ಒಂದಾದ್ಮೇಲೆ ಒಂದು ಬೆಲೆ ಏರಿಕೆಯಾಗ್ತಿರುವ ಭಾರತದಲ್ಲಿ ಜೀವನ ನಿರ್ವಹಣೆ ಕಷ್ಟವಾಗ್ತಿದೆ. ಜನರು ಬೆಲೆ ಹೆಚ್ಚಳದ ವಿರುದ್ಧ ಕೋಪ ವ್ಯಕ್ತಪಡಿಸ್ತಿದ್ದಾರೆ. ಆದ್ರೆ ಇನ್ನೊಂದು ಕಡೆ ಆಘಾತಕಾರಿ ಸುದ್ದಿಗಳು ಸಿಗ್ತನೇ ಇವೆ. ಈಗ ಎರಡು ಬ್ಯಾಂಕ್ ಗಳ ಸಾಲದ ಇಎಂಐ ಹೆಚ್ಚಳವಾಗಿದೆ.  

ಭಾರತದಲ್ಲಿ ಬೆಲೆ ಏರಿಕೆ ಬಿಸಿ ತಟ್ಟಿದೆ. ಭಾರತದಾದ್ಯಂತ ತರಕಾರಿ ಬೆಲೆ ಗಗನಕ್ಕೇರಿದೆ. ಸದ್ಯ ಟೊಮಾಟೊ ಸುದ್ದಿಯಲ್ಲಿರೋದು ನಿಮಗೂ ಗೊತ್ತು. ಟೊಮಾಟೊ ಕೆಜಿಗೆ 200 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಲಿನ ದರ, ಬೇಳೆ ಕಾಳುಗಳ ದರ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದು ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಸಂದರ್ಭದಲ್ಲಿ ಬ್ಯಾಂಕ್ ಕೂಡ ಜನಸಾಮಾನ್ಯರಿಗೆ ಶಾಕ್ ನೀಡಿದೆ.

ಮನೆ (House) ಖರೀದಿ ಪ್ಲಾನ್ ನಲ್ಲಿದ್ದವರಿಗೆ ದೇಶದ ಎರಡು ದೊಡ್ಡ ಬ್ಯಾಂಕ್‌ಗಳು ಆಘಾತವನ್ನುಂಟು ಮಾಡಿವೆ. ಗೃಹ ಸಾಲ (Loan) ವನ್ನು ಮತ್ತಷ್ಟು ದುಬಾರಿ ಮಾಡಿವೆ. ಐಸಿಐಸಿಐ ಬ್ಯಾಂಕ್ (Bank), ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲ ದುಬಾರಿಯಾಗಿದೆ. ಈ ಬ್ಯಾಂಕುಗಳು ತಮ್ಮ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ದರವನ್ನು (MCLR) ಹೆಚ್ಚಿಸಿವೆ.

ಬೆಂಗಳೂರು ಮೂಲದ ಕಂಪೆನಿಯಿಂದ 18 ಉದ್ಯೋಗಿಗಳು ವಜಾ!

ಹೆಚ್ಚಾಗಿದೆ ಸಾಲದ ಮೇಲಿನ ಇಎಂಐ : ಬ್ಯಾಂಕ್‌ಗಳು ಎಂಸಿಎಲ್‌ಆರ್ ಹೆಚ್ಚಿಸುವುದರಿಂದ ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲ ಸೇರಿದಂತೆ ಎಲ್ಲಾ ರೀತಿಯ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಾಗುತ್ತದೆ. ಬ್ಯಾಂಕ್‌ಗಳು ಆಗಸ್ಟ್ ಒಂದು 2023 ರಿಂದ ಹೊಸ ಬಡ್ಡಿ ದರಗಳನ್ನು ಜಾರಿಗೆ ತಂದಿವೆ. ಅಂದರೆ ಆಗಸ್ಟ್ ಒಂದರ ನಂತ್ರ ನೀವು ಈ ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಂಡರೆ ಹೆಚ್ಚು ಇಎಂಐ ಪಾವತಿಸಬೇಕಾಗುತ್ತದೆ. 

ಐಸಿಐಸಿಐ ಬ್ಯಾಂಕ್ : ಐಸಿಐಸಿಐ ಬ್ಯಾಂಕ್ ತನ್ನ ಎಂಸಿಎಲ್‌ಆರ್ ಅನ್ನು ಎಲ್ಲಾ ಅವಧಿಗಳಿಗೆ ಸುಮಾರು 5 bps ಹೆಚ್ಚಿಸಿದೆ. ಒಂದು ತಿಂಗಳ ಎಂಸಿಎಲ್‌ಆರ್ ದರವು ಸುಮಾರು ಶೇಕಡಾ 8.40ರಷ್ಟಾಗಿದೆ. 3 ತಿಂಗಳ ಎಂಸಿಎಲ್‌ಆರ್ ದರವು ಶೇಕಡಾ 8.45ರಷ್ಟಿದ್ದರೆ, 6 ತಿಂಗಳ MCLR ದರವು ಶೇಕಡಾ 8.80ರಷ್ಟಿದೆ. ಇನ್ನು ಒಂದು ವರ್ಷ ಎಂಸಿಎಲ್‌ಆರ್ ಶೇಕಡಾ 8.90 ರಷ್ಟು ಏರಿಕೆಯಾಗಿದೆ.

ಬ್ಯಾಂಕ್ ಆಫ್ ಇಂಡಿಯಾ : ಐಸಿಐಸಿಐ ಬ್ಯಾಂಕ್ ನಂತೆ ಬ್ಯಾಂಕ್ ಆಫ್ ಇಂಡಿಯಾ (BOI) ಸಹ ತನ್ನ ಎಂಸಿಎಲ್‌ಆರ್ ಅನ್ನು ಅಲ್ಪ ಅವಧಿಗೆ ಹೆಚ್ಚಿಸಿದೆ. ಬ್ಯಾಂಕ್ ಆಫ್ ಇಂಡಿಯಾದ ಓವರ್ ನೈಟ್ ದರ ಶೇಕಡಾ 7.95ರಷ್ಟಿದೆ ಇನ್ನು ಒಂದು ತಿಂಗಳ ಎಂಸಿಎಲ್‌ಆರ್ ದರ ಶೇಕಡಾ 8.15ರಷ್ಟಿದ್ದರೆ 3 ತಿಂಗಳ ಎಂಸಿಎಲ್‌ಆರ್ ದರ ಶೇಕಡಾ 8.30ಗೆ ಹೆಚ್ಚಿಸಿದೆ. 6 ತಿಂಗಳ ಎಂಸಿಎಲ್ಆರ್ ದರವನ್ನು ಶೇಕಡಾ 8.50ಕ್ಕೆ ಮತ್ತು ಒಂದು ವರ್ಷದ ಎಂಸಿಎಲ್ಆರ್ ದರವನ್ನು 8.70 ಕ್ಕೆ ಹೆಚ್ಚಿಸಲಾಗಿದೆ. ಮೂರು ವರ್ಷಗಳ ಎಂಸಿಎಲ್ಆರ್ ಅನ್ನು ಸುಮಾರು 8.90 ಕ್ಕೆ ಹೆಚ್ಚಿಸಲಾಗಿದೆ.

ಸುಧಾ ಮೂರ್ತಿ ಹೇಳಿದ ಮನಿ ಮಂತ್ರ, ಎಮರ್ಜೆನ್ಸಿ ಫಂಡ್ ಏಕಿರಬೇಕು?

ಎಂಸಿಎಲ್‌ಆರ್ ಎಂದರೇನು? : ಬ್ಯಾಂಕಿನ ಕನಿಷ್ಠ ಬಡ್ಡಿ ದರವನ್ನು ಎಂಸಿಎಲ್‌ಆರ್ ಎಂದು ಕರೆಯಲಾಗುತ್ತದೆ. ಎಲ್ಲಾ ಬ್ಯಾಂಕುಗಳು ತಮ್ಮ ಓವರ್ ನೈಟ್, 1 ತಿಂಗಳು, 3 ತಿಂಗಳು, 6 ತಿಂಗಳು, 1 ವರ್ಷ ಮತ್ತು 2 ವರ್ಷಗಳ ಎಂಸಿಎಲ್‌ಆರ್ ಅನ್ನು ಪ್ರತಿ ತಿಂಗಳು ಕಡ್ಡಾಯವಾಗಿ ಘೋಷಿಸಬೇಕು. ಎಂಸಿಎಲ್‌ಆರ್ ಅನ್ನು ಹೆಚ್ಚಿಸುವುದು ಎಂದರೆ ಗೃಹ ಸಾಲ, ವಾಹನ ಸಾಲ ಮುಂತಾದ ಕನಿಷ್ಠ ವೆಚ್ಚಕ್ಕೆ ಸಂಬಂಧಿಸಿದ ಎಲ್ಲಾ ಸಾಲಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸುವುದು ಎಂದರ್ಥ. ಸಾಲದ ಅವಧಿಯ ಆಧಾರದ ಮೇಲೆ ಬ್ಯಾಂಕ್ MCLR ಅನ್ನು ಲೆಕ್ಕಾಚಾರ ಮಾಡುತ್ತದೆ. ಅಂದರೆ ಗ್ರಾಹಕರು ಸಾಲ ಮರುಪಾವತಿ ಮಾಡುವ ಸಮಯದ ಆಧಾರದ ಮೇಲೆ ಎಂಸಿಎಲ್‌ಆರ್ ಲೆಕ್ಕಾಚಾರವನ್ನು ಮಾಡಲಾಗುತ್ತದೆ. ಎಂಸಿಎಲ್‌ಆರ್ ಹೆಚ್ಚಾದಂತೆ ಸಾಲ ಪಡೆದ ವ್ಯಕ್ತಿಯ ಇಎಂಐನಲ್ಲಿ ಹೆಚ್ಚಳವಾಗುತ್ತದೆ.