ನಿಮ್ಮ ಆಧಾರ್ ಕಾರ್ಡ್ ದುರುಪಯೋಗ ಆಗ್ತಿರ್ಬೋದು ಎಚ್ಚರ! ಪರಿಶೀಲಿಸೋದು ಹೇಗೆ? ಇಲ್ಲಿದೆ ಡಿಟೇಲ್ಸ್
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿ ನಿಮಗೆ ಮೋಸ ಮಾಡ್ತಿರ್ಬೋದು, ಎಚ್ಚರ! ನಿಮ್ಮ ಆಧಾರ್ ಕಾರ್ಡ್ ಎಷ್ಟು ಸಿಮ್‌ಗೆ ಲಿಂಕ್ ಆಗಿದೆ ಎಂದು ನೋಡುವುದು ಹೀಗೆ...
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ, ಡಿಜಿಟಲ್ ಅರೆಸ್ಟ್ ಎಲ್ಲವೂ ಮಾಮೂಲಾಗಿಬಿಟ್ಟಿದೆ. ಅದರಲ್ಲಿಯೂ ಆಧಾರ್ ಕಾರ್ಡ್ ದುರುಪಯೋಗ ಪಡಿಸಿಕೊಂಡು ನಿಮ್ಮನ್ನು ಪೇಚಿಗೆ ಸಿಲುಕಿಸಲೂ ಅಚ್ಚರಿ ಏನಿಲ್ಲ. ನಕಲಿ ಆಧಾರ್ಕಾರ್ಡ್ ಮಾಡಿಕೊಡುವ ದೊಡ್ಡ ದಂಧೆಯೇ ಇರುವುದು ಒಂದೆಡೆಯಾದರೆ, ನಿಮ್ಮ ಆಧಾರ್ ಕಾರ್ಡ್ನ ಸಂಖ್ಯೆಯನ್ನು ಪಡೆದುಕೊಂಡು, ಅದನ್ನು ದುರುಪಯೋಗ ಪಡಿಸಿಕೊಳ್ಳುವವರೂ ಇದ್ದಾರೆ. ಹೀಗೇನಾದರೂ ನಿಮ್ಮ ಆಧಾರ್ ಕಾರ್ಡ್ ಅಪರಾಧ ಚಟುವಟಿಕೆಗಳಿಗೆ ಬಳಕೆಯಾಗಿದ್ದೇ ಆದಲ್ಲಿ, ನಿಮಗೆ ಸಂಕಷ್ಟ ತಪ್ಪಿದ್ದಲ್ಲ. ನೀವು ನಿರಪರಾಧಿ ಆದರೂ ಅದನ್ನು ಸಾಬೀತು ಮಾಡುವುದು ಬಲು ಕಷ್ಟವೇ ಆದೀತು. ಕೋರ್ಟು, ಕಚೇರಿ, ಪೊಲೀಸ್ ಠಾಣೆ ಎಂದೆಲ್ಲಾ ಅಲೆಯಬೇಕಾದೀತು ಎಚ್ಚರ!
ಹೌದು. ಈಗ ಬಹುತೇಕ ವ್ಯವಹಾರಗಳಿಗೆ ಆಧಾರ್ ಕಾರ್ಡ್ ಅಗತ್ಯವಾಗಿದೆ. ಆದ್ದರಿಂದ ನೀವು ಅದನ್ನು ಜೆರಾಕ್ಸ್ ಅಂಗಡಿಯಲ್ಲಿ ಜೆರಾಕ್ಸ್ಗೆ ಕೊಟ್ಟಿರುತ್ತೀರಿ, ಇಲ್ಲವೇ ಕೆಲವೊಮ್ಮೆ, ಪ್ರಿಂಟ್ ಔಟ್ ತೆಗೆಯಲು ಅಂಗಡಿಯವನ ಇ-ಮೇಲ್ಗೆ ನಿಮ್ಮ ಕಾರ್ಡ್ ಕಳುಹಿಸುತ್ತೀರಿ, ಅದೂ ಅಲ್ಲದೇ ಸ್ಮಾರ್ಟ್ ಕಾರ್ಡ್ ಮಾಡಿಸುವುದಕ್ಕೋ ಇಲ್ಲವೇ ಕಲರ್ ಪ್ರಿಂಟ್ ಬೇಕೆಂದೋ ನಿಮ್ಮ ಆಧಾರ್ ಕಾರ್ಡ್ ಅಂಗಡಿಗೆ ಕೊಡುವುದು ಸಾಮಾನ್ಯ. ಇದು ಅಗತ್ಯ ಕೂಡ. ಇಂಥ ಸಂದರ್ಭದಲ್ಲಿ ನಿಮ್ಮ ಆಧಾರ್ ಕಾರ್ಡ್ ಅವರ ಬಳಿ ಇರುತ್ತದೆ ಎನ್ನುವುದು ನೆನಪಿರಲಿ ಎಂದು ಇದಾಗಲೇ ಎಚ್ಚರಿಕೆಯನ್ನು ನೀಡಲಾಗಿದೆ. ಏಕೆಂದರೆ ಎಲ್ಲರೂ ಒಳ್ಳೆಯವರೇ ಆಗಿರಬೇಕೆಂದೇನೂ ಇಲ್ಲವಲ್ಲ! ಇದೊಂದು ರೀತಿಯಾದರೆ, ಯಾವುದಾದರೂ ಆನ್‌ಲೈನ್ ಚಟುವಟಿಕೆಗಳಿಗೆ ನೀವು ಆಧಾರ್ ಕಾರ್ಡ್ ನಂಬರ್ ನಮೂದು ಮಾಡಿದಾಗಲೂ ಅದೂ ಎಲ್ಲಾ ಸಂದರ್ಭಗಳಲ್ಲಿಯೂ ಸೇಫ್ ಆಗಿರುವುದಿಲ್ಲ. ಆದರೆ ನಮಗದು ಅನಿವಾರ್ಯ ಆಗಿರುತ್ತದೆ.
ಈ ವಹಿವಾಟುಗಳಿಗೆ ಕ್ಯಾಷ್ ಕೊಟ್ರೆ ಬೀಳಲಿದೆ ಭಾರಿ ದಂಡ! ಕೊಟ್ಟಷ್ಟೇ ಹಣ ದಂಡ ಕಟ್ಬೇಕು ಎಚ್ಚರ: ಇಲ್ಲಿದೆ ಡಿಟೇಲ್ಸ್
ಕಾರಣಗಳು ಏನೇ ಇರಲಿ. ಇಂಥ ಸಂದರ್ಭಗಳು ನಮ್ಮ ಕೈಮೀರಿ ನಡೆಯುವಂಥದ್ದು. ಏಕೆಂದರೆ, ಇವೆಲ್ಲಾ ಅನಿವಾರ್ಯವಾಗಿ ಮಾಡಿಸಿಕೊಳ್ಳಲೇಬೇಕಾಗುತ್ತದೆ. ಆದರೆ, ಇಂಥ ಕೆಲವು ಸಂದರ್ಭಗಳಲ್ಲಿ ನಿಮ್ಮದೇ ಆಧಾರ್ ನಂಬರ್ ಬಳಸಿ ಬೇರೆಯ ಫೋನ್ ನಂಬರ್ ಲಿಂಕ್ ಮಾಡಿಕೊಂಡರೆ ನಿಮಗೆ ಫಜೀತಿ ತಪ್ಪಿದ್ದಲ್ಲ. ಆಧಾರ್ ಕಾರ್ಡ್ನಿಂದ ಯಾವುದೇ ವ್ಯವಹಾರ ನಡೆಸುವಾಗ ನಿಮ್ಮ ಫೋನ್ ನಂಬರ್ಗೆ OTP ಬರುತ್ತದೆ. ಇದೇ ಕಾರಣಕ್ಕೆ, ನಿಮ್ಮದೇ ಆಧಾರ್ ನಂಬರ್ ಪಡೆದು, ಖದೀಮರು ತಮ್ಮದೇ ಫೋನ್ನ ಅದರ ಜೊತೆಗೆ ಲಿಂಕ್ ಮಾಡುವ ಸಾಧ್ಯತೆ ಇದೆ ಎಂದುಇದಾಗಲೇ ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಹಾಗಿದ್ದರೆ, ನಿಮ್ಮ ಆಧಾರ್ ಸಂಖ್ಯೆಗೆ ಬೇರೆ ಸಿಮ್ಕಾರ್ಡ್ ಲಿಂಕ್ ಆಗಿದೆಯೇ ಎನ್ನುವುದು ನೋಡುವುದು ಹೇಗೆ? ಇಲ್ಲಿ ಅದರ ಸ್ಟೆಪ್ ಬೈ ಸ್ಟೆಪ್ ಮಾಹಿತಿ ನೀಡಲಾಗಿದೆ.
ಮೊದಲಿಗೆ ಸಂಚಾರ್ ಸಾಥಿ ವೆಬ್‌ಸೈಟ್‌ಗೆ ಭೇಟಿ ನೀಡಿ: ಪೋರ್ಟಲ್ ಅನ್ನು ಪ್ರವೇಶಿಸಲು https://tafcop.sancharsaathi.gov.in/telecomUser/ ಲಿಂಕ್ ಕ್ಲಿಕ್ ಮಾಡಿ.
ಮೊಬೈಲ್ ಸಂಪರ್ಕಗಳನ್ನು ವೀಕ್ಷಿಸಲು ಆಯ್ಕೆಯನ್ನು ಆರಿಸಿ: ಮುಖಪುಟದಲ್ಲಿ, ನಿಮ್ಮ ಮೊಬೈಲ್ ಸಂಪರ್ಕಗಳನ್ನು ವೀಕ್ಷಿಸಲು ಆಯ್ಕೆಯನ್ನು ಆರಿಸಿ.
ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ: ನಿರ್ದಿಷ್ಟಪಡಿಸಿದ ಕ್ಷೇತ್ರದಲ್ಲಿ ನಿಮ್ಮ 10-ಅಂಕಿಯ ಮೊಬೈಲ್ ಸಂಖ್ಯೆಯನ್ನು ಒದಗಿಸಿ.
ಕ್ಯಾಪ್ಚಾ ಪರಿಶೀಲನೆ: ಪುಟದಲ್ಲಿ ಪ್ರದರ್ಶಿಸಲಾದ ಕ್ಯಾಪ್ಚಾ ಕೋಡ್ ಅನ್ನು ಟೈಪ್ ಮಾಡಿ.
OTP ಪರಿಶೀಲನೆ: ನಿಮ್ಮ ಫೋನ್‌ನಲ್ಲಿ ನೀವು ಒಂದು-ಬಾರಿ ಪಾಸ್‌ವರ್ಡ್ (OTP) ಅನ್ನು ಸ್ವೀಕರಿಸುತ್ತೀರಿ. ನಿಮ್ಮ ಗುರುತನ್ನು ಪರಿಶೀಲಿಸಲು OTP ಅನ್ನು ನಮೂದಿಸಿ.
ನಿಮ್ಮ ಲಿಂಕ್ ಮಾಡಲಾದ ಸಿಮ್ ಕಾರ್ಡ್‌ಗಳನ್ನು ವೀಕ್ಷಿಸಿ: ಪರಿಶೀಲಿಸಿದ ನಂತರ, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಪ್ರದರ್ಶಿಸುವ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ. ಒಂದು ವೇಳೆ ನಿಮ್ಮದಲ್ಲದ ನಂಬರ್, ನಿಮ್ಮದೇ ಹೆಸರಿನಲ್ಲಿ ಇದ್ದರೆ ಅದರ ಬಗ್ಗೆ ದೂರನ್ನು ಕೂಡ ಇಲ್ಲಯೇ ದಾಖಲಿಸಬಹುದು.