ನವದೆಹಲಿ (ನ.13):  ದೇಶದ 7 ನಗರಗಳಲ್ಲಿ ಆದಾಯ ತೆರಿಗೆ ಇಲಾಖೆ ಒಂದೇ ದಿನ ದಾಳಿ ನಡೆಸಿ ಭರ್ಜರಿ ಅಕ್ರಮವನ್ನು ಬಯಲಿಗೆಳೆದಿದೆ. ಸಗಟು ಚಿನ್ನದ ವಹಿವಾಟು ನಡೆಸುವ ಚೆನ್ನೈ ಮೂಲದ ಕಂಪನಿಯೊಂದರ ಮೇಲೆ ನಡೆಸಲಾದ ದಾಳಿ ವೇಳೆ ಭರ್ಜರಿ 500 ಕೋಟಿ ರು.ಗೂ ಅಧಿಕ ಅಘೋಷಿತ ಆಸ್ತಿ ಪತ್ತೆಯಾಗಿದೆ. ಇದರಲ್ಲಿ 102 ಕೋಟಿ ರು. ಆದಾಯವನ್ನು ಮುಚ್ಚಿಟ್ಟಿರುವುದು ಬೆಳಕಿಗೆ ಬಂದಿದ್ದರೆ, 400 ಕೋಟಿ ರು. ಮೌಲ್ಯದ ಬರೋಬ್ಬರಿ 814 ಕೆ.ಜಿ. ಚಿನ್ನ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಗುರುವಾರ ಮಾಹಿತಿ ನೀಡಿದೆ.

ಚೆನ್ನೈ, ಮುಂಬೈ, ಕೋಲ್ಕತಾ, ಕೊಯಮತ್ತೂರು, ಸೇಲಂ, ತಿರುಚಿ, ಮದುರೈ ಹಾಗೂ ತಿರುನೆಲ್ವೇಲಿಯ ಒಟ್ಟು 32 ಸ್ಥಳಗಳಲ್ಲಿ ಮಂಗಳವಾರ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಶೋಧ ಕಾರ್ಯಾಚರಣೆ ಮುಂದುವರಿದಂತೆಲ್ಲಾ ಅಕ್ರಮ ಸಂಪತ್ತಿನ ರಾಶಿಯೇ ಅನಾವರಣಗೊಂಡಿದ್ದು, ಒಟ್ಟು 500 ಕೋಟಿ ರು.ಗೂ ಅಧಿಕ ಅಘೋಷಿತ ಆಸ್ತಿ ಬೆಳಕಿಗೆ ಬಂದಿದೆ. ಈ ಪೈಕಿ 150 ಕೋಟಿ ರು. ಆಸ್ತಿಯನ್ನು ಸ್ವತಃ ದಾಳಿಗೆ ಒಳಗಾದ ಉದ್ಯಮಿಯೇ ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿಕೆ ಬಿಡುಗಡೆ ಮಾಡಿದೆ.

ದೇಶದ ಜನತೆಗೆ ಕೇಂದ್ರದಿಂದ ದೀಪಾವಳಿ ಗಿಫ್ಟ್; ಆತ್ಮ ನಿರ್ಭರ್ ಭಾರತ್‌ಗೆ ಮುನ್ನುಡಿ

ತನಗೆ ಬಂದಿರುವ ಲಾಭ ಕಡಿಮೆ ಇದೆ ಎಂದು ತೋರಿಸಲು ಉದ್ಯಮಿಯು ಉದ್ಯಮೇತರ ಹೂಡಿಕೆ ಮಾಡಿದ್ದಾರೆ ಹಾಗೂ ಬೇರೆ ಬೇರೆ ದಾಖಲೆಗಳನ್ನು ತೋರಿಸಿದ್ದಾರೆ. ಆ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಆದಾಯ ತೆರಿಗೆ ಇಲಾಖೆಯ ಆಡಳಿತಾತ್ಮಕ ಸಂಸ್ಥೆಯಾಗಿರುವ ಸಿಬಿಡಿಟಿ ತಿಳಿಸಿದೆ.

ದಾಳಿಯ ವೇಳೆ 400 ಕೋಟಿ ರು. ಮೌಲ್ಯದ 814 ಕೆ.ಜಿ. ಹೆಚ್ಚುವರಿ ಚಿನ್ನ ದಾಸ್ತಾನು ಪತ್ತೆಯಾಗಿದೆ. ಇದನ್ನು ತೆರಿಗೆ ವ್ಯಾಪ್ತಿಗೆ ತರಲಾಗುತ್ತದೆ ಎಂದು ತಿಳಿಸಿದೆ. ಪತ್ತೆಯಾಗಿರುವ ಚಿನ್ನ ವ್ಯಾಪಾರದ ದಾಸ್ತಾನು ಆಗಿರುವುದರಿಂದ ಅದನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿಲ್ಲ. 1961ರ ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಉದ್ಯಮ ವ್ಯವಹಾರದ ದಾಸ್ತಾನನನ್ನು ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ.

ಇದೇ ವೇಳೆ, ಕಂಪನಿ ನಿರ್ವಹಿಸಿರುವ ದಾಖಲೆಗಳ ಪ್ರಕಾರ, ಲೆಕ್ಕ ಪುಸ್ತಕದ ಹೊರಗೆ 2018-19ನೇ ಸಾಲಿನಲ್ಲಿ 102 ಕೋಟಿ ರು. ನಿವ್ವಳ ಆದಾಯ ಪತ್ತೆಯಾಗಿದೆ. 2019-2020 ಹಾಗೂ 2020-2021ನೇ ಸಾಲಿನ ವ್ಯವಹಾರಗಳನ್ನು ವಿಧಿವಿಜ್ಞಾನ ತಂತ್ರ ಬಳಸಿ ಹೊರಗೆಳೆಯಲಾಗುತ್ತಿದೆ. ಅಲ್ಲದೆ ಉದ್ಯಮ ಸ್ಥಳದಲ್ಲಿ ಹೆಚ್ಚುವರಿ 50 ಕೆ.ಜಿ. ಚಿನ್ನವೂ ಪತ್ತೆಯಾಗಿದ್ದು ಆ ಕುರಿತು ಕೂಡ ತನಿಖೆ ಮುಂದುವರೆದಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ.

ಅಕ್ರಮ ಹೇಗೆ?:  ಉದ್ದಿಮೆಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ಮುಚ್ಚಿಡಲು ಜೆಪ್ಯಾಕ್‌ ಎಂಬ ಪ್ಯಾಕೇಜ್‌ ಅನ್ನು ಕಂಪನಿ ಬಳಕೆ ಮಾಡುತ್ತಿತ್ತು. ಅಂದಾಜು ಲೆಕ್ಕ ತೋರಿಸಿ ಸರಕನ್ನು ಸಾಗಿಸಿ ಬಿಲ್‌ ಹಾಗೂ ಇನ್‌ವಾಯ್‌್ಸಗಳನ್ನು ಸೃಷ್ಟಿಸಲಾಗುತ್ತಿತ್ತು. ಸರಕು ನಿಗದಿತ ಗುರಿ ತಲುಪಿದ ಕೂಡಲೇ ಅವನ್ನು ನಾಶಪಡಿಸಲಾಗುತ್ತಿತ್ತು. ಇಡೀ ವಹಿವಾಟನ್ನು ಲೆಕ್ಕಪತ್ರದಿಂದ ಹೊರಗಿಡುತ್ತಿತ್ತು ಎಂದು ತೆರಿಗೆ ಇಲಾಖೆ ತಿಳಿಸಿದೆ.