ಚಿನ್ನಕ್ಕೂ ಭಾರತೀಯರಿಗೂ ಬಿಡಿಸಲಾಗದ ನಂಟು.ಚಿನ್ನ ಬರೀ ಆಭರಣವಾಗಿಯಷ್ಟೇ ಪ್ರಿಯವಲ್ಲ,ಬದಲಿಗೆ ಹೂಡಿಕೆ ಆಯ್ಕೆಯಾಗಿ ಕೂಡ ಅಚ್ಚುಮೆಚ್ಚು.ಆದ್ರೆ ಎಷ್ಟು ಚಿನ್ನ ಖರೀದಿಸಿದ್ರೆ ತೆರಿಗೆ ಪಾವತಿಸಬೇಕು? ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಲು ಆದಾಯ ತೆರಿಗೆ ಕಾಯ್ದೆ ಅವಕಾಶ ನೀಡಿದೆ? ಇಲ್ಲಿದೆ ಮಾಹಿತಿ. 

Business Desk: ಭಾರತೀಯರಿಗೆ ಚಿನ್ನ (Gold) ಖರೀದಿಗೆ (Purchase) ಹತ್ತಾರು ಕಾರಣಗಳಿರುತ್ತವೆ. ಮದುವೆ (Wedding), ನಾಮಕರಣ, ಹಬ್ಬ ಹರಿದಿನದ ನೆಪದಲ್ಲಿ ಚಿನ್ನದ ಒಡವೆಗಳನ್ನು ಖರೀದಿಸಿ ತೊಟ್ಟು ಸಂಭ್ರಮಿಸೋದು ಮಹಿಳೆಯರಿಗೆ ಬಲುಪ್ರಿಯ. ಇನ್ನೊಂದು ಆಯಾಮದಲ್ಲಿ ನೋಡಿದ್ರೆ ಚಿನ್ನ ಉತ್ತಮ ಹೂಡಿಕೆ (Investment) ಮಾಧ್ಯಮವೂ ಹೌದು. ಚಿನ್ನ ಅಪತ್ಭಾಂಧವ ಎಂಬ ನಂಬಿಕೆ ಭಾರತೀಯರಲ್ಲಿ ಹಿಂದಿನಿಂದಲೂ ಬೆಳೆದು ಬಂದಿದೆ. ಇದೇ ಕಾರಣಕ್ಕೆ ಚಿನ್ನದ ಮೇಲೆ ಹೂಡಿಕೆ ಮಾಡಲು ಕೆಲವರು ಹಿಂದೆ ಮುಂದೆ ನೋಡೋದಿಲ್ಲ. ಆದ್ರೆ ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಿರಬೇಕು ಎಂಬುದಕ್ಕೂ ಮಿತಿಯಿದೆ. ಅದಕ್ಕಿಂತ ಹೆಚ್ಚು ಖರೀದಿಸಿದ್ರೆ (Purchase) ಅಥವಾ ಹೊಂದಿದ್ರೆ (Collect) ತೆರಿಗೆ (Tax) ಪಾವತಿಸಬೇಕು.

ಎಷ್ಟು ಚಿನ್ನ ಹೊಂದಬಹುದು?
ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಬಹುದು ಎಂಬ ಬಗ್ಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಸ್ಪಷ್ಟವಾಗಿ ವಿವರಿಸಿದೆ. ಹಿರಿಯರಿಂದ ಬಳುವಳಿಯಾಗಿ ಬಂದಿರೋವಂಥದ್ದು ಅಥವಾ ನಿಗದಿತ ಆದಾಯ ಮೂಲಗಳಿಂದ ಖರೀದಿಸಿದ ಚಿನ್ನದ ಸಂಗ್ರಹಣೆಗೆ ಮಿತಿಯಿಲ್ಲ. ಆದ್ರೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಬಳಿ ಎಷ್ಟು ಚಿನ್ನವಿದ್ರೆ ಅದನ್ನು ವಶಕ್ಕೆ ಪಡೆದುಕೊಳ್ಳುವುದಿಲ್ಲ ಎಂಬ ಬಗ್ಗೆ ವಿವರಣೆ ನೀಡಲಾಗಿದೆ. ನಿಗದಿತ ಮಿತಿಯೊಳಗೆ ಚಿನ್ನ ಹೊಂದಿದ್ರೆ ಆದಾಯ ತೆರಿಗೆ ದಾಳಿ ಸಂದರ್ಭದಲ್ಲಿ ಅದನ್ನು ವಶಪಡಿಸಿಕೊಳ್ಳುವುದಿಲ್ಲ ಎಂಬುದನ್ನು ಸಿಬಿಡಿಟಿ ಸ್ಪಷ್ಟಪಡಿಸಿದೆ. ಅವಿವಾಹಿತ ಮಹಿಳೆ 250 ಗ್ರಾಂ ತನಕ ಚಿನ್ನ ಹೊಂದಬಹುದು. ವಿವಾಹಿತ ಮಹಿಳೆ 500ಗ್ರಾಂ ಚಿನ್ನ ಹೊಂದಬಹುದು. ಪುರುಷ 100ಗ್ರಾಂ ಚಿನ್ನ ಹೊಂದಿರಬಹುದು. ಇನ್ನು ಮಗಳು ತಾಯಿಯಿಂದ ಬಳುವಳಿಯಾಗಿ ಬಂದ 200ಗ್ರಾಂ ಚಿನ್ನ ಹೊಂದಲು ಅವಕಾಶವಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಚಿನ್ನ ಒಬ್ಬ ವ್ಯಕ್ತಿ ಬಳಿಯಿದ್ರೆ ಅದಕ್ಕೆ ಆತ ತೆರಿಗೆ ಪಾವತಿಸಬೇಕಾಗುತ್ತದೆ.

New wage code: ಜುಲೈ 1 ರಿಂದ ಜಾರಿಯಾಗುವ ಹೊಸ ವೇತನ ಸಂಹಿತೆ ಏನು?

ಯಾವ ರೂಪದ ಚಿನ್ನ?
ಇಲ್ಲಿ ಚಿನ್ನ ಎಂದ ತಕ್ಷಣ ಬರೀ ಆಭರಣ ಎಂದು ಅರ್ಥವಲ್ಲ. ಚಿನ್ನದ ನಾಣ್ಯಗಳು, ಚಿನ್ನದ ಗಟ್ಟಿಗಳು ಹಾಗೂ ಇತರ ಮಾದರಿಯ ಚಿನ್ನವೂ ಸೇರಿದೆ.

ದಾಖಲೆಗಳನ್ನು ಜೋಪಾನ ಮಾಡಿ
ಚಿನ್ನ ಖರೀದಿಸಿದ ಬಳಿಕ ಟ್ಯಾಕ್ಸ್ ಇನ್ ವಾಯ್ಸ್ ಅನ್ನು ಹಾಗೆಯೇ ಇಟ್ಟುಕೊಳ್ಳಿ. ತೆರಿಗೆ ತಜ್ಞರ ಪ್ರಕಾರ ನಿಮ್ಮ ಬಳಿ ಚಿನ್ನದ ಮೇಲಿನ ಹೂಡಿಕೆಯ ಮೂಲದ ಮಾಹಿತಿಯಿದ್ರೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. 2016ರ ಡಿಸೆಂಬರ್ 1ರಂದು ಸಿಬಿಡಿಟಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಇದೇ ರೀತಿ ನಿಮಗೆ ಯಾರಾದ್ರೂ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ರೆ ಕೂಡ ಅದರ ದಾಖಲೆಯನ್ನು ಇಟ್ಟುಕೊಂಡಿರಿ.

ಚಿನ್ನ ಖರೀದಿ ಮೇಲೆ ತೆರಿಗೆ
ಚಿನ್ನದ ಖರೀದಿ ಮೇಲೆ ಶೇ.3ರಷ್ಟು ಸರಕು ಹಾಗೂ ಸೇವಾ ತೆರಿಗೆ (GST) ವಿಧಿಸಲಾಗುತ್ತದೆ. ಹಾಗೆಯೇ ಮೇಕಿಂಗ್ ಚಾರ್ಜ್ ಮೇಲೆ ಶೇ.5. ಒಂದು ವೇಳೆ ನೀವು ಹಳೆಯ ಚಿನ್ನವನ್ನು (ಉದಾ: ಗಟ್ಟಿ ಅಥವಾ ನಾಣ್ಯಗಳು ಇತ್ಯಾದಿ) ಹೊಸ ಆಭರಣಕ್ಕೆ ಎಕ್ಸ್ ಚೇಂಜ್ ಮಾಡುತ್ತಿದ್ರೆ ಆಗ ಎಕ್ಸ್ ಚೇಂಜ್ ಮಾಡುತ್ತಿರುವ ಚಿನ್ನದ ತೂಕದ ಮೇಲೆ ಯಾವುದೇ ಜಿಎಸ್ ಟಿ ವಿಧಿಸಲಾಗೋದಿಲ್ಲ. ಒಂದು ವೇಳೆ ಆ ತೂಕವನ್ನು ಮೀರಿದ ಚಿನ್ನ ಖರೀದಿಸಿದ್ರೆ ಆಗ ಮಾತ್ರ ಜಿಎಸ್ ಟಿ ವಿಧಿಸಲಾಗುತ್ತದೆ.

Personal Finance: ಉಳಿತಾಯ ಖಾತೆ ಹೊಂದಿದ್ರೆ ಈ ವಿಷ್ಯ ಗಮನದಲ್ಲಿರಲಿ

ಚಿನ್ನದ ಉಡುಗೊರೆ ಮೇಲೆ ಟ್ಯಾಕ್ಸ್ 
ಒಂದು ವೇಳೆ ನೀವು ಚಿನ್ನದ ಆಭರಣಗಳು ಅಥವಾ ಇನ್ಯಾವುದೇ ಮಾದರಿಗಳನ್ನು ಉಡುಗೊರೆ ರೂಪದಲ್ಲಿ ಸ್ವೀಕರಿಸಿದ್ರೆ ಆಗ ಅದರ ಮಾರುಕಟ್ಟೆ ಮೌಲ್ಯ 50,000ರೂ. ಮೀರಿದ್ರೆ ಆಗ ತೆರಿಗೆ ವಿಧಿಸಲಾಗುತ್ತದೆ. 'ಇತರ ಮೂಲಗಳಿಂದ ಆದಾಯ' ಎಂಬ ವರ್ಗದಡಿ ತೆರಿಗೆ ವಿಧಿಸಲಾಗುತ್ತದೆ.