ಜೈಪುರ್(ಆ.11): ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಚಾಯ್ ಬೇಚ್ನೆವಾಲಾ' ಎಂದು ಕುಹುಕವಾಡುವ ವಿಪಕ್ಷಗಳಿಗೆ, ಯುವಕನೋರ್ವ ಅದೇ ಚಹಾ ಮಾರುತ್ತಾ ಲಕ್ಷಾಧಿಪತಿಯಾದ ಸುದ್ದಿ ಖಂಡಿತ ಮುಟ್ಟಲೇಬೇಕು. ಚಹಾ ಮಾರುವುದು ಸ್ವಾಭಿಮಾನದ ಸಂಕೇತ ಎಂಬುದು ಪ್ರತಿಷ್ಠೆಯ ಗುಂಗಿನಲ್ಲಿರುವವರಿಗೆ ತಲುಪಲೇಬೇಕು.

ಅವನೊಬ್ಬ ಡೆಲಿವರಿ ಬಾಯ್. ಅಮೆಜಾನ್ ಕಂಪೆನಿಯಲ್ಲಿ ಅವನ ತಿಂಗಳ ಆದಾಯ ೯೦೦೦ ರು. ಅದರಲ್ಲಿ ಇಡೀ ಕುಟುಂಬ ನಿರ್ವಹಣೆಯಾಗಬೇಕು. ಜೊತೆಗೆ ತನ್ನ ಕೆಲಸದ ಒತ್ತಡವನ್ನೂ ಸಂಭಾಳಿಸಿಕೊಳ್ಳಬೇಕು. ಉಳಿದ ಡೆಲಿವರಿ ಬಾಯ್‌ಗಳಂತೆ ಆತನಿಗೆ ಬೈಕ್ ಖರೀದಿಸುವಷ್ಟು ಆರ್ಥಿಕ ಚೈತನ್ಯ ಇರಲಿಲ್ಲ. ಹಾಗಾಗಿ ಸೈಕಲ್ ತುಳಿದುಕೊಂಡೇ ಮೈಲುಗಟ್ಟಲೆ ಓಡಾಟ.

ಒಂದು ಕಡೆ ಟ್ರಾಫಿಕ್ ಜಾಮ್, ಇನ್ನೊಂದು ಕಡೆ ಕ್ಷಣಕ್ಕೊಮ್ಮೆ ಕಾಲ್ ಮಾಡಿ ಗಡಿಬಿಡಿ ಮಾಡುವ ಗ್ರಾಹಕರು. ತಲೆ ಕೆಟ್ಟು ಚಿತ್ರಾನ್ನವಾಗಿ ಆತನಿಗೆ ದಿನಕ್ಕೆ ೧೦ ಸಲವಾದರೂ ಟೀ ಕುಡಿಯದಿದ್ದರೆ ನೆಮ್ಮದಿಯಿಲ್ಲ. ಒಳ್ಳೆಯ ಟೀ, ಕಡಿಮೆ ರೇಟ್‌ನಲ್ಲಿ ಸಿಗುವ ಜಾಗಕ್ಕೆ ಹೋಗುವುದು ಮತ್ತೊಂದು ದ್ರಾವಿಡ ಪ್ರಾಣಾಯಾಮ.

ಆದರೂ ಕುಡಿಯದಿದ್ದರೆ ಸಮಾಧಾನ ಇಲ್ಲ. ಸೈಕಲ್ ತುಳಿದೂ ತುಳಿದೂ ಸುಸ್ತಾದ ದೇಹಕ್ಕೆ ಚಹಾ ಹೊಸ ಹುಮ್ಮಸ್ಸು ತುಂಬುತ್ತಿತ್ತು. ತಾನೊಬ್ಬನೇ ಅಲ್ಲ, ಹೀಗೆ ಒಂದೊಳ್ಳೆ ಚಹಾಕ್ಕಾಗಿ ಒದ್ದಾಡುವವರ ದೊಡ್ಡ ಪಡೆಯೇ ಇದೆ ಅನ್ನೋದು ಬಹಳ ಬೇಗ ಆತನ ಅರಿವಿಗೆ ಬಂತು.

ಟೀ ಅನ್ನೋದು ಬರಿಯ ಒಂದು ಪೇಯವಲ್ಲ, ಅದೊಂದು ‘ರಾಷ್ಟ್ರ ಪಾನೀಯ’ ಎಂದುಕೊಂಡ. ಇಂಥಾ ಸಮಯದಲ್ಲೇ ಆ ಡೆಲಿವರಿಬಾಯ್‌ಗೆ ಒಳ್ಳೆಯ ‘ಟೀ ತಯಾರಿಸಿ ಮಾರುವ’ ಐಡಿಯಾ ಬಂದಿದ್ದು.

ಇಂದು ಜೈಪುರದ ರಘುವೀರ್ ಸಿಂಗ್ ಚೌಧರಿ ತಿಂಗಳ ಆದಾಯ ಲಕ್ಷವನ್ನೂ ಮೀರುತ್ತದೆ. ಆತನೀಗ ‘ಡೆಲಿವರಿ ಬಾಯ್’ ಅಲ್ಲ. ಬದಲಿಗೆ ಒಬ್ಬ ಯಶಸ್ವಿ ಉದ್ಯಮಿ. ಅಷ್ಟಕ್ಕೂ ರಾತ್ರಿ ಬೆಳಗಾಗುವಷ್ಟರಲ್ಲಿ ಡೆಲಿವರಿ ಬಾಯ್‌ಯನ್ನು ಲಕ್ಷಾಧೀಶನನ್ನಾಗಿ ಮಾಡಿದ ಉದ್ಯಮ ಯಾವುದು ಅನ್ನುವ ಪ್ರಶ್ನೆ ಬರಬಹುದು. ಉತ್ತರ ಬಹಳ ಸರಳ. ಟೀ ತಯಾರಿಸಿ ಮಾರುವ ಸ್ಟಾರ್ಟ್‌ಅಪ್.

ಏನೇನೋ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಾವಿರುವ ಜಾಗಕ್ಕೆ ತರಿಸುವ ಹಾಗೆ ‘ಟೀ’ಯನ್ನೂ ಯಾಕೆ ತರಿಸಬಾರದು ಅಂದುಕೊಂಡ ರಘುವೀರ್ ಒನ್ ಫೈನ್ ಡೇ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾದರು. ಆನ್‌ಲೈನ್‌ನಲ್ಲಿ ‘ಸ್ನಾಕ್ಸ್ ಆ್ಯಂಡ್ ಟೀ’ ಎಂಬ ಆ್ಯಪ್ ಕ್ರಿಯೇಟ್ ಮಾಡಿದರು.

ಮೊದಲಿಗೆ ಜೈಪುರದಲ್ಲಿ ತಾನಿದ್ದ ಜಾಗದ ಸುತ್ತಲಿನ ಸುಮಾರು ೧೦೦ ಜನ ವ್ಯಾಪಾರಿಗಳಿಗೆ ಟೀ ಪೂರೈಸಲು ಮುಂದಾಗುತ್ತಾರೆ. ಮೊದ ಮೊದಲು ಈತನ ಪ್ರಯತ್ನದ ಬಗ್ಗೆ ಅಷ್ಟೇನೂ ಸಕಾರಾತ್ಮಕವಾಗಿ ಸ್ಪಂದನೆ ಸಿಗಲಿಲ್ಲ. ಆದರೆ ಒಮ್ಮೆ ಟೀ ಕುಡಿದವರು ಮತ್ತೊಮ್ಮೆ ಬೇಡ ಅನ್ನಲಿಲ್ಲ. ಅಲ್ಲೇ ರಘುವೀರ್ ಅದೃಷ್ಟ ತೆರೆದುಕೊಂಡಿದ್ದು

ಸ್ವತಃ ರಘುವೀರ್ ಚಹಾ ಪ್ರೇಮಿಯಾಗಿದ್ದರು. ತಾನು ಬಯಸುವ ರುಚಿಯ ಚಹಾವನ್ನೇ ತನ್ನಂಥ ನೂರಾರು ಮಂದಿ ಬಯಸುತ್ತಾರೆ ಅನ್ನುವುದು ಗೊತ್ತಿತ್ತು. ಅತ್ಯುತ್ತಮ ಚಹಾ ಕಡಿಮೆ ಬೆಲೆಗೆ ಸುಲಭವಾಗಿ ಸಿಗುವಂತೆ ಮಾಡುವುದು ಅವರ ಕನಸು. ಆ ಕನಸನ್ನು ಅವರು ನನಸಾಗಿಸಿದ್ದು ‘ಟೀ ಆ್ಯಂಡ್ ಸ್ನಾಕ್ಸ್’. ಮೂರು ಜನ ಗೆಳೆಯರು ಇವರ ಹೊಸ ಸಾಹಸಕ್ಕೆ ಪಾಲುದಾರರಾದರು.

ಮೊದ ಮೊದಲಿಗೆ ಸುತ್ತಲಿನ ಒಂದಿಷ್ಟು ವ್ಯಾಪಾರಿಗಳಿಗೆ ಚಹಾ ಸಪ್ಲೈ ಮಾಡುತ್ತಾ, ತನ್ನ ಡೆಲಿವರಿ ಬಾಯ್ ಕೆಲಸವನ್ನೂ ಮುಂದುವರಿಸಿದರು ರಘವೀರ್. ಆದರೆ ಕ್ರಮೇಣ ಇವರು ತಯಾರಿಸಿ ಮಾರುವ ಟೀಗೆ ಬೇಡಿಕೆ ಹೆಚ್ಚಿತು. ಜೈಪುರದ ಸುತ್ತಲಿನ ಬಹಳ ಮಂದಿ ಈ ಟೀಗೆ ಮನಸೋತು, ಆ್ಯಪ್ ಮೂಲಕ ಬುಕ್ಕಿಂಗ್ ಮಾಡಲಾರಂಭಿಸಿದರು.

ಮನೆ ಬಾಗಿಲಿಗೇ ಬರುವ ಈ ಚಹಾದ ಬೆಲೆ ಕೇವಲ 15 ರೂ. ಅಂದರೆ ಟೀ ಶಾಪ್‌ಗಳಲ್ಲಿ ನೀಡುವಷ್ಟೇ ಬೆಲೆ. ಆದರೆ ಅದಕ್ಕಿಂತ ರುಚಿ, ಸ್ವಾದ ಹೆಚ್ಚು. ಹಾಗೇ ಟೀ ಶಾಪ್ ಹುಡುಕಿಕೊಂಡು ಹೋಗಿ ಸಮಯ ವ್ಯರ್ಥ ಮಾಡುವ ತೊಂದರೆಯೂ ಇಲ್ಲ.

ಈ ಉದ್ಯಮ ಲಾಭದಾಯಕ ಎಂಬುದು ಅನುಭವಕ್ಕೆ ಬಂದಾಗ ರಘವೀರ್ ಹಿಂದಿನ ಡೆಲಿವರಿ ಬಾಯ್ ಉದ್ಯೋಗಕ್ಕೆ ಗುಡ್‌ಬೈ ಹೇಳಿ ಫುಲ್ ಟೈಮ್ ‘ಟೀ ಆ್ಯಂಡ್ ಸ್ನಾಕ್ಸ್’ನಲ್ಲೇ ತೊಡಗಿಸಿಕೊಂಡರು.