ನವದೆಹಲಿ(ನ.6): ಅಮೆರಿಕ ಇತ್ತೀಚಿಗೆ ಭಾರತದ ವಸ್ತುಗಳ ಮೇಲೆ ಆಮದು ತೆರಿಗೆ ರಹಿತ ರಿಯಾಯ್ತಿ ರದ್ದುಪಡಿಸಿದ್ದಕ್ಕೆ ಭಾರತ ತೀವ್ರವಾಗಿ ಸಿಡಿಮಿಡಿಗೊಂಡಿದೆ. ಹೀಗಾಗಿ ಅಮೆರಿಕಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಭಾರತ ಅಮೆರಿಕದ ಬದ್ಧ ವೈರಿ ಚೀನಾ ಜೊತೆ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.

ಚೀನಾದೊಂದಿಗೆ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಸುಧಾರಣೆ ಹಾಗೂ ಜಂಟಿ ಸಂಶೋಧನಾ ನಡೆಸುವ ಒಪ್ಪಂದಕ್ಕೆ ಭಾರತ ಮುಂದಾಗಿದೆ. ಉಭಯ ರಾಷ್ಟ್ರಗಳ ಆರ್ಥಿಕ ಸಹಕಾರ ವೃದ್ಧಿಯ ದೃಷ್ಟಿಯಿಂದ ಡಬ್ಲ್ಯುಟಿಒ ನೀತಿಯ ಸುಧಾರಣೆ, ನಗರೀಕರಣ ಸೇರಿದಂತೆ ಸಂಶೋಧನೆಯಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುವ ಇಂಗಿತಕ್ಕೆ ಎರಡೂ ರಾಷ್ಟ್ರಗಳೂ ಸಮ್ಮಿತಿ ಸೂಚಿಸಿವೆ. 

ವಿವಿಧ ವಲಯಗಳಲ್ಲಿ ಹೂಡಿಕೆಯನ್ನು ಸುಲಭಗೊಳಿಸಲು ವಿವಾದಿತ ನೀತಿಗಳನ್ನು ಕೈಬಿಟ್ಟು ಅನುಕೂಲಕರವಾದ ಸಮನ್ವಯ ನೀತಿಯ ಅವಶ್ಯಕತೆ ಇದೆ ಎಂದು ಭಾರತ-ಚೀನಾ ಜಂಟಿ ಹೇಳಿಕೆಯನ್ನು ಈಗಾಗಲೇ ಬಿಡುಗಡೆ ಮಾಡಿದೆ.

ಇತ್ತೀಚಿಗೆ ಮುಂಬೈನಲ್ಲಿ ನಡೆದ ಭಾರತದ ನೀತಿ ಆಯೋಗ ಮತ್ತು ಚೀನಾದ ಅಭಿವೃದ್ಧಿ ಸಂಶೋಧನಾ ಕೇಂದ್ರದ (ಡಿಆರ್​ಸಿ) 4ನೇ ಉಪನ್ಯಾಸದ ಸಮಾರೋಪ ಸಮಾರಂಭದಲ್ಲಿ, ಈ ಒಪ್ಪಂದಕ್ಕೆ ಸಹಮತ ಸೂಚಿಸಲಾಗಿದೆ. ಚೀನಾ ನಿಯೋಗದ ಅಧ್ಯಕ್ಷತೆಯನ್ನು ಡಿಆರ್​ಸಿ ಅಧ್ಯಕ್ಷ ಲಿ ವೀ ಹಾಗೂ ಭಾರತ ನಿಯೋಗದ ಅಧ್ಯಕ್ಷತೆಯನ್ನು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ವಹಿಸಿದ್ದರು. 

ಭಾರತ- ಚೀನಾ ಜಂಟಿಯಾಗಿ ಡಿಜಿಟಲ್​ ಅರ್ಥವ್ಯಸ್ಥೆಗೆ ಒತ್ತು ನೀಡುವ ಮೂಲಕ ತಂತ್ರಜ್ಞಾನಗಳನ್ನು ಇನ್ನಷ್ಟು ಡಿಜಿಟಲೀಕರಣಗೊಳಿಸಿ ಸದೃಢ ಆರ್ಥಿಕ ಒಪ್ಪಂದ ರೂಪಿಸುವ ಇರಾದೆಯನ್ನು ಎರಡೂ ರಾಷ್ಟ್ರಗಳು ಹೊಂದಿವೆ.