ಕಾಮನ್ ಏರಿಯಾವನ್ನು ಬಿಲ್ಡರ್ ಗಳು ನಿವಾಸಿಗಳಿಗೆ ಹಸ್ತಾಂತರಿಸಬೇಕು ಎಂದು ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆರೇರಾ) ತೀರ್ಪು ನೀಡಿದೆ. ಈ ತೀರ್ಪು ಮನೆ ಖರೀದಿದಾರರ ಪಾಲಿಗೆ ಮಹತ್ವದ್ದಾಗಿದೆ.
ಬೆಂಗಳೂರು (ಆ.7): ಸಾಮಾನ್ಯ ಪ್ರದೇಶ ಅಥವಾ ಕಾಮನ್ ಏರಿಯಾವನ್ನು ಬಿಲ್ಡರ್ ಗಳು ನಿವಾಸಿಗಳಿಗೆ ಹಸ್ತಾಂತರಿಸಬೇಕು ಎಂದು ಪ್ರಕರಣವೊಂದರಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆರೇರಾ) ತೀರ್ಪು ನೀಡಿದೆ. ನಿವಾಸಿಗಳ ಅಥವಾ ಖರೀದಿದಾರರ ಸಂಘ ಸ್ಥಾಪಿಸಿದ ತಕ್ಷಣವೇ ಕಾಮನ್ ಏರಿಯಾವನ್ನು ಸಂಘಕ್ಕೆ ಹಸ್ತಾಂತರಿಸುವಂತೆ ಕೆರೇರಾ ತಿಳಿಸಿದೆ. ಸಿಗ್ನೇಚರ್ ಡ್ವೆಲ್ಲಿಂಗ್ ಪ್ರೈವೇಟ್ ಲಿಮಿಟೆಡ್ ಗೆ ಸಂಬಂಧಿಸಿ ನೀಡಿದ ತೀರ್ಪಿನಲ್ಲಿ ಈ ಮಾಹಿತಿ ನೀಡಲಾಗಿದೆ. ಈ ಸಂಸ್ಥೆ ವಿರುದ್ಧ ಸಂದೀಪ್ ಜಿಡಬ್ಲ್ಯು ಹಾಗೂ ಜೊನಾಲಿ ದಾಸ್ ಎಂಬುವರು ದೂರು ನೀಡಿದ್ದರು. ರಿಯಲ್ ಎಸ್ಟೇಟ್ (ನಿಯಂತ್ರಣ ಹಾಗೂ ಅಭಿವೃದ್ಧಿ) ಕಾಯ್ದೆ 2016ರ ಸೆಕ್ಷ್ 18 ಅಡಿಯಲ್ಲಿ ಈ ತೀರ್ಪು ನೀಡಲಾಗಿದೆ. ಇದರ ಜೊತೆಗೆ ಬಿಬಿಎಂಪಿ ಬಿಲ್ಡಿಂಗ್ ಉಪನಿಯಮಗಳಿಗೆ ಅನುಗುಣವಾಗಿ ಕಾರು ಪಾರ್ಕಿಂಗ್ ಸ್ಥಳವನ್ನು ದೂರುದಾರರಿಗೆ ನೀಡುವಂತೆ ಕೆರೇರಾ ಬಿಲ್ಡರ್ ಗೆ ನಿರ್ದೇಶನ ನೀಡಿದೆ. ಈ ತೀರ್ಪು ಮನೆ ಖರೀದಿದಾರರ ಪಾಲಿಗೆ ಮಹತ್ವದಾಗಿದೆ. ಏಕೆಂದರೆ ಇಲ್ಲಿಯ ತನಕ ಅನೇಕ ಬಿಲ್ಡರ್ ಗಳು ಅಪಾರ್ಟ್ ಮೆಂಟ್ ಗಳ ಕಾಮನ್ ಏರಿಯಾವನ್ನು ಖರೀದಿದಾರರ ಸಂಘಕ್ಕೆ ನೀಡದೆ ಅದರ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ.
ಕೆರೇರಾ ಅಪಾರ್ಟ್ ಮೆಂಟ್ ಕಾಮನ್ ಏರಿಯಾವನ್ನು ಖರೀದಿದಾರರ ಸಂಘಕ್ಕೆ ವರ್ಗಾಯಿಸುವಂತೆ ನೀಡಿರುವ ಆದೇಶ ಇದಕ್ಕಾಗಿ ಬಹುದಿನಗಳಿಂದ ಕಾಯುತ್ತಿದ್ದ ಮನೆ ಖರೀದಿದಾರರಿಗೆ ಸಂತಸದ ಸಂಗತಿಯಾಗಿದೆ. ಕರ್ನಾಟಕ ಮನೆ ಖರೀದಿದಾರರ ಸಂಘಟನೆ ಸಂಚಾಲಕ ಧನಂಜಯ್ ಪದ್ಮನಾಭ ಆಚಾರ್ ಕೆರೇರಾ ಆದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಸಿಗ್ನೇಂಚರ್ ಕ್ರೆಸ್ಟ್ ಅಪಾರ್ಟ್ಮೆಂಟ್ ಪ್ರಕರಣದಲ್ಲಿ ಈಗ ನೀಡಿರುವ ತೀರ್ಪು ಅತ್ಯಂತಮುಖ್ಯವಾಗಿದೆ. ಹಾಗೂ ಇದು ಕಾಮನ್ ಏರಿಯಾವನ್ನು ಖರೀದಿದಾರರಿಗೆ ಹಂಚಿಕೆ ಮಾಡುವ ವಿಚಾರವಾಗಿ ಕರ್ನಾಟಕದಲ್ಲಿ ದೀರ್ಘ ಸಮಯದಿಂದ ಬಾಕಿ ಉಳಿದಿರುವ ಪ್ರಕರಣಕ್ಕೆ ಸಂಬಂಧಿಸಿ ನಿರ್ದೇಶನ ನೀಡಲಿದೆ' ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಅಪಾರ್ಟ್‌ಮೆಂಟ್ ನಲ್ಲಿ ಮನೆ ಖರೀದಿದಾರರ ಸಂಘ ರಚಿಸೋದು ಡೆವಲಪರ್ ಜವಾಬ್ದಾರಿ: ರೇರಾ
ರೇರಾ ಸೆಕ್ಷನ್ 17ರ ಅನ್ವಯ ಕಾಮನ್ ಏರಿಯಾವನ್ನು ನೋಂದಾಯಿತ ಖರೀದಿದಾರರ ಸಂಘಕ್ಕೆ ವರ್ಗಾಯಿಸೋದು ಎಷ್ಟು ಮುಖ್ಯ ಎಂಬುದನ್ನು ಧನಂಜಯ್ ಪದ್ಮನಾಭ ಆಚಾರ್ ತಿಳಿಸಿದ್ದು, ಮನೆ ಖರೀದಿದಾರರು ಈ ವರ್ಗಾವಣೆಗೆ ಬಿಲ್ಡರ್ ಗಳನ್ನು ಆಗ್ರಹಿಸುವ ಮೂಲಕ ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಜಿಬಿನ್ ಜಯರಾಮ್ ಎಂಬ ಮನೆ ಖರೀದಿದಾರರು ಈ ತೀರ್ಪನ್ನು ಅತ್ಯುತ್ತಮ ಎಂದು ಬಣ್ಣಿಸಿದ್ದಾರೆ. 'ಕರ್ನಾಟಕದಲ್ಲಿ ಇದು ಅತ್ಯಂತ ಪ್ರಮುಖ ಸಮಸ್ಯೆಯಾಗಿತ್ತು. ಅಪಾರ್ಟ್ ಮೆಮಟ್ ಮಾಲೀಕರ ಸಂಘಕ್ಕೆ ಜಾಗದ ಹಕ್ಕನ್ನು ನೀಡಲಾಗುತ್ತಿರಲಿಲ್ಲ. ಬಿಲ್ಡರ್ ಗಳು ಹಾಗೂ ಜಾಗದ ಮಾಲೀಕರು ಇದರ ಹಕ್ಕನ್ನು ಕೊನೆಯ ತನಕ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಮಹಾರಾಷ್ಟ್ರದಲ್ಲಿ ಮಾತ್ರ ಈ ಪರಿಸ್ಥಿತಿ ಇಲ್ಲ. ಕರ್ನಾಟಕದಲ್ಲಿ ಜಾಗ ಹಸ್ತಾಂತರವಾಗದಿರಲು ಮುಖ್ಯಕಾರ ಅಪಾರ್ಟ್ ಮೆಂಟ್ ಮಾಲೀಕರ ಸಂಘಗಳು ನೋಂದಣಿಯಾಗಿರೋದಿಲ್ಲ. ಹೀಗಾಗಿ ಹಸ್ತಾಂತರ ಒಪ್ಪಂದಗಳನ್ನು ಇಂಥ ಸಂಘಗಳಿಗೆ ಹಸ್ತಾಂತರಿಸಲು ಸಾಧ್ಯವಾಗುತ್ತಿಲ್ಲ' ಎಂದು ಜಿಬಿನ್ ಜಯರಾಮ್ ತಿಳಿಸಿದ್ದಾರೆ.
ಭೂಮಿ ತಾಯಿಗಿಲ್ಲಿ ಬಂಗಾರಕ್ಕೂ ಅಧಿಕ ಬೆಲೆ: ಎಕರೆಗೆ 100 ಕೋಟಿ ರೂ. ಗೆ ಮಾರಾಟ!
ಇನ್ನು ಅಪಾರ್ಟ್ ಮೆಂಟ್ ಮಾಲೀಕರ ಸಂಘಗಳನ್ನು ನೋಂದಣಿ ಮಾಡಿಸಲು ಇದು ಸೂಕ್ತ ಸಮಯವಾಗಿದೆ. ಸಂಬಂಧಪಟ್ಟ ಪ್ರಾಧಿಕಾರದ ಅಡಿಯಲ್ಲಿ ಸಂಘವನ್ನು ನೋಂದಾಯಿಸುವ ಕಾರ್ಯವನ್ನು ಮನೆ ಖರೀದಿದಾರರು ಮಾಡಬೇಕು. ಕೆಸಿಎಸ್ ಎ 1959 ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸೋದು ಅಗತ್ಯ. ಈ ಮೂಲಕ ಅವರಿಗೆ ಸೇರುವ ಜಾಗದಲ್ಲಿನ ವೈಯಕ್ತಿಕ ಭಾಗಗಳ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ಜಿಬಿನ್ ಜಯರಾಮ್ ಸಲಹೆ ನೀಡಿದ್ದಾರೆ.
