ಮುಂಬೈ(ಆ.26): ರೈತರಿಗೆ ಸಾಲ ನೀಡುವ ಪ್ರಕ್ರಿಯೆ ತ್ವರಿತಗೊಳಿಸುವ ನಿಟ್ಟಿನಲ್ಲಿ ಉಪಗ್ರಹ ಆಧಾರಿತ ಕೃಷಿ ಜಮೀನು ವೀಕ್ಷಣೆ ಯೋಜನೆ ಜಾರಿಗೆ ತರಲು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ನಿರ್ಧರಿಸಿದೆ. ಈಗಾಗಲೇ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಈ ಯೋಜನೆಯನ್ನು ಶೀಘ್ರವೇ 3 ರಾಜ್ಯಗಳ 500 ಗ್ರಾಮಗಳಿಗೆ ಮತ್ತು ಮುಂದಿನ ದಿನಗಳಲ್ಲಿ 60000 ಗ್ರಾಮಗಳಿಗೆ ವಿಸ್ತರಿಸುವ ಉದ್ದೇಶ ಹೊಂದಿರುವುದಾಗಿ ಅದು ತಿಳಿಸಿದೆ.

ಪ್ರಸಕ್ತ ಯಾವುದೇ ರೈತರಿಗೆ ಸಾಲ ನೀಡುವ ಮುನ್ನ ಬ್ಯಾಂಕ್‌ನ ಅಧಿಕಾರಿಗಳು, ರೈತನ ಜಮೀನನ್ನು ಖುದ್ದಾಗಿ ವೀಕ್ಷಣೆ ಮಾಡಿ, ಅಲ್ಲಿಯ ಬೆಳೆ, ನೀರಿನ ಸವಲತ್ತು ಮೊದಲಾದ ಅಂಶಗಳನ್ನು ಪರಿಶೀಲಿಸುತ್ತಾರೆ. ಹೀಗೆ ಪರಿಶೀಲಿಸಿದ ಬಳಿಕ ಅವರಿಗೆ ಎಷ್ಟುಸಾಲ ನೀಡಬಹುದು ಎಂಬುದನ್ನು ನಿರ್ಧರಿಸುತ್ತಾರೆ. ಇಂಥದ್ದೊಂದು ಪ್ರಕ್ರಿಯೆ ಪೂರ್ಣಕ್ಕೆ ಕನಿಷ್ಠ 15 ದಿನ ಬೇಕು.

ಆದರೆ ಇಸ್ರೋದ ಬಳಿ ಈಗಾಗಲೇ ಲಭ್ಯವಿರುವ ಕೃಷಿ ಜಮೀನಿನ ಚಿತ್ರ ಮತ್ತು ದತ್ತಾಂಶಗಳನ್ನೇ ಬಳಸಿಕೊಂಡು, ರೈತರಿಗೆ ನೀಡುವ ಸಾಲದ ಪ್ರಮಾಣ ನಿರ್ಧರಿಸಲು ಬ್ಯಾಂಕ್‌ ಮುಂದಾಗಿದೆ. ಇದರಿಂದ ಬ್ಯಾಂಕ್‌ಗೆ ತಗಲುವು ಹಣ ಮತ್ತು ಸಮಯ ಎರಡೂ ಉಳಿಯಲಿದೆ. ಮತ್ತೊಂದೆಡೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಲ ವಿತರಣೆ ಸಾಧ್ಯವಾಗಲಿದೆ.

ಭಾರತದ ಇಸ್ರೋ ಹಾಗೂ ಅಮೆರಿಕದ ನಾಸಾದಿಂದ ಚಿತ್ರೀಕರಣಗೊಂಡ ಉಪಗ್ರಹ ಚಿತ್ರಗಳನ್ನು ನೋಡಿ ಈ ಸಾಲ ವಿತರಣೆ ಮಾಡುವ ಯೋಜನೆಯನ್ನು ಐಸಿಐಸಿಎ ಕಳೆದೆರಡು ವರ್ಷಗಳಿಂದ ಕೆಲವೇ ಕೆಲವು ಹಳ್ಳಿಗಳಲ್ಲಿ ನಡೆಸಿದ್ದು, ಇದೀಗ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಗುಜರಾತ್‌ನ 500 ಹಳ್ಳಿಗಳಿಗೂ ವಿಸ್ತರಿಸಲಾಗಿದೆ ಎಂದು ಬ್ಯಾಂಕ್‌ ಹೇಳಿಕೊಂಡಿದೆ. ಅಲ್ಲದೆ, ಮುಂದಿನ 2 ತಿಂಗಳಲ್ಲಿ ಈ ಮಹತ್ವದ ಯೋಜನೆಯನ್ನು 63 ಸಾವಿರ ಗ್ರಾಮಗಳಿಗೆ ವಿಸ್ತರಿಸಲಾಗುತ್ತದೆ ಎಂದು ಅನೂಪ್‌ ತಿಳಿಸಿದ್ದಾರೆ.

ಹೈನುಗಾರಿಕೆ ನೆಚ್ಚಿಕೊಂಡಿರುವ ರೈತರಿಗೆ ಶಾಕ್!

"