ನವದೆಹಲಿ[ಜ.19]: ಈರುಳ್ಳಿ ದರ ಗಗನಕ್ಕೆ ಏರಿದ್ದರಿಂದ ಕೇಂದ್ರ ಸರ್ಕಾರ ಟರ್ಕಿ ಮತ್ತು ಈಜಿಪ್ಟ್‌ನಿಂದ ಆಮದು ಮಾಡಿಕೊಂಡಿದ್ದ ಈರುಳ್ಳಿ ಈಗ ಕೇಳುವವರೇ ಇಲ್ಲದಂತಾಗಿದೆ. ವಿದೇಶಿ ಈರುಳ್ಳಿ ಭಾರತೀಯರಿಗೆ ರುಚಿಸುತ್ತಿಲ್ಲ. ಅಲ್ಲದೇ ರಾಜ್ಯಗಳಿಂದಲೂ ಟರ್ಕಿ ಈರುಳ್ಳಿಗೆ ಬೇಡಿಕೆ ಕಡಿಮೆ ಆಗಿದೆ. ಹೀಗಾಗಿ ಸರ್ಕಾರ 34,000 ಟನ್‌ ವಿದೇಶಿ ಈರುಳ್ಳಿಯನ್ನು ಅರ್ಧಕ್ಕರ್ಧ ದಕ್ಕೆ ಮಾರಲು ಉದ್ದೇಶಿಸಿದೆ.

ಈರುಳ್ಳಿ ಬೆಳೆಯುವ ನಾಡಿಗೆ ಕಡಿಮೆ ಬೆಲೆಗೆ ಟರ್ಕಿ ಈರುಳ್ಳಿ ಲಗ್ಗೆ : ಬೆಲೆ ಎಷ್ಟಿದೆ?

ಕಳೆದ ವಾರ ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ವಿವಿಧ ರಾಜ್ಯಗಳು 33,000 ಟನ್‌ ಈರುಳ್ಳಿಗೆ ಬೇಡಿಕೆ ಇಟ್ಟಿದ್ದವು. ಆದರೆ, ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣ ಸೇರಿದಂತೆ ಕೆಲವು ರಾಜ್ಯಗಳು ಈರುಳ್ಳಿ ಬೇಡಿಕೆಯನ್ನು ವಾಪಸ್‌ ಪಡೆದುಕೊಂಡಿವೆ. ಈಗಾಗಲೇ ಸರ್ಕಾರದ ಬಳಿ 22,000 ಟನ್‌ ಈರುಳ್ಳಿ ಸಂಗ್ರಹ ಇದೆ.

ಇದರ ಜೊತೆಗೆ ಹೆಚ್ಚುವರಿಯಾಗಿ 12ರಿಂದ 15 ಟನ್‌ ಈರುಳ್ಳಿ ಸೇರ್ಪಡೆ ಆಗಲಿದೆ. ಹೀಗಾಗಿ ಸರ್ಕಾರ ತನ್ನ ಬಳಿ ಇರುವ ಈರುಳ್ಳಿಯನ್ನು ಕೆ.ಜಿ.ಗೆ 55 ರು.ಗೆ ಮಾರುವ ಬದಲು 25 ರು.ಗೆ ಮಾರಲು ಸರ್ಕಾರ ಉದ್ದೇಶಿಸಿದೆ. ಅಲ್ಲದೇ ವಿದೇಶದಿಂದ ಆಮದು ಮಾಡಿಕೊಂಡ ಈರುಳ್ಳಿಯನ್ನು ರಿಯಾಯಿತಿ ದರದಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಹಾಗೂ ಮಾಲ್ಡೀವ್ಸ್‌ಗೆ ಮಾರಾಟ ಮಾಡಿ ನಷ್ಟಸರಿದೂಗಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈರುಳ್ಳಿ ಶಾಕ್‌ ತಡೆಯಲು 2020ರಲ್ಲಿ 1 ಲಕ್ಷ ಟನ್‌ ಈರುಳ್ಳಿ ದಾಸ್ತಾನು!