ಜಾಗತಿಕ ಬೆಳವಣಿಗೆ ದರ ಇಳಿಸಿದ IMF;2023ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ.6.1
*ಕೇಂದ್ರ ಬಜೆಟ್ ಅಧಿವೇಶನ ಆರಂಭಗೊಂಡ ಸಮಯದಲ್ಲೇ ಐಎಂಎಫ್ ವರದಿ ಬಿಡುಗಡೆ
*ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿದರೆ ಭರವಸೆ ಮೂಡಿಸಿರುವ ಭಾರತದ ಆರ್ಥಿಕ ಬೆಳವಣಿಗೆ
*ಜಾಗತಿಕ ಬೆಳವಣಿಗೆ ದರ 2023ರಲ್ಲಿ ಶೇ.2.9ಕ್ಕೆ ಇಳಿಕೆ
ನವದೆಹಲಿ (ಜ.31): ನಾಳೆ ಕೇಂದ್ರ ಬಜೆಟ್ ಮಂಡನೆಯಾಗಲಿದೆ, ಈ ನಡುವೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜಾಗತಿಕ ಬೆಳವಣಿಗೆ ದರವನ್ನು ಬಿಡುಗಡೆ ಮಾಡಿದೆ. ಜಾಗತಿಕ ಬೆಳವಣಿಗೆ ದರ 2022ರಲ್ಲಿ ಶೇ.3.4 ಇರಲಿದೆ ಎಂದು ಅಂದಾಜಿಸಲಾಗಿದ್ದು, 2023ರಲ್ಲಿ ಶೇ.2.9ಕ್ಕೆ ಇಳಿಕೆಯಾಗಲಿದೆ. ಆದರೆ, 2024ರಲ್ಲಿ ಶೇ.3.1ಕ್ಕೆ ಏರಿಕೆಯಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವರದಿ ವಲ್ಡ್ ಎಕಾನಮಿಕ್ ಔಟ್ ಲುಕ್ (ಡಬ್ಲ್ಯು ಇಒ) ತಿಳಿಸಿದೆ. 2023ನೇ ಸಾಲಿನ ಆರ್ಥಿಕ ಬೆಳವಣಿಗೆಯನ್ನು 2022ರ ಅಕ್ಟೋಬರ್ ತಿಂಗಳ ವರ್ಲ್ಡ್ ಎಕಾನಾಮಿಕ್ ಔಟ್ ಲುಕ್ (ಡಬ್ಲ್ಯುಇಒ) ಅಂದಾಜಿಗಿಂತ ಶೇ. 0.2ರಷ್ಟು ಹೆಚ್ಚು ಅಂದಾಜಿಸಲಾಗಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕಲು ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ ಗಳು ಬಡ್ಡಿದರ ಏರಿಕೆ ಮಾಡಿರೋದು ಹಾಗೂ ರಷ್ಯಾ-ಉಕ್ರೇನ್ ಯುದ್ಧ ಮುಂದುವರಿಕೆ ಜಾಗತಿಕ ಆರ್ಥಿಕ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ. ಈ ವರದಿ ಅನ್ವಯ ಅಮೆರಿಕ ಸೇರಿದಂತೆ ವಿಶ್ವದ ಶ್ರೀಮಂತ ರಾಷ್ಟ್ರಗಳಿಗಿಂತ ಅಭಿವೃದ್ಧಿ ಹೊಂದುತ್ತಿರುವ ಭಾರತದ ಬೆಳವಣಿಗೆ ದರ ಹೆಚ್ಚಿದೆ. ಇನ್ನು ಚೀನಾದಲ್ಲಿ ಕೋವಿಡ್ -19 ವ್ಯಾಪಕ ಹರಡುವಿಕೆ ಪರಿಣಾಮ 2022ರಲ್ಲಿ ಬೆಳವಣಿಗೆ ಕುಂಠಿತಗೊಂಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ವ್ಯಾಪಾರ -ವಹಿವಾಟುಗಳು ಮತ್ತೆ ಆರಂಭಗೊಂಡಿರೋದು ನಿರೀಕ್ಷೆಗಿಂತ ವೇಗವಾದ ಚೇತರಿಕೆಗೆ ದಾರಿ ಮಾಡಿಕೊಟ್ಟಿದೆ ಎಂದು ಡಬ್ಲ್ಯು ಇಒ ವರದಿ ತಿಳಿಸಿದೆ. ಜಾಗತಿಕ ಹಣದುಬ್ಬರ 2022 ರಲ್ಲಿ ಶೇ.8.8ರಷ್ಟಿದ್ದು, 2023ರಲ್ಲಿ ಶೇ.6.6ಕ್ಕೆ ಹಾಗೂ 2024ರಲ್ಲಿ ಶೇ.4.3ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. ಆದರೂ ಕೂಡ ಹಣದುಬ್ಬರ ಕೋವಿಡ್ -19 ಪೂರ್ವದ ಮಟ್ಟವಾದ ಶೇ. 3.5ಕ್ಕಿಂತ ಹೆಚ್ಚಿರಲಿದೆ ಎಂದು ವರದಿ ಹೇಳಿದೆ.
2023ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ.6.1
2022ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ.6.8ರಷ್ಟಿರಲಿದೆ ಎಂದು ಡಬ್ಲ್ಯು ಇಒ ವರದಿ ಅಂದಾಜಿಸಿತ್ತು. ಆದರೆ, 2023ರಲ್ಲಿ ಮಾತ್ರ ಇದು ಶೇ. 6.1ಕ್ಕೆ ಇಳಿಕೆಯಾಗಬಹುದು ಎಂದು ಐಎಂಎಫ್ ವರದಿ ಅಂದಾಜಿಸಿದೆ. ಆದರೆ, 2024ರಲ್ಲಿ ಇದು ಮತ್ತೆ ಶೇ.6.8ಕ್ಕೆ ಏರಿಕೆಯಾಗಲಿದೆ ಎಂದು ವರದಿ ಹೇಳಿದೆ. 'ಭಾರತದ ಆರ್ಥಿಕ ಪ್ರಗತಿ ಕುರಿತು ನಾವು ಮಾಡಿದ ಅಂದಾಜಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರಸಕ್ತ ಆರ್ಥಿಕ ಸಾಲಿನ ಪ್ರಗತಿ ದರ ಶೇ..6.8ರಲ್ಲೇ ಇರಲಿದೆ. ಆದರೆ, 2023ರ ಮಾರ್ಚ್ ಬಳಿಕ ಸ್ವಲ್ಪ ಬದಲಾವಣೆ ಕಾಣಬಹುದು' ಎಂದು ಐಎಂಎಫ್ ಸಂಶೋಧನಾ ವಿಭಾಗದ ಮುಖ್ಯ ಆರ್ಥಿಕ ತಜ್ಞ ಪಿರೆ-ಆಲಿವೀರ್ ಗೌರಿಂಚಸ್ ತಿಳಿಸಿದ್ದಾರೆ.
Budget 2023: ಕೇಂದ್ರ ಬಜೆಟ್‌ನ ಈ ವಿವರಗಳ ಬಗ್ಗೆ ನಿಮಗೆಷ್ಟು ಗೊತ್ತು?
ಹಣದುಬ್ಬರದಲ್ಲಿ ವೇಗವಾದ ಇಳಿಕೆ
ಜಗತ್ತಿನ ವಿವಿಧ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಹಣದುಬ್ಬರದಲ್ಲಿ ತ್ವರಿತ ಇಳಿಕೆ ಕೂಡ ಆಗಿದೆ. ಆದರೆ, ಇನ್ನೊಂದೆಡೆ ಚೀನಾದಲ್ಲಿ ಮತ್ತೆ ಕೋರೋನಾ ಪ್ರಕರಣಗಳು ಹೆಚ್ಚಿರೋದು ಚೇತರಿಕೆಗೆ ಹೊಡೆತ ನೀಡಿದೆ. ಹಾಗೆಯೇ ರಷ್ಯಾ-ಉಕ್ರೇನ್ ಯುದ್ಧ ಹಾಗೂ ಜಾಗತಿಕ ಹಣಕಾಸಿನ ವೆಚ್ಚಗಳು ಹೆಚ್ಚಿರೋದು ಕೂಡ ಪರಿಸ್ಥಿತಿಯನ್ನು ಹದಗೆಡಿಸಿವೆ. ಹಣದುಬ್ಬರದ ಕುರಿತ ವ್ಯತಿರಿಕ್ತ ಸುದ್ದಿಗಳು ಹಣಕಾಸಿನ ಮಾರುಕಟ್ಟೆ ಮೇಲೆ ಕೂಡ ಪರಿಣಾಮ ಬೀರಿವೆ.
Budget 2023:ಬಜೆಟ್ ಅಧಿವೇಶನಕ್ಕೆ ಚಾಲನೆ; 2047ರೊಳಗೆ ಆತ್ಮನಿರ್ಭರ ಭಾರತ ನಿರ್ಮಾಣವಾಗಲಿ: ರಾಷ್ಟ್ರಪತಿ ಮುರ್ಮು
ಆರ್ಥಿಕ ಹಿಂಜರಿತ
2023ನೇ ಸಾಲಿನಲ್ಲಿ ಜಗತ್ತಿನ ಮೂರನೇ ಒಂದು ಭಾಗದಲ್ಲಿ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳಲಿದೆ. ಹೀಗಾಗಿ ಈ ವರ್ಷ ಕಳೆದ ಸಾಲಿಗಿಂತ ಹೆಚ್ಚು ಕಷ್ಟಕರವಾಗಿರಲಿದೆ. ಅಮೆರಿಕ, ಚೀನಾ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ಅತ್ಯಂತ ದುಸ್ತರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಹಿಂದೊಮ್ಮೆ ತಿಳಿಸಿದ್ದರು. ಆರ್ಥಿಕ ಹಿಂಜರಿತದಿಂದ ಅಮೆರಿಕ, ಯುರೋಪ್ ಹಾಗೂ ಚೀನಾದ ಆರ್ಥಿಕ ಬೆಳವಣಿಗೆ ನಿಧಾನವಾಗಲಿದೆ.