ಮುಂಬೈ(ಮಾ.24): ಕೊರೋನಾ ವೈರಸ್‌ ವ್ಯಾಪಕವಾಗಿ ಹಬ್ಬುವುದನ್ನು ತಡೆಯಲು ಭಾರತ ಸೇರಿದಂತೆ ವಿವಿಧ ದೇಶಗಳು ಘೋಷಣೆ ಮಾಡಿರುವ ‘ಲಾಕ್‌ಡೌನ್‌’ ಸುದ್ದಿ ಷೇರುಪೇಟೆಯಲ್ಲಿ ಅಲ್ಲೋಲ- ಕಲ್ಲೋಲಕ್ಕೆ ಕಾರಣವಾಗಿದೆ. ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ ಒಂದೇ ದಿನ 3934.72 ಅಂಕಗಳಷ್ಟುಮಹಾ ಕುಸಿತ ಕಾಣುವ ಮೂಲಕ ಕರಾಳ ಇತಿಹಾಸ ಸೃಷ್ಟಿಸಿದೆ. ಸೆನ್ಸೆಕ್ಸ್‌ನ ಚರಿತ್ರೆಯಲ್ಲೇ ಒಂದೇ ದಿನ ಸೂಚ್ಯಂಕ ಈ ಪರಿ ಕುಸಿದ ನಿದರ್ಶನವೇ ಇರಲಿಲ್ಲ. ಸೆನ್ಸೆಕ್ಸ್‌ನ ಈ ಪತನದಿಂದಾಗಿ ಹೂಡಿಕೆದಾರರಿಗೆ ಒಂದೇ ದಿನ 14.22 ಲಕ್ಷ ಕೋಟಿ ರು. ನಷ್ಟವಾಗಿದೆ.

ಸೋಮವಾರ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್‌ ಶೇ.10ರಷ್ಟುಕೆಳಕ್ಕೆ ಜಾರಿತು. ಹೀಗಾಗಿ ತನ್ನಿಂತಾನೆ ಸರ್ಕಿಟ್‌ ಬ್ರೇಕ್‌ ಆಗಿ, 45 ನಿಮಿಷ ವಹಿವಾಟು ಸ್ಥಗಿತಗೊಂಡಿತು. ಬಳಿಕ ವಹಿವಾಟು ಪುನಾರಂಭವಾದಾಗ ಸೂಚ್ಯಂಕ ಮತ್ತಷ್ಟುಕುಸಿದು, ದಿನದಂತ್ಯಕ್ಕೆ 3934.72 ಅಂಕಗಳ (ಶೇ.13.15) ಇಳಿಕೆಯೊಂದಿಗೆ 25,981.24ರಲ್ಲಿ ವಹಿವಾಟು ಮುಕ್ತಾಯಗೊಳಿಸಿತು. ಈ ಮೂಲಕ ಸೆನ್ಸೆಕ್ಸ್‌ 4 ವರ್ಷಗಳ ಹಿಂದಿನ ಮಟ್ಟತಲುಪಿದೆ.

ಇದೇ ವೇಳೆ, ನಿಫ್ಟಿ1135.20 ಅಂಕ (ಶೇ.12.98)ಗಳ ಇಳಿಕೆಯೊಂದಿಗೆ 7610.25ರಲ್ಲಿ ದಿನದ ವ್ಯವಹಾರ ಮುಗಿಸಿತು. ಸೂಚ್ಯಂಕದಲ್ಲಿರುವ ಷೇರುಗಳ ಪೈಕಿ ಎಕ್ಸಿಸ್‌ ಬ್ಯಾಂಕ್‌ ಭಾರಿ ಹೊಡೆತ ತಿಂದಿತು. ಆ ಕಂಪನಿಯ ಷೇರುಗಳು ಶೇ.28 (118 ರು.) ಇಳಿಕೆ ಕಂಡವು. ಬಜಾಜ್‌ ಫೈನಾನ್ಸ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಮಾರುತಿ ಹಾಗೂ ಎಲ್‌ ಅಂಡ್‌ ಟಿ ಕಂಪನಿಯ ಷೇರುಗಳೂ ಭಾರಿ ಕುಸಿದವು.

ಮುಂಬೈ ಷೇರುಪೇಟೆಯಲ್ಲಿ ನೊಂದಾಯಿತ ಕಂಪನಿಗಳ ಪೈಕಿ 2037 ಕಂಪನಿಗಳ ಷೇರು ಮೌಲ್ಯ ಇಳಿಕೆಯಾದರೆ, 232 ಕಂಪನಿಗಳ ಷೇರು ಮೌಲ್ಯ ಏರಿಕೆಯಾಯಿತು. 132 ಕಂಪನಿಗಳ ಷೇರು ಯಥಾಸ್ಥಿತಿ ಕಾಯ್ದುಕೊಂಡವು.

ಮೋದಿ ಅವಧಿಯ ಏರಿಕೆ ಬಹುತೇಕ ಮಾಯ

2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನ ಸೆನ್ಸೆಕ್ಸ್‌ ಭರ್ಜರಿ 1470 ಅಂಕ ಏರಿಕೆ ಕಂಡು ಮೊದಲ ಬಾರಿಗೆ 25000 ಅಂಕಗಳ ಗಡಿ ದಾಟಿತ್ತು. ಸೋಮವಾರ ಸೆನ್ಸೆಕ್ಸ್‌ 3934 ಅಂಕ ಕುಸಿತ ಕಾಣುವ ಮೂಲಕ 25,981 ಅಂಕಗಳಿಗೆ ತಲುಪಿದೆ. ಅಂದರೆ ಇನ್ನು 1000 ಅಂಕ ಕುಸಿದರೆ 2014ರ ಬಳಿಕ ಏರಿಕೆಯಾದ ಅಷ್ಟೂಅಂಶ ಮಾಯವಾದಂತೆ ಆಗಲಿದೆ.

ಟಾಪ್‌ 3 ಗರಿಷ್ಠ| ದೈನಂದಿನ ಇಳಿಕೆ

3934: 2020 ಮಾ.23

2467: 2020 ಮಾ.8

1741: 2008 ಜ.22

ಕಾರಣ ಏನು?

1. ವಿವಿಧ ದೇಶಗಳು ಲಾಕ್‌ಡೌನ್‌ ಘೋಷಿಸಿರುವುದರಿಂದ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳಲಿದೆ ಎಂಬ ಭಯ

2. ಇದೇ ಆತಂಕದಿಂದ ಜಾಗತಿಕ ಷೇರು ಸೂಚ್ಯಂಕಗಳೂ ಕುಸಿದಿದ್ದರಿಂದ ಸೆನ್ಸೆಕ್ಸ್‌ ಮೇಲೆ ಧನಾತ್ಮಕ ಪರಿಣಾಮ

3. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ಡಾಲರ್‌ ವಿರುದ್ಧ ರುಪಾಯಿ ಮತ್ತಷ್ಟುಇಳಿದದ್ದು