ಬೌದ್ದ ಧರ್ಮ ಗುರು ದಲೈ ಲಾಮಾ ಎಷ್ಟು ಆಸ್ತಿಯನ್ನು ಹೊಂದಿದ್ದಾರೆ? ಅವರಿಗೆ ಹಣ ಎಲ್ಲಿಂದ ಬರುತ್ತೆ? ಅದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಟಿಬೆಟಿ (Tibet)ಯನ್ ಬೌದ್ಧ ಗುರು (Buddhist Guru) 14 ನೇ ದಲೈ ಲಾಮಾ, ಜುಲೈ 6 ಭಾನುವಾರದಂದು 90 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಜುಲೈ 6, 1935 ರಂದು ಈಶಾನ್ಯ ಟಿಬೆಟ್ನ ಟಕ್ಟ್ಸರ್ ಪ್ರದೇಶದಲ್ಲಿ ಜನಿಸಿದ ದಲೈ ಲಾಮಾ, 90 ನೇ ವರ್ಷದಲ್ಲೂ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಶಾಂತಿ, ಕರುಣೆ ಮತ್ತು ಮಾನವ ಮೌಲ್ಯಗಳನ್ನು ಅವರು ಜಗತ್ತಿಗೆ ಬೋಧಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ ಸಂಭ್ರಮ ಒಂದು ಕಡೆಯಾದ್ರೆ ಅವರ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವ ಬಗ್ಗೆ ಸದ್ಯ ಚರ್ಚೆ ನಡೆಯುತ್ತಿದೆ. ತಮ್ಮ ಅಧಿಕೃತ ಕಚೇರಿಯಾದ ಗಾಡೆನ್ ಫೋಡ್ರಾಂಗ್ ಟ್ರಸ್ಟ್ ಮಾತ್ರ ಉತ್ತರಾಧಿಕಾರಿಯನ್ನು ಘೋಷಿಸುವ ಹಕ್ಕನ್ನು ಹೊಂದಿದೆ ಅಂತ ದಲೈ ಲಾಮ ಕೆಲ ದಿನಗಳ ಹಿಂದೆಯೇ ಹೇಳಿದ್ದಾರೆ.
ದಲೈ ಲಾಮಾ (Dalai Lama) ಸಂಪತ್ತು ಎಷ್ಟಿದೆ? : ದಲೈ ಲಾಮಾ ಸಂಪತ್ತು ಸದ್ಯ ಎಲ್ಲರ ಗಮನ ಸೆಳೆದಿದೆ. ಅಮೆರಿಕನ್ ಡಿಜಿಟಲ್ ದಿನಪತ್ರಿಕೆ ಲಾ ವೋಸ್ ಡಿ ನ್ಯೂಯಾರ್ಕ್ ಪ್ರಕಾರ, ದಲೈ ಲಾಮಾ ಒಬ್ಬ ಮಿಲಿಯನೇರ್. ಅವರ ನಿವ್ವಳ ಮೌಲ್ಯ ಸುಮಾರು 150 ಮಿಲಿಯನ್ ಡಾಲರ್ ಅಂದ್ರೆ ಸುಮಾರು 1,285 ಕೋಟಿ ಎಂದು ಅಂದಾಜಿಸಲಾಗಿದೆ. ಈ ಸಂಪತ್ತು ಕೆಲವು ಹಾಲಿವುಡ್ ಸೆಲೆಬ್ರಿಟಿಗಳ ಸಂಪತ್ತಿಗಿಂತ ಹೆಚ್ಚಿದೆ.
ದಲೈ ಲಾಮಾ ಸಂಪತ್ತಿನ ಮೂಲ? : ದಲೈ ಲಾಮಾ ಸಂಪತ್ತಿನ ಬಹುಪಾಲು ಭಾಗ ಟಿಬೆಟಿಯನ್ ರಾಜಕೀಯದಿಂದ ಬಂದಿದೆ. 2011 ರಲ್ಲಿ ರಾಜಕೀಯ ಜವಾಬ್ದಾರಿಗಳಿಗೆ ದಲೈ ಲಾಮಾ ರಾಜೀನಾಮೆ ನೀಡಿದ್ದಾರೆ. ಆದ್ರೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ದಲೈ ಲಾಮಾ ಆದಾಯ ಯಾವುದೇ ಒಂದು ಸಾಂಪ್ರದಾಯಿಕ ಮೂಲವನ್ನು ಆಧರಿಸಿಲ್ಲ.
ದೇಣಿಗೆ : ಟಿಬೆಟಿಯನ್ ಸಮುದಾಯ, ಬೌದ್ಧ ಅನುಯಾಯಿಗಳು ಮತ್ತು ಪ್ರಪಂಚದಾದ್ಯಂತದ ಮಾನವ ಹಕ್ಕುಗಳ ಸಂಸ್ಥೆಗಳಿಂದ ಹಣಕಾಸಿನ ನೆರವು ನಿರಂತರವಾಗಿ ಸಿಗ್ತಿದೆ. ಈ ದೇಣಿಗೆಯನ್ನು ಸಾಮಾನ್ಯವಾಗಿ ಅವರ ಧ್ಯೇಯಗಳು, ಮಠಗಳು ಮತ್ತು ಮಾನವೀಯ ಕಾರ್ಯಗಳಿಗಾಗಿ ಖರ್ಚು ಮಾಡಲಾಗುತ್ತದೆ.
ಪುಸ್ತಕಗಳು ಮತ್ತು ರಾಜಮನೆತನ : ದಲೈ ಲಾಮಾ ಬರೆದ "ದಿ ಆರ್ಟ್ ಆಫ್ ಹ್ಯಾಪಿನೆಸ್", "ಫ್ರೀಡಮ್ ಇನ್ ಎಕ್ಸೈಲ್" ಮತ್ತು "ದಿ ಬುಕ್ ಆಫ್ ಜಾಯ್" ನಂತಹ ಪುಸ್ತಕಗಳು ವಿಶ್ವಾದ್ಯಂತ ಹೆಚ್ಚು ಮಾರಾಟವಾಗಿವೆ. ಈ ಪುಸ್ತಕಗಳ ಮಾರಾಟವು ವರ್ಷಕ್ಕೆ ಲಕ್ಷಾಂತರ ಡಾಲರ್ ಮೌಲ್ಯದ ರಾಯಧನವನ್ನು ತರುತ್ತದೆ. ದಲೈ ಲಾಮಾ 58 ಕ್ಕೂ ಹೆಚ್ಚು ಪುಸ್ತಕಗಳ ಲೇಖಕರಾಗಿದ್ದಾರೆ. ಅವರು 7 ಸಾಕ್ಷ್ಯಚಿತ್ರಗಳ ಮೂಲಕ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.
ಭಾಷಣ ಮತ್ತು ವಿಚಾರ ಸಂಕಿರಣಗಳು : ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಶಾಂತಿ, ಧ್ಯಾನ ಮತ್ತು ಮಾನವ ಮೌಲ್ಯಗಳ ಬಗ್ಗೆ ಮಾತನಾಡುತ್ತಾರೆ. ಈ ಕಾರ್ಯಕ್ರಮಗಳಿಗೆ ಹಾಜರಾಗಲು ಸಂಘಟಕರು ಅವರಿಗೆ ಭಾರಿ ಶುಲ್ಕವನ್ನು ಪಾವತಿಸ್ತಾರೆ. ಇದು ಅವರ ಆದಾಯದ ಪ್ರಮುಖ ಭಾಗವಾಗಿದೆ.
ದಲೈ ಲಾಮಾಗೆ ಬಂದ ಪ್ರಶಸ್ತಿ : ದಲೈ ಲಾಮಾ ಅವರಿಗೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗಿದೆ. ಇವುಗಳಲ್ಲಿ 1989 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ, 2006 ರಲ್ಲಿ ಯುಎಸ್ ಕಾಂಗ್ರೆಸ್ಸಿನ ಚಿನ್ನದ ಪದಕ, 2012 ರಲ್ಲಿ ಟೆಂಪಲ್ಟನ್ ಪ್ರಶಸ್ತಿ, 2007 ರಲ್ಲಿ ಅಹಿಂಸಾ ಪ್ರಶಸ್ತಿ, 1994 ರಲ್ಲಿ ಸ್ವಾತಂತ್ರ್ಯ ಪದಕ ಮತ್ತು 1959 ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಸೇರಿವೆ. ಈ ಎಲ್ಲಾ ಪ್ರಶಸ್ತಿಗಳು ಗೌರವ ಪ್ರಶಸ್ತಿ ಮಾತ್ರವಲ್ಲ, ಆಗಾಗ್ಗೆ ಆರ್ಥಿಕ ಬಹುಮಾನವನ್ನೂ ಅವರು ಪಡೆದಿದ್ದಾರೆ. ದಲೈ ಲಾಮಾ ಪ್ರಪಂಚದಾದ್ಯಂತ ಧಾರ್ಮಿಕ ನಾಯಕರಷ್ಟೇ ಅಲ್ಲ, ಪ್ರಭಾವಿ ಚಿಂತಕ, ಬರಹಗಾರ ಮತ್ತು ವಿಶ್ವ ಶಾಂತಿಯ ಸಂಕೇತ ಎಂದೂ ಪ್ರಸಿದ್ಧರಾಗಿದ್ದಾರೆ. ಅವರು ತಮ್ಮ ಸಂಪತ್ತನ್ನು ಸಮಾಜ, ಶಿಕ್ಷಣ ಮತ್ತು ಆಧ್ಯಾತ್ಮಿಕ ಪ್ರಸರಣಕ್ಕಾಗಿ ಬಳಸಿದ್ದಾರೆ.