ಐಟಿಆರ್ ಸಲ್ಲಿಕೆ ಮಾಡೋರಿಗೆ ಈ ನಿಯಮ ತಿಳಿದಿರಲಿ;ಬ್ಯಾಂಕ್ ನಗದು ವಿತ್ ಡ್ರಾಗೂ ಶೇ.2ರಷ್ಟುTDS ಕಡಿತ
ಐಟಿಆರ್ ಸಲ್ಲಿಕೆ ಪ್ರಕ್ರಿಯೆಗಳು ನಡೆಯುತ್ತಿವೆ.ಹೀಗಿರುವಾಗ ಆದಾಯ ತೆರಿಗೆಯ ವಿವಿಧ ನಿಯಮಗಳ ಬಗ್ಗೆ ತೆರಿಗೆದಾರರು ಮಾಹಿತಿ ಹೊಂದಿರೋದು ಅಗತ್ಯ. ಬ್ಯಾಂಕ್ ನಿಂದ ನಗದು ವಿತ್ ಡ್ರಾ ಮಾಡಿದ್ರೆ ಕೂಡ ಅದರ ಮೇಲೆ ಶೇ.2ರಷ್ಟು ಟಿಡಿಎಸ್ ಕಡಿತ ಮಾಡಲಾಗುತ್ತದೆ.
Business Desk: 2023-24ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕ. ಈಗಾಗಲೇ ಮೂರು ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್ ಗಳು ಸಲ್ಲಿಕೆ ಆಗಿವೆ. ಇನ್ನು ಐಟಿಆರ್ (ITR) ಸಲ್ಲಿಕೆ ವಿಧಾನವನ್ನು ಆದಾಯ ತೆರಿಗೆ (Tax) ಇಲಾಖೆ ಸರಳಗೊಳಿಸಿದೆ. ಮೊದಲಿನಂತೆ ಹೆಚ್ಚು ಕಷ್ಟಪಡಬೇಕಾಗಿಲ್ಲ. ನಿಮ್ಮ ಬಳಿ ಎಲ್ಲ ದಾಖಲೆಗಳು ಲಭ್ಯವಿವೆ ಎಂದಾದ್ರೆ ನೀವು ಕೆಲವೇ ನಿಮಿಷದಲ್ಲಿ ಐಟಿಆರ್ ಸಲ್ಲಿಕೆ ಮಾಡ್ಬಹುದು. ತೆರಿಗೆದಾರರಿಗೆ ಎರಡು ಆದಾಯ ತೆರಿಗೆ ವ್ಯವಸ್ಥೆಗಳು ಲಭ್ಯವಿವೆ. ಒಂದು ಹೊಸ ಆದಾಯ ತೆರಿಗೆ ವ್ಯವಸ್ಥೆ ಹಾಗೂ ಇನ್ನೊಂದು ಹಳೆಯ ಆದಾಯ ತೆರಿಗೆ ವ್ಯವಸ್ಥೆ. ಹಳೆಯ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ವಿನಾಯ್ತಿಗಳು, ಕಡಿತಗಳು ಹಾಗೂ ರಿಯಾಯಿತಿಗಳು ಲಭ್ಯವಿವೆ. ಆದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ಇಂಥ ಯಾವುದೇ ಸೌಲಭ್ಯಗಳಿಲ್ಲ. ಇನ್ನು ಇಡೀ ವರ್ಷ ನಿಮ್ಮ ಆದಾಯದಿಂದ ಅನೇಕ ಕಡಿತಗಳನ್ನು ಮಾಡಲಾಗುತ್ತದೆ. ಈ ಕಡಿತಗಳನ್ನು ಐಟಿಆರ್ ನಲ್ಲಿ ಹೊಂದಣಿಕೆ ಮಾಡಲಾಗುತ್ತದೆ. ಬ್ಯಾಂಕ್ ನಿಂದ ನಗದು ವಿತ್ ಡ್ರಾ ಮಾಡಿದ್ರೆ ಕೂಡ ಅದರ ಮೇಲೆ ಶೇ.2ರಷ್ಟು ಟಿಡಿಎಸ್ ಕಡಿತ ಮಾಡಲಾಗುತ್ತದೆ.
ಟಿಡಿಎಸ್ ಅಂದ್ರೆ ಮೂಲದಲ್ಲೇ ತೆರಿಗೆಯನ್ನು ಕಡಿತ ಮಾಡೋದು. ಒಬ್ಬ ವ್ಯಕ್ತಿಗೆ ಆದಾಯ ಉತ್ಪಾದನೆಯಾಗುವ ಮೂಲದಲ್ಲೇ ತೆರಿಗೆ ಸಂಗ್ರಹಿಸಲು ಟಿಡಿಎಸ್ ಪರಿಚಯಿಸಲಾಯಿತು. ತೆರಿಗೆ ವಂಚನೆಯನ್ನು ಕಡಿಮೆಗೊಳಿಸಲು ಆದಾಯದ ಮೂಲದಲ್ಲೇ ತೆರಿಗೆ ಸಂಗ್ರಹಿಸಲು ಸರ್ಕಾರ ಟಿಡಿಎಸ್ ಅನ್ನು ಬಳಸಿಕೊಳ್ಳುತ್ತಿದೆ. ವೇತನ, ಬಡ್ಡಿ, ಕಮೀಷನ್ ಗಳು, ಡಿವಿಡೆಂಡ್ಸ್ ಸೇರಿದತೆ ವಿವಿಧ ಆದಾಯಗಳ ಮೇಲೆ ಸರ್ಕಾರ ಟಿಡಿಎಸ್ ವಿಧಿಸುತ್ತದೆ. ಉದಾಹರಣೆಗೆ ಒಬ್ಬ ವೇತನ ಪಡೆಯುವ ಉದ್ಯೋಗಿ ವೇತನದಲ್ಲಿ ಆತನ ತೆರಿಗೆ ಸ್ಲ್ಯಾಬ್ ಗೆ ಅನುಗುಣವಾಗಿ ತೆರಿಗೆ ಕಡಿತ ಮಾಡಿ ಆ ಬಳಿಕ ಉಳಿದ ಮೊತ್ತವನ್ನು ನೀಡಲಾಗುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 194ಎನ್ ಪ್ರಕಾರ ಒಬ್ಬ ವ್ಯಕ್ತಿ ತನ್ನ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಯಿಂದ ನಿರ್ದಿಷ್ಟ ಹಣಕಾಸು ಸಾಲಿನಲ್ಲಿ ವಿತ್ ಡ್ರಾ ಮಾಡಿದ ನಗದು ಮೊತ್ತ ನಿಗದಿತ ಮಿತಿ ಮೀರಿದರೆ ಆಗ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಹಾಗಾದ್ರೆ ಬ್ಯಾಂಕ್ ನಿಂದ ಎಷ್ಟು ನಗದು ವಿತ್ ಡ್ರಾ ಮಾಡಿದ್ರೆ ಟಿಡಿಎಸ್ ಅನ್ವಯಿಸುತ್ತದೆ?
1.ಒಂದು ವೇಳೆ ಕಳೆದ ಮೂರು ಮೌಲ್ಯಮಾಪನ ವರ್ಷಗಳಲ್ಲಿ ಯಾವುದೇ ಐಟಿಆರ್ ಸಲ್ಲಿಕೆ ಮಾಡದ ಸಂದರ್ಭದಲ್ಲಿ 20ಲಕ್ಷ ರೂ. ಮೊತ್ತದ ನಗದು ವಿತ್ ಡ್ರಾ ಮಾಡಿದ್ರೆ ಟಿಡಿಎಸ್ ವಿಧಿಸಲಾಗುತ್ತದೆ.
ಅಥವಾ
2.ಒಂದು ವೇಳೆ ಕಳೆದ ಮೂರು ಮೌಲ್ಯಮಾಪನ ವರ್ಷಗಳಲ್ಲಿ ಎಲ್ಲ ವರ್ಷ ಅಥವಾ ಯಾವುದೇ ಒಂದು ವರ್ಷ ಐಟಿಆರ್ ಸಲ್ಲಿಕೆ ಮಾಡಿದ್ದರೆ ಆಗ 1 ಕೋಟಿ ರೂ. ಮೊತ್ತ ವಿತ್ ಡ್ರಾ ಮಾಡಿದ್ರೆ ಟಿಡಿಎಸ್ ಕಡಿತ ಮಾಡಲಾಗುತ್ತದೆ.
ಎಫ್ ಡಿ ಮೇಲಿನ ಬಡ್ಡಿಗೆ ಎಷ್ಟು ಟಿಡಿಎಸ್ ಕಡಿತವಾಗುತ್ತೆ?ಇಲ್ಲಿದೆ ಮಾಹಿತಿ
ಸೆಕ್ಷನ್ 194ಎನ್ ಅಡಿಯಲ್ಲಿ ಯಾರು ತೆರಿಗೆ ಕಡಿತ ಮಾಡುತ್ತಾರೆ?
ನಗದು ವಿತ್ ಡ್ರಾ ಮೇಲಿನ ಟಿಡಿಎಸ್ ಅನ್ನು ಖಾಸಗಿ, ಸಾರ್ವಜನಿಕ ಹಾಗೂ ಕೋ-ಆಪರೇಟಿವ್ ಬ್ಯಾಂಕ್ ಗಳು ಅಥವಾ ಅಂಚೆ ಕಚೇರಿಗಳು ಕಡಿತಗೊಳಿಸುತ್ತವೆ.
ನಗದು ವಿತ್ ಡ್ರಾ ಮೇಲಿನ ಟಿಡಿಎಸ್ ದರ ಎಷ್ಟು?
ನಗದು ವಿತ್ ಡ್ರಾ ಮೇಲಿನ ಟಿಡಿಎಸ್ ಶೇ.2. ಅಂದಹಾಗೇ ಇದು ಮೇಲೆ ವಿವರಿಸಿದ ಎರಡು ಸಂದರ್ಭಗಳಲ್ಲಿ ಮಾತ್ರ ಅನ್ವಯಿಸುತ್ತದೆ. ಒಂದು ವೇಳೆ ವ್ಯಕ್ತಿಗಳ ಬದಲು ಸಹಕಾರ ಸಂಘಗಳಾಗಿದ್ರೆ ಟಿಡಿಎಸ್ ಕಡಿತಕ್ಕೆ ನಗದು ವಿತ್ ಡ್ರಾ ಮಿತಿ 1 ಕೋಟಿ ರೂ. ಬದಲು 3 ಕೋಟಿ ರೂ. ಆಗಿರುತ್ತದೆ.
ಅಂಚೆ ಕಚೇರಿ ಯಾವೆಲ್ಲ ಯೋಜನೆಗಳಿಗೆ ಟಿಡಿಎಸ್ ಅನ್ವಯಿಸುತ್ತದೆ? ತೆರಿಗೆ ವಿನಾಯ್ತಿ ಯಾವುದಕ್ಕಿದೆ?