ಸ್ವಂತ ಉದ್ಯಮಕ್ಕಾಗಿ 28ಲಕ್ಷ ರೂ.ವೇತನದ ಉದ್ಯೋಗ ತ್ಯಜಿಸಿದ ಐಐಟಿ ಪದವೀಧರ, ಈಗ ಈತನ ತಿಂಗಳ ಆದಾಯ1 ಕೋಟಿ ರೂ.!
ಸಾಯಿಕೇಶ್ ಗೌಡ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಬಳಿಕ ಅಧಿಕ ವೇತನ ಉದ್ಯೋಗದ ಆಫರ್ ತ್ಯಜಿಸಿ ಕಂಟ್ರಿ ಚಿಕನ್ ಕೋ ಎಂಬ ಸಂಸ್ಥೆ ಸ್ಥಾಪಿಸಿದರು. ಕಡಿಮೆ ಅವಧಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಈ ಕಂಪನಿಯ ತಿಂಗಳ ಆದಾಯ ಈಗ ಒಂದು ಕೋಟಿ ರೂ.
Business Desk: ಐಐಟಿ, ಐಐಎಂನಂತಹ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರು ಅತ್ಯಧಿಕ ವೇತನದ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಐಐಟಿ, ಐಐಎಂನಲ್ಲಿ ಓದಿದವರು ವಿನೂತನ ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕೆಲವರು ಉದ್ಯಮದಲ್ಲಿ ಯಶಸ್ಸು ಗಳಿಸುವ ಮೂಲಕ ಹಲವರಿಗೆ ಸ್ಫೂರ್ತಿಯಾಗಿದ್ದಾರೆ ಕೂಡ. ಅಂಥವರಲ್ಲಿ ಸಾಯಿಕೇಶ್ ಗೌಡ್ ಕೂಡ ಒಬ್ಬರು. ಸಾಯಿಕೇಶ್ ಐಐಟಿ ಪದವೀಧರರಾಗಿದ್ದು, ಇತ್ತೀಚೆಗೆ ತಮ್ಮ ಉದ್ಯಮದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಾಯಿಕೇಶ್ ಸ್ವಂತ ಉದ್ಯಮ ಸ್ಥಾಪಿಸಬೇಕು ಎಂಬ ಉದ್ದೇಶದಿಂದ ವಾರ್ಷಿಕ 28ಲಕ್ಷ ರೂ. ವೇತನ ನೀಡುವ ಉದ್ಯೋಗದ ಆಫರ್ ತಿರಸ್ಕರಿಸಿದ್ದರು. ಆ ಬಳಿಕ ಕಂಟ್ರಿ ಚಿಕನ್ ಕೋ ಎಂಬ ಕಂಪನಿ ಸ್ಥಾಪಿಸಿದ ಸಾಯಿಕೇಶ್ ಪ್ರಸ್ತುತ ಮಾಸಿಕ ಒಂದು ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಸಾಯಿಕೇಶ್ ಉದ್ಯಮಿಯಾಗುವ ಕನಸು ಕಾಣುತ್ತಿರುವ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
ಸಾಯಿಕೇಶ್ ಐಐಟಿ ವಾರಣಾಸಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು. ತಕ್ಷಣವೇ ಅವರಿಗೆ ಕಂಪನಿಯೊಂದರಲ್ಲಿ 28ಲಕ್ಷ ರೂ. ವಾರ್ಷಿಕ ವೇತನದ ಉದ್ಯೋಗ ದೊರಕಿತ್ತು. ಆದರೆ, ಉದ್ಯಮಿಯಾಗುವ ಅವರ ಕನಸು ಈ ಉದ್ಯೋಗವನ್ನು ತ್ಯಜಿಸುವಂತೆ ಮಾಡಿತು. ಸಾಯಿಕೇಶ್ ಅವರ ಉತ್ಸಾಹ ಹಾಗೂ ಆಸಕ್ತಿಗಳನ್ನು ಗಮನಿಸಿದ ಹೇಮಾಂಬರ್ ರೆಡ್ಡಿ ಅವರೊಂದಿಗೆ ಉದ್ಯಮದಲ್ಲಿ ಕೈಜೋಡಿಸಲು ಮುಂದೆ ಬಂದರು. ಆ ಬಳಿಕ ಮೊಹಮ್ಮದ್ ಸಮಿ ಉದ್ದೀನ್ ಅವರ ಜೊತೆಗೆ ಸೇರಿಕೊಂಡು 'ಕಂಟ್ರಿ ಚಿಕನ್ ಕೋ.' ಪ್ರಾರಂಭಿಸಿದರು. ಹೇಮಾಂಬರ್ ರೆಡ್ಡಿ ಅವರಿಗೆ ಪೌಲ್ಟ್ರಿ ಇಂಡಸ್ಟ್ರೀಯಲ್ಲಿ ಪರಿಣನತಿ ಇತ್ತು. ಹಾಗೆಯೇ ಮಾಂಸ ಉದ್ಯಮದ ಪ್ರಕ್ರಿಯೆಗಳ ಬಗ್ಗೆ ಅರಿವಿತ್ತು. ಹೀಗಾಗಿ ಹೇಮಾಂಬರ್ ರೆಡ್ಡಿ ಅವರ ಅನುಭವ ಹಾಗೂ ಸಾಯಿಕೇಶ್ ಅವರ ಬದ್ಧತೆ ಹಾಗೂ ಪರಿಶ್ರಮದಿಂದ ಈ ಉದ್ಯಮ ಕಡಿಮೆ ಅವಧಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಿತು.
ಭಾರತದ ಅತ್ಯಂತ ಕಿರಿಯ ಬಿಲಿಯನೇರ್, ಐಐಟಿಯಲ್ಲಿ ಓದದ ಶ್ರೀಮಂತ ಕನ್ನಡಿಗ 9152 ಕೋಟಿ ರೂ ಆಸ್ತಿಗೆ ಒಡೆಯ
ಪ್ರಾರಂಭದಲ್ಲಿ ಇವರ ಉದ್ಯಮದ ಬಗ್ಗೆ ಅನೇಕರು ಕುಹಕವಾಡಿದ್ದರು. ಆದರೆ, ಸಾಯಿಕೇಶ್ ದೃಢಸಂಕಲ್ಪ ಹಾಗೂ ಪರಿಶ್ರಮ ಕಂಟ್ರಿ ಚಿಕನ್ ಕೋ ಸಂಸ್ಥೆಯನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿತು.ಇನ್ನು ಸಾಯಿಕೇಶ್ ಹಾಗೂ ಅವರ ತಂಡ ಭಾರತದಲ್ಲಿ ಮೊಟ್ಟ ಮೊದಲ ಅಧಿಕೃತ ನಾಟಿ ಕೋಳಿ ರೆಸ್ಟೋರೆಂಟ್ ಅನ್ನು ಕೂಡ ಪ್ರಾರಂಭಿಸಿದೆ. ಹೈದರಾಬಾದ್ ನಗರದ ಕುಕಟ್ಪಲಿ ಹಾಗೂ ಪ್ರಗತಿ ನಗರದಲ್ಲಿ ಈ ರೆಸ್ಟೋರೆಂಟ್ ಗಳನ್ನು ಪ್ರಾರಂಭಿಸಲಾಗಿದೆ. ಇನ್ನು ಈ ರೆಸ್ಟೋರೆಂಟ್ ಗಳ ಸ್ಥಾಪನೆಯಿಂದ 70 ಜನರಿಗೆ ಉದ್ಯೋಗ ದೊರಕಿದೆ.
ಕಂಟ್ರಿ ಚಿಕನ್ ಕೋ. ದಕ್ಷಿಣ ಭಾರತದ ರಾಜ್ಯಗಳ 15,000ಕ್ಕೂ ಅಧಿಕ ರೈತರ ಜೊತೆಗೆ ಸಂಪರ್ಕ ಹೊಂದಿದ್ದು, ಇವರಿಂದ ನಾಟಿ ಕೋಳಿಗಳನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿಸುತ್ತಿದೆ. ಇನ್ನು ಕಂಟ್ರಿ ಚಿಕನ್ ಕೋ. ರೈತರಿಗೆ ಕೋಳಿಗಳನ್ನು ಆರೋಗ್ಯಕರವಾಗಿ ಬೆಳೆಸುವ ವಿಧಾನಗಳ ಬಗ್ಗೆ ಕೂಡ ತರಬೇತಿ ನೀಡುತ್ತಿದೆ. ಈ ಅಭ್ಯಾಸದಿಂದ ಕಂಪನಿ ಗ್ರಾಹಕರಿಗೆ ರುಚಿಕರ, ಅತ್ಯುತ್ತಮ ಗುಣಮಟ್ಟದ ಕೋಳಿಗಳನ್ನು ಒದಗಿಸಲು ಸಾಧ್ಯವಾಗಿದೆ.
ಅಮೆರಿಕದಲ್ಲಿ ಕೆಲಸ ಬಿಟ್ಟು ಭಾರತಕ್ಕೆ ಬಂದ ಈ ಉದ್ಯೋಗಿ: ಈಗ 21,053 ಕೋಟಿ ಮೌಲ್ಯದ ಕಂಪನಿಗೆ ಇವರೇ ಒಡೆಯ!
ಇತ್ತೀಚಿನ ವರದಿಗಳ ಪ್ರಕಾರ 2022–2023ನೇ ಹಣಕಾಸು ಸಾಲಿನಲ್ಲಿ ಕಂಪನಿ 5 ಕೋಟಿ ರೂ. ಮೊತ್ತದ ಆದಾಯ ಗಳಿಸಿದೆ. ಅದರಲ್ಲೂ2022ರ ಜನವರಿಯಿಂದ 2023ರ ಏಪ್ರಿಲ್ ಅವಧಿಯಲ್ಲಿ ಈ ಕಂಪನಿ ಗಮನಾರ್ಹ ಬೆಳವಣಿಗೆ ದಾಖಲಿಸಿದೆ. ಇನ್ನು ಇದರ ತಿಂಗಳ ಆದಾಯ 3ಲಕ್ಷ ರೂ.ನಿಂದ 1.2 ಕೋಟಿ ರೂ. ಗೆ ಏರಿಕೆಯಾಗಿದೆ. 2023–2024ನೇ ಹಣಕಾಸು ಸಾಲಿನಲ್ಲಿ 50 ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಕಂಟ್ರಿ ಚಿಕನ್ ಹೊಂದಿದೆ.