Budget 2023:ಬಜೆಟ್ ಅಧಿವೇಶನಕ್ಕೆ ಚಾಲನೆ; 2047ರೊಳಗೆ ಆತ್ಮನಿರ್ಭರ ಭಾರತ ನಿರ್ಮಾಣವಾಗಲಿ: ರಾಷ್ಟ್ರಪತಿ ಮುರ್ಮು
*ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ಭಾಷಣ
*ಇನ್ನೂ ಅಧಿವೇಶನಕ್ಕೆ ಹಾಜರಾಗದ ಕಾಂಗ್ರೆಸ್ ನಾಯಕರು
*ಕೆಲವೇ ಸಮಯದಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ
ನವದೆಹಲಿ (ಜ.31): ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುವ ಮೂಲಕ ಕೇಂದ್ರ ಬಜೆಟ್ ಅಧಿವೇಶನಕ್ಕೆ ಇಂದು ಚಾಲನೆ ಸಿಕ್ಕಿದೆ. 2047ರೊಳಗೆ ನಾವು ಆತ್ಮನಿರ್ಭರ ಭಾರತದ ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದು ರಾಷ್ಟ್ರಪತಿ ಮುರ್ಮು ಸಲಹೆ ನೀಡಿದ್ದಾರೆ. 2047ರೊಳಗೆ ನಾವು ಹಿಂದಿನ ವೈಭವ ಹಾಗೂ ಆಧುನಿಕತೆಯ ಬಂಗಾರದ ಪುಟಗಳನ್ನು ಸಂಪರ್ಕಿಸುವಂತಹ ರಾಷ್ಟ್ರದ ನಿರ್ಮಾಣ ಮಾಡಬೇಕಿದೆ. ನಾವು ಆತ್ಮನಿರ್ಭರ ಭಾರತವನ್ನು ನಿರ್ಮಾಣ ಮಾಡಬೇಕಿದೆ ಎಂದು ಅವರು ಹೇಳಿದರು. ಇದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಚೊಚ್ಚಲ ಬಜೆಟ್ ಅಧಿವೇಶನದ ಭಾಷಣವಾಗಿದೆ. ರಾಷ್ಟ್ರಪತಿ ಭಾಷಣದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡನೆ ಮಾಡಲಿದ್ದಾರೆ. ನಾಳೆ (ಫೆ.1) ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ಭಾಷಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರುವ ಕಾರಣ ಶ್ರೀನಗರದಿಂದ ವಿಮಾನ ವಿಳಂಬವಾದ ಹಿನ್ನೆಲೆಯಲ್ಲಿ ತಡವಾಗಿ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
'ಬಡತನಮುಕ್ತ ಭಾರತವನ್ನು ನಿರ್ಮಿಸಬೇಕಿದೆ. ಮಧ್ಯಮ ವರ್ಗದ ಜನರು ಕೂಡ ಸಮೃದ್ಧಿ ಹೊಂದುವಂತಾಗಬೇಕು. ಭಾರತದ ಮಹಿಳೆಯರು ಹಾಗೂ ಯುವಜನತೆ ಮುಂಚೂಣಿಯಲ್ಲಿ ನಿಂತು ಸಮಾಜ ಹಾಗೂ ದೇಶಕ್ಕೆ ಮುಂದಿನ ದಾರಿ ತೋರುವಂತಾಗಬೇಕು' ಎಂದು ದ್ರೌಪದಿ ಮುರ್ಮು ಆಶಯ ವ್ಯಕ್ತಪಡಿಸಿದರು. ಸರ್ಕಾರ ದಲಿತರು ಹಾಗೂ ಆದಿವಾಸಿಗಳ ಕನಸುಗಳನ್ನು ನನಸುಗೊಳಿಸಿದೆ. ಜನರ ಅಭಿವೃದ್ಧಿಗಾಗಿ ಶ್ರಮಿಸಿದೆ ಎಂದು ರಾಷ್ಟ್ರಪತಿ ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತದ ಆತ್ಮವಿಶ್ವಾಸ ಉಚ್ಚಾಯದಲ್ಲಿದೆ
'ಇಂದು ಭಾರತದ ಆತ್ಮವಿಶ್ವಾಸ ಉಚ್ಚಾಯದಲ್ಲಿದೆ ಹಾಗೂ ಇಡೀ ವಿಶ್ವ ಭಾರತವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಿದೆ. ವಿಶ್ವದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಮಟ್ಟಿಗೆ ಭಾರತ ಬೆಳೆದು ನಿಂತಿದೆ' ಎಂದು ಮುರ್ಮು ಸಂತಸ ವ್ಯಕ್ತಪಡಿಸಿದರು. ದೇಶದಲ್ಲಿ ಇಂದು ಸ್ಥಿರ, ನಿರ್ಭಯ ಹಾಗೂ ನಿರ್ಣಾಯಕ ಸರ್ಕಾರವಿದ್ದು, ದೊಡ್ಡ ಕನಸುಗಳನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಕೂಡ ಅವರು ಹೇಳಿದರು.
370ನೇ ವಿಧಿ ರದ್ದತಿ
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯಿಂದ ಹಿಡಿದು ಮೂರು ತಲಾಖ್ ವ್ಯವಸ್ಥೆಯ ನಿರ್ಮೂಲನದ ತನಕ ನನ್ನ ಸರ್ಕಾರ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಮುರ್ಮು ಹೇಳಿದರು.
ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ
ಭ್ರಷ್ಟಾಚಾರ ನಿರ್ಮೂಲನಕ್ಕೆ ಪರಿಣಾಮಕಾರಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಕ್ಕೆ ಭ್ರಷ್ಟಾಚಾರ ಅತೀದೊಡ್ಡ ಶತ್ರು ಎಂಬುದು ಸರ್ಕಾರದ ಸ್ಪಷ್ಟ ಅಭಿಪ್ರಾಯವಾಗಿದೆ. ಕಳೆದ ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಯುತ್ತಿದೆ ಎಂದು ರಾಷ್ಟ್ರಪತಿಗಳು ಹೇಳಿದರು.
11 ಕೋಟಿ ಕುಟುಂಬಗಳಿಗೆ ನೀರಿನ ಪೂರೈಕೆ
'ಜಲ ಜೀವನ್ ಮಿಷನ್ ಅಡಿಯಲ್ಲಿ ಸುಮಾರು 11 ಕೋಟಿ ಕುಟುಂಬಗಳಿಗೆ ನೀರಿನ ಪೈಪ್ ಲೈನ್ ಸಂಪರ್ಕ ಕಲ್ಪಿಸಲಾಗಿದೆ. ಬಡ ಕುಟುಂಬಗಳಿಗೆ ಇದರಿಂದ ಗರಿಷ್ಠ ಮಟ್ಟದ ಪ್ರಯೋಜನ ಸಿಗುತ್ತಿದೆ ಎಂದು ದ್ರೌಪದಿ ಮುರ್ಮು ತಿಳಿಸಿದರು.
ಈಗ ತೆರಿಗೆ ರೀಫಂಡ್ ಪಡೆಯೋದು ಸುಲಭ
ಈ ಹಿಂದೆ ತೆರಿಗೆ ರೀಫಂಡ್ ಪಡೆಯಲು ಸಾಕಷ್ಟು ಕಾಯಬೇಕಿತ್ತು. ಆದರೆ, ಇಂದು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ ಕೆಲವೇ ದಿನಗಳಲ್ಲಿ ರೀಫಂಡ್ ಸಿಗುತ್ತಿದೆ. ನನ್ನ ಸರ್ಕಾರ ಸಮಾಜದ ಪ್ರತಿ ವರ್ಗದ ಅಭಿವೃದ್ಧಿಗಾಗಿ ಯಾವುದೇ ಬೇಧಭಾವವಿಲ್ಲದೆ ಶ್ರಮಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನನ್ನ ಸರ್ಕಾರದ ಪ್ರಯತ್ನಗಳ ಪರಿಣಾಮವಾಗಿ ಅನೇಕ ಮೂಲ ಸೌಲಭ್ಯಗಳು ಶೇ.100ರಷ್ಟು ಜನರನ್ನು ತಲುಪಿರಬಹುದು ಅಥವಾ ಗುರಿಗೆ ಅತ್ಯಂತ ಹತ್ತಿರಲ್ಲಿದೆ' ಎಂದು ಮುರ್ಮು ಹೇಳಿದರು.
ಕೋಟ್ಯಂತರ ಜನರಿಗೆ 27 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿನ ನೆರವು
ಸಂಪೂರ್ಣ ಪಾರದರ್ಶಕ ವ್ಯವಸ್ಥೆ ಮೂಲಕ 27 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತದ ಸಹಾಯಧನವನ್ನು ಕೋಟ್ಯಂತರ ಜನರಿಗೆ ತಲುಪಿಸಲಾಗಿದೆ. ಇಂಥ ಯೋಜನೆಗಳು ಹಾಗೂ ವ್ಯವಸ್ಥೆಯ ಮೂಲಕ ಕೋವಿಡ್ ಸಂದರ್ಭದಲ್ಲಿ ಕೂಡ ಬಡತನ ರೇಖೆಗಿಂತ ಕೆಳಗೆ ಜನರ ಜೀವನ ಮಟ್ಟ ಕುಸಿಯದಂತೆ ಕಾಯುವಲ್ಲಿ ಭಾರತ ಸಫಲವಾಗಿದೆ ಎಂದು ವಿಶ್ವ ಬ್ಯಾಂಕಿನ ವರದಿಯೊಂದು ಅಭಿಪ್ರಾಯಪಟ್ಟಿದೆ ಎಂಬ ವಿಚಾರವನ್ನು ಮುರ್ಮು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.