ಕಳೆದ ವರ್ಷ ದೇಶದಲ್ಲಿ 74 ಮಿಲಿಯನ್ ತೆರಿಗೆ ರಿಟರ್ನ್ ಗಳನ್ನು ಫೈಲ್ ಮಾಡಲಾಗಿದೆ.ಇದರಲ್ಲಿ 51.6 ಮಿಲಿಯನ್ ಐಟಿಆರ್ ಗಳು ಶೂನ್ಯ ತೆರಿಗೆ ಭಾದ್ಯತೆ ಹೊಂದಿವೆ.
Business Desk: 2023ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಜುಲೈ 31 ಅಂತಿಮ ದಿನವಾಗಿದೆ. ಹೀಗಿರುವಾಗ ಕಳೆದ ವರ್ಷ (2022-23ನೇ ಮೌಲ್ಯಮಾಪನ ವರ್ಷ) ದೇಶದಲ್ಲಿ ಎಷ್ಟು ಜನರು ತಮ್ಮ ಆದಾಯ ತೆರಿಗೆ ರಿಟರ್ನ್ ನಲ್ಲಿ (ಐಟಿಆರ್ ) ತೆರಿಗೆ ಭಾದ್ಯತೆಯನ್ನು ಘೋಷಿಸಿದ್ದಾರೆ? ಉತ್ತರ ಕೇಳಿದ್ರೆ ನೀವು ಶಾಕ್ ಆಗ್ತೀರಾ! ಹೌದು, ಸೋಮವಾರ ಸಂಸತ್ತಿನಲ್ಲಿ ನೀಡಿರುವ ಮಾಹಿತಿ ಅನ್ವಯ 2022-23ನೇ ಮೌಲ್ಯಮಾಪನ ವರ್ಷದಲ್ಲಿ 74 ಮಿಲಿಯನ್ ತೆರಿಗೆ ರಿಟರ್ನ್ ಗಳನ್ನು ಫೈಲ್ ಮಾಡಲಾಗಿದೆ. ಇದರಲ್ಲಿ 51.6 ಮಿಲಿಯನ್ ಐಟಿಆರ್ ಗಳು ಶೂನ್ಯ ತೆರಿಗೆ ಭಾದ್ಯತೆ ಹೊಂದಿವೆ. ಕೇವಲ 9 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ 10 ಲಕ್ಷಕ್ಕೂ ಅಧಿಕ ಶೂನ್ಯವಲ್ಲದ ಆದಾಯ ತೆರಿಗೆ ರಿಟರ್ನ್ ಗಳು ಸಲ್ಲಿಕೆಯಾಗಿವೆ. ಅಂದರೆ 2022-23ನೇ ಮೌಲ್ಯಮಾಪನ ವರ್ಷದಲ್ಲಿ ಕೇವಲ 22.4 ಮಿಲಿಯನ್ ಜನರು ಮಾತ್ರ ಶೂನ್ಯವಲ್ಲದ ಆದಾಯ ತೆರಿಗೆ ರಿಟರ್ನ್ ಗಳನ್ನು ಫೈಲ್ ಮಾಡಿದ್ದಾರೆ. ಸರ್ಕಾರದ ಅಂದಾಜಿನ ಪ್ರಕಾರ ದೆಹಲಿಯ ಜನಸಂಖ್ಯೆ 21.4 ಮಿಲಿಯನ್. ಹೀಗಾಗಿ ಇಡೀ ದೇಶದಲ್ಲಿ ಶೂನ್ಯವಲ್ಲದ ಐಟಿಆರ್ ಸಲ್ಲಿಕೆ ಮಾಡಿರೋರ ಸಂಖ್ಯೆ ಹೆಚ್ಚುಕಡಿಮೆ ದೆಹಲಿಯ ಜನಸಂಖ್ಯೆಯಷ್ಟಿದೆ.
ಇನ್ನು ಅತೀಹೆಚ್ಚು ಶೂನ್ಯವಲ್ಲದ ಐಟಿಆರ್ ಸಲ್ಲಿಕೆಯಾಗಿರೋದು ಮಹಾರಾಷ್ಟ್ರದಲ್ಲಿ. ಈ ರಾಜ್ಯದಲ್ಲಿ ಒಟ್ಟು 3.9 ಮಿಲಿಯನ್ ಐಟಿಆರ್ ಗಳು ಸಲ್ಲಿಕೆಯಾಗಿವೆ. ಇನ್ನು ಎರಡನೇ ಅತೀಹೆಚ್ಚು ಐಟಿಆರ್ ಗಳು ಸಲ್ಲಿಕೆಯಾಗಿರೋದು ಉತ್ತರ ಪ್ರದೇಶದಲ್ಲಿ. ಇಲ್ಲಿ ಒಟ್ಟು 1.9 ಮಿಲಿಯನ್ ಐಟಿಆರ್ ಗಳು ಸಲ್ಲಿಕೆಯಾಗಿವೆ. ಇನ್ನು ಕರ್ನಾಟಕ ಹಾಗೂ ತಮಿಳುನಾಡು ಮೂರನೇ ಸ್ಥಾನದಲ್ಲಿದ್ದು, ಈ ಎರಡೂ ರಾಜ್ಯಗಳಲ್ಲಿ ತಲಾ 1.8 ಮಿಲಿಯನ್ ಐಟಿಆರ್ ಗಳು ಸಲ್ಲಿಕೆಯಾಗಿವೆ. ಅತೀಹೆಚ್ಚು ಶೂನ್ಯವಲ್ಲದ ಐಟಿಆರ್ ಗಳು ಸಲ್ಲಿಕೆಯಾಗಿರುವ ಟಾಪ್ 5 ರಾಜ್ಯಗಳು ಒಟ್ಟು ಸಲ್ಲಿಕೆಯಾಗಿರುವ ರಿಟರ್ನ್ ಗಳಲ್ಲಿ ಶೇ.50ರಷ್ಟನ್ನು ಹೊಂದಿವೆ. ಇನ್ನು ಈಗಾಗಲೇ ಹೆಸರಿಸಿರುವ ರಾಜ್ಯಗಳನ್ನು ಹೊರತುಪಡಿಸಿ ಅತೀಹೆಚ್ಚು ಶೂನ್ಯವಲ್ಲದ ಐಟಿಆರ್ ಗಳು ಸಲ್ಲಿಕೆಯಾಗಿರುವ ರಾಜ್ಯಗಳಲ್ಲಿ ಗುಜರಾತ್, ದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ ಹಾಗೂ ತೆಲಂಗಾಣ ಸೇರಿವೆ.
ಐಟಿಆರ್ ಸಲ್ಲಿಕೆ ಮಾಡೋರಿಗೆ ಈ ನಿಯಮ ತಿಳಿದಿರಲಿ;ಬ್ಯಾಂಕ್ ನಗದು ವಿತ್ ಡ್ರಾಗೂ ಶೇ.2ರಷ್ಟುTDS ಕಡಿತ
ಇನ್ನು ಕೆಲವು ಈಶಾನ್ಯ ರಾಜ್ಯಗಳಲ್ಲಿ ಶೂನ್ಯವಲ್ಲದ ಒಂದೇ ಒಂದು ಐಟಿಆರ್ ಕೂಡ ಸಲ್ಲಿಕೆಯಾಗಿಲ್ಲ. ಅರುಣಾಚಲ ಪ್ರದೇಶ, ಸಿಕ್ಕಿಂ, ಮೇಘಾಲಯ, ತ್ರಿಪುರಾ, ಮಿಜೋರಾಂ, ಮಣಿಪುರ ಹಾಗೂ ನಾಗಲ್ಯಾಂಡ್ ನಲ್ಲಿ ಸಲ್ಲಿಕೆಯಾಗಿರೋದು ಎಲ್ಲವೂ ಶೂನ್ಯ ತೆರಿಗೆ ಐಟಿಆರ್ ಗಳಾಗಿವೆ.
ITR Filing:ಜು. 31ರೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ಬೀಳುತ್ತೆ 5 ಸಾವಿರ ರೂ. ದಂಡ; ತೆರಿಗೆ ರೀಫಂಡ್ ಕೂಡ ಇಲ್ಲ!
4 ಕೋಟಿಗೂ ಅಧಿಕ ಐಟಿಆರ್ ಸಲ್ಲಿಕೆ
ಇಲ್ಲಿಯ ತನಕ 2022-23ನೇ ಹಣಕಾಸು ಸಾಲಿಗೆ ಸಂಬಂಧಿಸಿ ಸುಮಾರು ನಾಲ್ಕು ಕೋಟಿಗಿಂತಲೂ ಅಧಿಕ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಯಾಗಿದೆ. ಇದರಲ್ಲಿ ಸುಮಾರು ಶೇ.7ರಷ್ಟು ಹೊಸದು ಅಥವಾ ಮೊದಲ ಬಾರಿಗೆ ಸಲ್ಲಿಕೆಯಾಗಿರೋದು ಎಂದು ಸಿಬಿಡಿಟಿ ಮುಖ್ಯಸ್ಥ ನಿತಿನ್ ಗುಪ್ತ ತಿಳಿಸಿದ್ದಾರೆ. ಐಟಿಆರ್ ಅನ್ನು ಬೇಗ ಸಲ್ಲಿಕೆ ಮಾಡೋದ್ರಿಂದ ನೀವು ಕ್ಲೇಮ್ ಮಾಡಬಹುದಾದ ಎಲ್ಲ ಕಡಿತಗಳನ್ನು ಲೆಕ್ಕ ಹಾಕಲು ಸಾಕಷ್ಟು ಸಮಯ ಸಿಗುತ್ತದೆ. ಇನ್ನು ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ವಿವಿಧ ತೆರಿಗೆ ಪ್ರಯೋಜನಗಳು ಲಭ್ಯವಿದ್ದು, ತೆರಿಗೆ ಹೊರೆ ತಗ್ಗಿಸಿಕೊಳ್ಳಲು ನೆರವು ನೀಡುತ್ತವೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿದಂತೆ ವಿವಿಧ ತೆರಿಗೆ ಪ್ರಯೋಜನಗಳು ಲಭ್ಯವಿವೆ. ಇನ್ನು ಆದಾಯ ತೆರಿಗೆ ಕಾಯ್ದೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಇನ್ನೂ ಅನೇಕ ಕಡಿತಗಳು ಲಭ್ಯವಿದ್ದು, ನೀವು ನಿಮ್ಮ ತೆರಿಗೆ ವ್ಯಾಪ್ತಿಗೊಳಪಡುವ ಆದಾಯವನ್ನು ಆದಷ್ಟು ತಗ್ಗಿಸಿಕೊಳ್ಳಬಹುದು.
