* ಪ್ರಮುಖ ಕ್ಷೇತ್ರಗಳನ್ನು ಸರ್ಕಾರವೇ ನಿರ್ವಹಿಸುವುದರಿಂದ ದೀರ್ಘಾವಧಿಯಲ್ಲಿ ಲಾಭ ಆಗಲ್ಲ* ಸಾರ್ವಜನಿಕ ಆಸ್ತಿ ನಿರ್ವಹಣೆಯ ಪರಿಕಲ್ಪನೆ ಸಾಕಷ್ಟು ಬದಲಾಗಿದೆ* ಕೇಂದ್ರ ಸರ್ಕಾರದ ಉದ್ದಿಮೆಗಳ ಬಾಂಡ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ
ಬೆಂಗಳೂರು(ಜೂ.12): ಬಂಡವಾಳ ಹಿಂತೆಗೆತದ ಮೂಲಕ ಸಂಸ್ಥೆಗಳು ವೃತ್ತಿಪರ, ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ಬಂಡವಾಳ ಹಿಂತೆಗೆಯುವ ಮೂಲಕ ಆ ಉದ್ದಿಮೆಗಳು ಹೆಚ್ಚು ಬಂಡವಾಳ ಸೆಳೆದು ದಕ್ಷವಾಗಿ ಕಾರ್ಯನಿರ್ವಹಿಸುವ ವಾತಾವರಣ ಸೃಷ್ಟಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಜೆ.ಎನ್.ಟಾಟಾ ಅಡಿಟೋರಿಯಂನಲ್ಲಿ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ದಿಪಂ)ಯು ದೇಶದ 75 ನಗರಗಳಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ‘ಮಾರುಕಟ್ಟೆಗಳ ಮೂಲಕ ಸಂಪತ್ತು ಸೃಷ್ಟಿ’ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
3 ಕೋವಿಡ್ ಅಲೆ ಹೊರತೂ ಭಾರತದ ಆರ್ಥಿಕತೆ ಪುಟಿದೆದ್ದಿದೆ: ಅಮೆರಿಕ ಪ್ರಶಂಸೆ
1999ರಿಂದ 2004ರ ಅವಧಿಯಲ್ಲಿ ಬಂಡವಾಳ ಹಿಂತೆಗೆದುಕೊಂಡ ಸಂಸ್ಥೆಗಳನ್ನು 20 ವರ್ಷಗಳ ಬಳಿಕ ಗಮನಿಸಿದರೆ ಅವುಗಳು ಉತ್ತಮ ಸಾಧನೆ ಮಾಡಿರುವುದು ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತದ ಪ್ರಕ್ರಿಯೆಯನ್ನು ಮುಂದುವರಿಸಲಿದೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಆರಂಭದ ಮೂರು ದಶಕದಲ್ಲಿ ಸರ್ಕಾರವೇ ಅತ್ಯಂತ ಪ್ರಮುಖ ಕ್ಷೇತ್ರಗಳನ್ನು ನಿರ್ವಹಣೆ ಮಾಡುತ್ತಿತ್ತು. ಈ ಕಾರಣಕ್ಕಾಗಿ ಆಣೆಕಟ್ಟು, ವಿದ್ಯುತ್ ಉತ್ಪಾದನಾ ಘಟಕಗಳು ಸೇರಿದಂತೆ ಅನೇಕ ವಲಯಗಳನ್ನು ಸರ್ಕಾರವೇ ನಿಭಾಯಿಸುತ್ತಿತ್ತು. ಸರ್ಕಾರಕ್ಕೆ ಇದರಿಂದ ದೀರ್ಘಕಾಲೀನ ಲಾಭ ಆಗುತ್ತಿರಲಿಲ್ಲ. ಹಾಗೆಯೇ ಖಾಸಗಿ ಸಂಸ್ಥೆಗಳಿಂದ ಬಂಡವಾಳವು ಅಷ್ಟೊಂದು ಬರುತ್ತಿರಲಿಲ್ಲ. ಆದರೆ 1991ರಲ್ಲಿ ಭಾರತ ಮುಕ್ತ ಆರ್ಥಿಕತೆಯನ್ನು ಸ್ವೀಕರಿಸಿದ ಬಳಿಕ ಚಿತ್ರಣ ಬದಲಾಯಿತು ಎಂದು ಹೇಳಿದರು.
ಆರ್ಥಿಕ ದಿವಾಳಿತನ ತಪ್ಪಿಸಲು ತೆರಿಗೆ ದ್ವಿಗುಣಗೊಳಿಸಿದ ಪಾಕಿಸ್ತಾನದ ಹೊಸ ಬಜೆಟ್
2021ರ ಬಜೆಟ್ ಬಳಿಕ ವ್ಯೂಹಾತ್ಮಕವಾಗಿ ಪ್ರಮುಖವಾದ ವಲಯಗಳನ್ನು ಬಿಟ್ಟು ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ಸರ್ಕಾರ ತನ್ನ ಬಂಡವಾಳವನ್ನು ನಿಧಾನವಾಗಿ ಹಿಂತೆಗೆದುಕೊಳ್ಳುವ ತೀರ್ಮಾನಕ್ಕೆ ಬಂದಿದೆ. ಈಗ ಸರ್ಕಾರ ಕೋರ್ ವಲಯದಲ್ಲಿ ತನ್ನ ಇರುವಿಕೆಯನ್ನು ಕಾಪಾಡಿಕೊಂಡು ಅಲ್ಲೂ ಖಾಸಗಿ ಉದ್ದಿಮೆಗೆ ಅವಕಾಶ ಮಾಡಿಕೊಟ್ಟಿದೆ. ಬಾಹ್ಯಾಕಾಶ, ಅಣುಶಕ್ತಿಯಂತಹ ಕ್ಷೇತ್ರಗಳಲ್ಲಿಯೂ ಖಾಸಗಿ ಉದ್ದಿಮೆಗಳು ಪಾಲು ಪಡೆಯುತ್ತಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ತಿ ನಿರ್ವಹಣೆಯ ಪರಿಕಲ್ಪನೆ ಸಾಕಷ್ಟು ಬದಲಾಗಿದೆ. ವ್ಯೂಹಾತ್ಮಕ ಬಂಡವಾಳ ಹಿಂತೆಗೆತದ ಜೊತೆಗೆ ಸಂಸ್ಥೆಗಳನ್ನು ವೃತ್ತಿಪರವಾಗಿ ನಿರ್ವಹಿಸುವುದು, ಈಕ್ವಿಟಿ ಬಂಡವಾಳ ಸೆಳೆಯುವುದು ಪ್ರಮುಖ ಅಂಶವಾಗಿದೆ. ಬಂಡವಾಳ ಹಿಂತೆಗೆಯುವುದು ಎಂದರೆ ಸಂಸ್ಥೆಯನ್ನು ಮುಚ್ಚುವುದಲ್ಲ. ಆ ಸಂಸ್ಥೆ ಇನ್ನಷ್ಟುಬಲಿಷ್ಠವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವುದು. ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸಿ ಆರ್ಥಿಕತೆಗೆ ಪ್ರಯೋಜನ ತರುವುದು ನಮ್ಮ ಪ್ರಮುಖ ಗುರಿ. ಕೇಂದ್ರ ಸರ್ಕಾರದ ಉದ್ದಿಮೆಗಳ ಬಾಂಡ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬಾಂಡ್ ಮಾರುಕಟ್ಟೆಯ ಮೂಲಕ ಸಂಪತ್ತಿನ ಸೃಷ್ಟಿಯ ಬಗ್ಗೆ ದೀಪಂ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
