೆನ್ನಲ್ಲೇ ಭಾರತದಲ್ಲಿ ಕಳೆದ ಒಂದು ವಾರದಲ್ಲಿ ಅಕ್ಕಿ ಬೆಲೆಯಲ್ಲಿ ಶೇ.5ರಷ್ಟು ಏರಿಕೆಯಾಗಿದೆ. ಒಂದೆಡೆ ವಿದೇಶಗಳಿಗೆ ಅಕ್ಕಿ ರಫ್ತು ಹೆಚ್ಚುವ ಭಯವಾದ್ರೆ. ಇನ್ನೊಂದೆಡೆ ಮಳೆ ಅಭಾವದಿಂದ ಈ ಭಾರೀ ಅಕ್ಕಿ ಉತ್ಪಾದನೆ ತಗ್ಗಿದೆ. ಇದು ದೇಶದಲ್ಲಿ ಅಕ್ಕಿ ಲಭ್ಯತೆಯನ್ನು ತಗ್ಗಿಸುವ ಜೊತೆಗೆ ಬೆಲೆಯೇರಿಕೆಗೆ ಕಾರಣವಾಗಬಹುದು ಎಂಬ ಭಯದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ವಿತ್ತ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದೆ. ಈ ಸುಂಕ ಬಾಸುಮತಿ ಹಾಗೂ ಕುಚ್ಚಲಕ್ಕಿಗೆ ಅನ್ವಯಿಸೋದಿಲ್ಲ. ಭಾರತ ಕೂಡ ಜಗತ್ತಿನ ಅತೀದೊಡ್ಡ ಅಕ್ಕಿ ರಫ್ತು ರಾಷ್ಟ್ರಗಳಲ್ಲಿ ಒಂದಾಗಿದ್ದು, 2021ರಲ್ಲಿ ಭಾರತದ ಅಕ್ಕಿ ರಫ್ತು 21.5 ಮಿಲಿಯನ್ ಟನ್ ಗೆ ತಲುಪಿತ್ತು. ಇದು ಉಳಿದ ನಾಲ್ಕು ಅತೀದೊಡ್ಡ ಅಕ್ಕಿ ರಫ್ತು ರಾಷ್ಟ್ರಗಳಾದ ಥೈಲ್ಯಾಂಡ್, ವಿಯೆಟ್ನಾಂ, ಪಾಕಿಸ್ತಾನ ಹಾಗೂ ಅಮೆರಿಕದ ಒಟ್ಟು ಶಿಪ್ಪ್ ಮೆಂಟ್ ಗಿಂತ ಹೆಚ್ಚಿದೆ.
ದೇಶದಲ್ಲಿ ಈ ವರ್ಷ ಸರಾಸರಿ ಮಳೆ ಕಡಿಮೆಯಾಗಿರುವ ಕಾರಣ ಅತೀಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯಗಳಾದ ಪಶ್ಚಿಮ ಬಂಗಾಳ, ಬಿಹಾರ ಹಾಗೂ ಉತ್ತರ ಪ್ರದೇಶ ಈಗಾಗಲೇ ಅಕ್ಕಿ ಉತ್ಪಾದನೆ ಬಗ್ಗೆ ಈಗಾಗಲೇ ಕಳವಳ ವ್ಯಕ್ತಪಡಿಸಿವೆ. ವಿವಿಧ ಬಗೆಯ ಅಕ್ಕಿ ರಫ್ತಿಗೆ ಸಂಬಂಧಿಸಿ ಪರಿಷ್ಕೃತ ತೆರಿಗೆ ದರಗಳು ಇಂದಿನಿಂದಲೇ (ಸೆ.9) ಜಾರಿಗೆ ಬರಲಿವೆ. ಆದರೆ, ಬಾಸುಮತಿ ಹಾಗೂ ಕುಚ್ಚಲಕ್ಕಿಯನ್ನು ಸರ್ಕಾರ ರಫ್ತು ಸುಂಕದಿಂದ ಹೊರಗಿಟ್ಟಿದೆ. ಇನ್ನೊಂದೆಡೆ ಕಂದು ಹಾಗೂ ಬಿಳಿ ಅಕ್ಕಿಗೆ ಪರಿಷ್ಕೃತ ದರ ಅನ್ವಯಿಸಲಿದೆ. ಇವು ಭಾರತದ ಒಟ್ಟು ರಫ್ತಿನ ಸುಮಾರು ಶೇ.60ರಷ್ಟಿದೆ.
ಭಾರತ ವಿಶ್ವದ ಒಟ್ಟು ಅಕ್ಕಿ ಪೂರೈಕೆಯಲ್ಲಿ ಶೇ.40ಷ್ಟು ಪಾಲು ಹೊಂದಿದೆ. ಅಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲಿ ಥೈಲ್ಯಾಂಡ್, ವಿಯೆಟ್ನಾಂ, ಪಾಕಿಸ್ತಾನ ಹಾಗೂ ಮಯನ್ಮಾರ್ ಜೊತೆಗೆ ಸ್ಪರ್ಧಿಸುತ್ತಿದೆ. ಈ ವರ್ಷದ ಪ್ರಾರಂಭದಲ್ಲಿ ಭಾರತ ಗೋಧಿ ರಫ್ತನ್ನು ನಿಷೇಧಿಸಿದೆ. ಅಲ್ಲದೆ, ಸಕ್ಕರೆ ಶಿಪ್ಪ್ ಮೆಂಟ್ ಅನ್ನು ಕೂಡ ನಿರ್ಬಂಧಿಸಿದೆ. ಈ ಸುಂಕದಿಂದ ಭಾರತದ ಅಕ್ಕಿ ಶಿಪ್ಪ್ ಮೆಂಟ್ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿಲ್ಲ. ಹೀಗಾಗಿ ಖರೀದಿದಾರರು ಥೈಲ್ಯಾಂಡ್ ಹಾಗೂ ವಿಯೆಟ್ನಾಂಗೆ ಶಿಫ್ಟ್ ಆಗಲಿದ್ದಾರೆ ಎನ್ನೋದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.
ಹಣದುಬ್ಬರ ತಗ್ಗಿಸೋ ಹೊಣೆಗಾರಿಕೆ ಬರೀ ಕೇಂದ್ರದ್ದಲ್ಲ, ರಾಜ್ಯಗಳ ಪಾಲೂ ಇದೆ: ನಿರ್ಮಲಾ ಸೀತಾರಾಮನ್
ಒಂದೇ ವಾರದಲ್ಲಿ ಏರಿಕೆ ಕಂಡಿದ್ದ ಅಕ್ಕಿ ಬೆಲೆ
ಭಾರತದಲ್ಲಿ ಅಕ್ಕಿ ಬೆಲೆಯಲ್ಲಿ ಕಳೆದ ಒಂದು ವಾರದಲ್ಲಿ ಸುಮಾರು ಶೇ.5ರಷ್ಟು ಹೆಚ್ಚಳವಾಗಿದೆ. ನೆರೆಯ ಬಾಂಗ್ಲಾದೇಶ ಅಕ್ಕಿ ಮೇಲಿನ ಆಮದು ಸುಂಕವನ್ನು ಇನ್ನೊಮ್ಮೆ ಕಡಿತಗೊಳಿಸಿದ್ದು, ಶೇ.25ರಿಂದ ಶೇ.15.25ಕ್ಕೆ ಇಳಿಕೆ ಮಾಡಿದೆ. ಆಮದು ಸುಂಕದಲ್ಲಿನ ಇಳಿಕೆ ಬಾಂಗ್ಲಾದೇಶದಿಂದ ಅಕ್ಕಿ ಬೇಡಿಕೆ ಹೆಚ್ಚಿಸಲಿದೆ ಎಂಬ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಬ್ಯಾಂಕ್‌ಗಳಿಗೆ 23000 ಕೋಟಿ ಮರಳಿಸುವಲ್ಲಿ ಇಡಿ ಯಶಸ್ವಿ
ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಬಿಹಾರದಿಂದ ಬಾಂಗ್ಲಾದೇಶಕ್ಕೆ ಅಕ್ಕಿ ರಫ್ತು ಮಾಡಲಾಗುತ್ತದೆ. ಸಂಭಾ ಮನ್ಸೂರಿ, ಸೋನಮ್ ಹಾಗೂ ಕೋಲಂ ಅಕ್ಕಿ ತಳಿಗಳನ್ನು ಬಾಂಗ್ಲಾದೇಶ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಈ ತಳಿಯ ಅಕ್ಕಿಗಳ ಬೆಲೆ ಕಳೆದ ಒಂದು ವಾರದಲ್ಲಿ ಶೇ.3-4ರಷ್ಟು ಏರಿಕೆಯಾಗಿದೆ. ಪಶ್ಚಿಮ ಬಂಗಾಳವು ಹತ್ತಿರವಿರುವ ಕಾರಣ ಬಾಂಗ್ಲಾದೇಶ ಅಲ್ಲಿಂದ ಮಿನಿಕೆಟ್ ಅಕ್ಕಿಯನ್ನು ಖರೀದಿಸುತ್ತದೆ. ಈ ಅಕ್ಕಿ ಬೆಲೆಯಲ್ಲಿ ಶೇ.5ರಷ್ಟು ಏರಿಕೆಯಾಗಿದೆ. ಚೀನಾದ ಬಳಿಕ ಭಾರತ ವಿಶ್ವದ ಎರಡನೇ ಅತೀದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿದೆ.