ಬೆಂಗಳೂರಿನಲ್ಲಿ ಮನೆ ಖರೀದಿ ಬಲು ದುಬಾರಿ; ದೇಶದ 43 ನಗರಗಳಲ್ಲಿ ಗಗನಕ್ಕೇರಿದ ವಸತಿ ಬೆಲೆ
ಬೆಂಗಳೂರು ಸೇರಿದಂತೆ ದೇಶದ 43 ನಗರಗಳಲ್ಲಿ ಮನೆಗಳ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದೆ ಎಂದು ರಾಷ್ಟ್ರೀಯ ವಸತಿ ಬ್ಯಾಂಕ್ (ಎನ್ ಎಚ್ ಬಿ) ವರದಿ ತಿಳಿಸಿದೆ. 2023ರ ಏಪ್ರಿಲ್-ಜೂನ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಆಸ್ತಿ ಬೆಲೆಗಳಲ್ಲಿ ಶೇ.8.9 ಏರಿಕೆ ಕಂಡುಬಂದಿದೆ.

ಬೆಂಗಳೂರು (ಆ.31): 2023-24ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಬೆಂಗಳೂರು ಸೇರಿದಂತೆ ದೇಶದ 43 ನಗರಗಳಲ್ಲಿ ಮನೆಗಳ ಬೆಲೆ ಗಗನಕ್ಕೇರಿದೆ ಎಂದು ರಾಷ್ಟ್ರೀಯ ವಸತಿ ಬ್ಯಾಂಕ್ (ಎನ್ ಎಚ್ ಬಿ) ವರದಿ ತಿಳಿಸಿದೆ. ಇನ್ನು ಏಳು ನಗರಗಳಲ್ಲಿ ಮನೆಗಳ ಬೆಲೆಗಳಲ್ಲಿ ಇಳಿಕೆಯಾಗಿರೋದಾಗಿಯೂ ಈ ವರದಿ ತಿಳಿಸಿದೆ. ಎನ್ ಎಚ್ ಬಿ ಪ್ರಕಟಿಸಿರುವ ಮನೆ ಬೆಲೆ ಸೂಚ್ಯಂಕದ ಅನ್ವಯ 2023ರ ಏಪ್ರಿಲ್-ಜೂನ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಆಸ್ತಿ ಬೆಲೆಗಳಲ್ಲಿ ಶೇ.8.9 ಹಾಗೂ ಕೋಲ್ಕತ್ತದಲ್ಲಿ ಶೇ 7.8ರಷ್ಟು ಹೆಚ್ಚಳ ಕಂಡುಬಂದಿದೆ. ಇನ್ನುಅಹ್ಮದಾಬಾದ್ ನಲ್ಲಿ ಶೇ.9.1ರಷ್ಟು ಹೆಚ್ಚಳವಾಗಿದ್ದು, ಇದು ದೇಶದಲ್ಲೇ ಅತೀಹೆಚ್ಚಿನ ಏರಿಕೆಯಾಗಿದೆ. ಚೆನ್ನೈ ನಲ್ಲಿ ಶೇ.1.1, ದೆಹಲಿಯಲ್ಲಿ ಶೇ.0.8, ಹೈದರಾಬಾದ್ ನಲ್ಲಿ ಶೇ.6.9, ಮುಂಬೈ ಶೇ.2.9 ಹಾಗೂ ಪುಣೆಯಲ್ಲಿ ಶೇ.6.1ರಷ್ಟು ವಸತಿ ದರಗಳಲ್ಲಿ ಏರಿಕೆಯಾಗಿದೆ. ಗೃಹ ಹಣಕಾಸು ಕಂಪನಿಗಳ ನಿಯಂತ್ರಣ ಸಂಸ್ಥೆಯಾದ ಎನ್ ಎಚ್ ಬಿ ಪ್ರಕಾರ ಗೃಹಸಾಲದ ಬಡ್ಡಿದರಗಳು ಈಗಲೂ ಕೂಡ ಕೋವಿಡ್ ಮುನ್ನದ ಅವಧಿಗಿಂತ ಕಡಿಮೆಯಿದೆ. ಈ ಮೂಲಕ ಎಲ್ಲ ಕಡೆ ಕೈಗೆಟುಕುವ ದರದಲ್ಲಿ ಖರೀದಿಸುವ ಅವಕಾಶವನ್ನು ನೀಡಿದೆ.
ಬ್ಯಾಂಕ್ ಗಳು ಹಾಗೂ ಗೃಹ ಹಣಕಾಸು ಕಂಪನಿಗಳಿಂದ ಆಸ್ತಿಗಳ ಮೌಲ್ಯಮಾಪನ ಬೆಲೆಗಳನ್ನು ಸಂಗ್ರಹಿಸಲಾಗಿದ್ದು, ಅದರ ಆಧಾರದಲ್ಲಿ ದೇಶದ 50 ಗರಗಳ ವಸತಿ ಬೆಲೆ ಸೂಚ್ಯಂಕ (HPI) ಸಿದ್ಧಪಡಿಸಲಾಗಿದೆ. ಈ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಎಚ್ ಪಿಐ ವಾರ್ಷಿಕ ಶೇ.4.8ರಷ್ಟು ಏರಿಕೆ ದಾಖಲಿಸಿದ್ದು, ಕಳೆದ ವರ್ಷ ಶೇ.7ಷ್ಟು ಪ್ರಗತಿ ದಾಖಲಿಸಿತ್ತು ಎಂದು ಎನ್ ಎಚ್ ಬಿ ಹೇಳಿದೆ.
ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡೋದಾ,ಬೇಡ್ವಾ? ನಿಮ್ಮ ಈ ಗೊಂದಲಕ್ಕೆ ಇಲ್ಲಿದೆ ಪರಿಹಾರ
ಬೆಂಗಳೂರು ಅಚ್ಚುಮಚ್ಚಿನ ತಾಣ
ರಾಜ್ಯದ ಜನರಿಗೆ ಮಾತ್ರವಲ್ಲ ಇತರ ರಾಜ್ಯಗಳಿಂದ ಇಲ್ಲಿಗೆ ಬಂದಿರೋರು ಕೂಡ ಬೆಂಗಳೂರಿನಲ್ಲಿ ಮನೆ ಖರೀದಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. 1ಬಿಎಚ್ ಕೆಯಿಂದ ಹಿಡಿದು 4ಬಿಎಚ್ ಕೆ ತನಕದ ಮನೆಗಳು, ಫ್ಲ್ಯಾಟ್ ಗಳನ್ನು ಖರೀದಿಸಲು ಜನರು ಆಸಕ್ತಿ ತೋರುತ್ತಿದ್ದಾರೆ ಎಂದು ವಿವಿಧ ರಿಯಲ್ ಎಸ್ಟೇಟ್ ಸಂಸ್ಥೆಗಳು ಮಾಹಿತಿ ನೀಡಿವೆ. ಕೋವಿಡ್ ಸಂದರ್ಭದಲ್ಲಿ ಮನೆ, ನಿವೇಶನಗಳ ಬೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ, ಈ ವರ್ಷ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ ಎಂದು ಹೇಳಲಾಗಿದೆ. ಸಿಲಿಕಾನ್ ಸಿಟಿ ಎಂದೇ ಕರೆಯಲ್ಪಡುವ ಬೆಂಗಳೂರಿನಲ್ಲಿ ಐಟಿ-ಬಿಟಿ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ಜನರು ದೊಡ್ಡ ಪ್ರಮಾಣದಲ್ಲಿದ್ದಾರೆ. ಇಲ್ಲಿನ ವಾತಾವರಣ ಕೂಡ ಬಹತೇಕರಿಗೆ ಇಷ್ಟವಾಗುವ ಕಾರಣ ಇಲ್ಲೇ ಮನೆ ಅಥವಾ ನಿವೇಶನ ಖರೀದಿಸುವ ಯೋಚನೆಯನ್ನು ಹೊರ ರಾಜ್ಯದವರು ಕೂಡ ಮಾಡುತ್ತಾರೆ.
ಮನೆ ಬಾಡಿಗೆ ಹೆಚ್ಚಳ
ಇನ್ನು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮನೆ ಬಾಡಿಗೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆಲವು ವರದಿಗಳ ಪ್ರಕಾರ ಐಟಿ ಕಂಪನಿಗಳು ಹೆಚ್ಚಿರುವ ಮಾರತಹಳ್ಳಿ, ಬೆಳಂದೂರು ಹಾಗೂ ವೈಟ್ ಫೀಲ್ಡ್ ನಲ್ಲಿ ಮನೆಗಳಿಗೆ ಭಾರೀ ಬೇಡಿಕೆಯಿದ್ದು, ಕೋವಿಡ್ ಮುನ್ನದ ಅವಧಿಗೆ ಹೋಲಿಸಿದ್ರೆ ಬಾಡಿಗೆಯಲ್ಲಿ ಶೇ.50ರಷ್ಟು ಏರಿಕೆ ಕಂಡುಬಂದಿದೆ. ಈ ಭಾಗಗಳಲ್ಲಿ 1,000 ಚದರ ಅಡಿಗಳಿಗಿಂತ ಕಡಿಮೆ ವಿಸ್ತೀರ್ಣದ 2ಬಿಎಚ್ ಕೆ ಮನೆ ಬಾಡಿಗೆ ತಿಂಗಳಿಗೆ 30 ಸಾವಿರ ರೂ. ಇದೆ. ಇನ್ನು ದೊಡ್ಡ ಅಪಾರ್ಟ್ ಮೆಂಟ್ ಗಳಲ್ಲಿ ಕ್ಲಬ್ ಹೌಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿರುವ 2ಬಿಎಚ್ ಕೆ ಮನೆ ಬಾಡಿಗೆ 50,000ರೂ. ತನಕ ಇದೆ.
ಮನೆ ಖರೀದಿದಾರರಿಗೆ ಶುಭ ಸುದ್ದಿ; ಕಾಮನ್ ಏರಿಯಾಕ್ಕೆ ಸಂಬಂಧಿಸಿ ಮಹತ್ವದ ಆದೇಶ ನೀಡಿದ ಕೆರೇರಾ
ಕೋವಿಡ್ -19ಗೂ ಮೊದಲು 2ಬಿಎಚ್ ಕೆ ಮನೆ ಅಥವಾ ಫ್ಲ್ಯಾಟ್ ಗಳ ಬಾಡಿಗೆ 12 ಸಾವಿರ ರೂ.ನಿಂದ 20 ಸಾವಿರ ರೂ. ತನಕ ಇದ್ದು, ಈಗ 25 ಸಾವಿರ ರೂ.ನಿಂದ 40 ಸಾವಿರ ರೂ. ತನಕ ಇದೆ ಎಂಬ ಮಾಹಿತಿಯನ್ನು ಸ್ಥಳೀಯ ನಿವಾಸಿಗಳು ನೀಡುತ್ತಾರೆ. ಹಾಗೆಯೇ 7,000ರೂ.ನಿಂದ 10,000ರೂ. ತನಕ ಬಾಡಿಗೆ ಹೊಂದಿದ್ದ 1ಬಿಚ್ ಕೆ ಮನೆ ಬಾಡಿಗೆ ಈಗ 15,000ರೂ.ನಿಂದ 25,000ರೂ. ತನಕ ಇದೆ.