ಸೇವಿಂಗ್ ಅಕೌಂಟ್‌ನಲ್ಲಿ ಎಷ್ಟು ಹಣ ಜಮೆ ಮಾಡಬಹುದು? ಗಡಿ ದಾಟಿದ್ರೆ ಮನೆಗೆ ಬರುತ್ತೆ ನೋಟಿಸ್?
ಉಳಿತಾಯ ಖಾತೆಯಲ್ಲಿ ಹೆಚ್ಚಿನ ವಹಿವಾಟು ನಡೆಸಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರಬಹುದು. ಪ್ಯಾನ್ ಕಾರ್ಡ್ ಇಲ್ಲದೆ ಹೆಚ್ಚಿನ ಮೊತ್ತದ ವಹಿವಾಟು ನಡೆಸಿದರೆ ಐಟಿ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ. ತೆರಿಗೆ ಸಲಹೆಗಾರರನ್ನು ಸಂಪರ್ಕಿಸುವುದು ಉತ್ತಮ.
ಇಂದು ಹಣವನ್ನು ಸುರಕ್ಷಿತವಾಗಿರಿಸಲು ಬ್ಯಾಂಕ್‌ಗಳಲ್ಲಿರಿಸುತ್ತಾರೆ. ಮಧ್ಯಮ ಮತ್ತು ಕೆಳ ವರ್ಗದ ಜನರು ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಹಂತ ಹಂತವಾಗಿ ಜಮೆ ಮಾಡುತ್ತಾರೆ. ಉಳಿತಾಯ ಖಾತೆಗಳಲ್ಲಿ ಹಣ ಜಮೆ ಮತ್ತು ಡ್ರಾ ಮಾಡೋದರ ಮೇಲೆ ಕೆಲವು ನಿಬಂಧನೆಗಳಿವೆ. ಒಂದು ವೇಳೆ ನಿಗದಿಗಿಂತ ಅಧಿಕ ಹಣ ಜಮೆ ಮಾಡಿದ್ರೆ ಆದಾಯ ತೆರಿಗೆ ಇಲಾಖೆಯ ನೋಟಿಸ್ ನಿಮ್ಮ ಮನೆಗೆ ಬರುತ್ತದೆ.
ಹಣಕಾಸು ತಜ್ಞರ ಪ್ರಕಾರ, ಒಂದು ಆರ್ಥಿಕ ವರ್ಷದಲ್ಲಿ ಅಂದ್ರೆ (1ನೇ ಏಪ್ರಿಲ್‌ನಿಂದ 31ರ ಮಾರ್ಚ್‌ವರೆಗೆ) ಉಳಿತಾಯ ಖಾತೆಯಲ್ಲಿನ ಠೇವಣಿ ಮತ್ತು ಹಿಂಪಡೆಯುವ ಮೊತ್ತ 10 ಲಕ್ಷ ರೂಪಾಯಿ ಮೀರಬಾರದು. ಒಂದು ವೇಳೆ ಹಣಕಾಸಿನ ವ್ಯವಹಾರ 10 ಲಕ್ಷ ರೂ.ಗಳಿಗಿಂತ ಅಧಿಕವಾದ್ರೆ ಆದಾಯ ತೆರಿಗೆ ಇಲಾಖೆಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯ ನಿಯಮ ಸೆಕ್ಷನ್ 269ST ಅಡಿಯಲ್ಲಿ ಯಾವುದೇ ವ್ಯಕ್ತಿ ಒಂದು ದಿನದಲ್ಲಿ 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣದ ವಹಿವಾಟು ನಡೆಸುವಂತಿಲ್ಲ.
ಗ್ರಾಹಕರು ಒಂದು ದಿನದಲ್ಲಿ 50 ಸಾವಿರ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿದ್ರೆ ಕಡ್ಡಾಯವಾಗಿ ಪ್ಯಾನ್ ಕಾರ್ಡ್ ನೀಡಬೇಕಾಗುತ್ತದೆ. ಒಂದು ವೇಳೆ ನೀವು ಪ್ಯಾನ್ ಕಾರ್ಡ್ ಹೊಂದಿರದಿದ್ರೆ ಫಾರ್ಮ್ 60 ಅಥವಾ 61 ಭರ್ತಿ ಮಾಡಿ ಬ್ಯಾಂಕ್‌ಗೆ ಸಲ್ಲಿಸಬೇಕಾಗುತ್ತದೆ. Tax2Win ನ CEO, ಸ್ಥಾಪಕ ಅಭಿಷೇಕ್ ಸೋನಿ ಪ್ರಕಾರ, 10 ಲಕ್ಷ ರೂ.ಗಿಂತ ಹೆಚ್ಚಿನ ನಗದು ಠೇವಣಿಗಳನ್ನು ಹೆಚ್ಚಿನ ಮೌಲ್ಯದ ವಹಿವಾಟು ಎಂದು ವರ್ಗೀಕರಿಸಲಾಗಿದೆ. ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಸೆಕ್ಷನ್ 114B ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಗೆ ಹೆಚ್ಚಿನ ಮೌಲ್ಯದ ವಹಿವಾಟಿನ ಬಗ್ಗೆ ಮಾಹಿತಿಯನ್ನು ನೀಡುತ್ತವೆ.
ಉಳಿತಾಯ ಖಾತೆಗಳ ಮೂಲಕ ಗ್ರಾಹಕರು ಯಾವುದೇ ಪ್ಯಾನ್ ಕಾರ್ಡ್ ಇಲ್ಲದೇ ನಗದು ವಹಿವಾಟು ನಡೆಸಿದ್ರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುತ್ತದೆ. ನೀವು ನಿಮ್ಮ ಹಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ನೋಟಿಸ್‌ನಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸಲ್ಲಿಸಬೇಕು. ಉದಾಹರಣೆಗೆ ಬ್ಯಾಂಕ್ ಹೇಳಿಕೆಗಳು, ಹೂಡಿಕೆ ದಾಖಲೆಗಳು ಅಥವಾ ಪಿತ್ರಾರ್ಜಿತ ದಾಖಲೆಗಳನ್ನು ಒಳಗೊಂಡಿರಬಹುದು. ವಹಿವಾಟು ವರದಿ ಮಾಡುವ ಬಗ್ಗೆ ನಿಮಗೆ ಯಾವುದೇ ಸಂದೇಹಗಳಿದ್ದರೆ, ಅನುಭವಿ ತೆರಿಗೆ ಸಲಹೆಗಾರರನ್ನು ಸಂಪರ್ಕಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಮನೆಯಲ್ಲಿಯೇ ಕುಳಿತು ಆಗಿ ಲಕ್ಷಾಧಿಪತಿ, ಕೋಟ್ಯಧಿಪತಿ; ಕೆಲವರಿಗೆ ಮಾತ್ರ ಗೊತ್ತಿರೋ ವ್ಯವಹಾರದ್ದು 99% ರಷ್ಟಿದೆ ಸಕ್ಸಸ್ ರೇಟ್
ಮಿನಿಮಮ್ ಬ್ಯಾಲೆನ್ಸ್
ಇಂದು ಬ್ಯಾಂಕ್‌ಗಳು ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮೇಂಟೈನ್ (Minimum Balance Maintain) ಮಾಡದಿದ್ದರೆ ಗ್ರಾಹಕರಿಗೆ ದಂಡ ವಿಧಿಸಲಾಗುತ್ತದೆ. ಬಹುದಿನಗಳ ಬಳಿಕ ಖಾತೆಗೆ ಹಣ ಜಮೆ ಆದ್ರೆ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡದ್ದಕ್ಕೆ ದಂಡ ಕಡಿತಗೊಳಿಸಲಾಗುತ್ತದೆ. ಈ ಮುಖೇನ ಬ್ಯಾಂಕುಗಳು ಮಿನಿಮಿಮ್ ಬ್ಯಾಲೆನ್ಸ್ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ತಮ್ಮ ಬಳಿಯಲ್ಲಿ ಉಳಿಸಿಕೊಳ್ಳುತ್ತವೆ.
ಇದನ್ನೂ ಓದಿ: 1 ಲಕ್ಷಕ್ಕೆ, 17 ದಿನದಲ್ಲಿ 100 ಕೋಟಿ ಸಂಪಾದನೆ; ನಂಬಲು ಆಗ್ತಿಲ್ವಾ? ಇಲ್ಲಿ ಎಲ್ಲವೂ ಸಾಧ್ಯ!