2022ರ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ 80 ಲಕ್ಷ ಮನೆಗಳ ನಿರ್ಮಾಣಕ್ಕೆ 48 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿತ್ತು. ಈ ಮೊತ್ತದಲ್ಲಿ ಶೇ. 66ರಷ್ಟು ಏರಿಕೆಯಾಗಿದೆ.

ನವದೆಹಲಿ (ಫೆ.1): ದೇಶದ ಪ್ರತಿ ವ್ಯಕ್ತಿ ಕೂಡ ತನ್ನ ಸ್ವಂತ ಮನೆಯಲ್ಲಿ ಬದುಕಬೇಕು ಎನ್ನುವ ನಿಟ್ಟಿನಲ್ಲಿ ಆರಂಭ ಮಾಡಲಾಗಿದ್ದ ಪ್ರಧಾನಮಂತ್ರಿ ಆವಾಸ್‌ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಬಂಪರ್‌ ಘೋಷಣೆ ಮಾಡಿದ್ದಾರೆ. 2023-24ರ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪಿಎಂ ಆವಾಸ್‌ ಯೋಜನೆಗೆ ಮೀಸಲಾಗಿಟ್ಟ ಹಣದಲ್ಲಿ ಶೇ. 66ರಷ್ಟು ಏರಿಕೆ ಮಾಡಿದ್ದಾರೆ. ಈ ಬಾರಿ ಪಿಎಂ ಆವಾಸ್‌ ಯೋಜನೆಗೆ 79 ಸಾವಿರ ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದೆ. ಈ ಘೋಷಣೆ ಆಗುತ್ತಿದ್ದಂತೆ ಹೌಸಿಂಗ್‌ ಕ್ಷೇತ್ರದ ಎಲ್ಲಾ ಕಂಪನಿಗಳ ಷೇರುಗಳ ಬೆಲೆಯಲ್ಲಿ ಏರಿಕೆಯಾದವು. ಅಶೈನಾ ಹೌಸಿಂಗ್‌, ಎಚ್‌ಡಿಎಫ್‌ಸಿ, ಹೋಮ್‌ ಫರ್ಸ್ಟ್‌ ಫೈನಾನ್ಸ್‌, ಮ್ಯಾರಥಾನ್‌ ನೆಕ್ಸ್ಟ್‌ಜೆನ್‌ ರಿಯಾಲ್ಟಿ, ಮ್ಯಾಕ್ರೋಟೆಕ್‌ ಡೆವಲಪರ್ಸ್‌ ಮತ್ತು ಎಚ್‌ಡಿಐಎಲ್‌ ಕಂಪನಿಗಳ ಷೇರುಗಳು ಶೇ. 2 ರಿಂದ 4ರಷ್ಟು ಏರಿಕೆ ಕಂಡವು. 2022ರ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ80 ಲಕ್ಷಗಳ ಮನೆ ನಿರ್ಮಾಣಕ್ಕೆ 48 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿತ್ತು.

ದೇಶದಲ್ಲಿ ವಸತಿ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ. ಅದರಕ್ಕಾಗಿ ಪ್ರಧಾನಮಂತ್ರಿ ಆವಾಸ್‌ ಯೋಜನೆಗೆ ಮೀಸಲಾಗಿರುವ ಹಣದಲ್ಲಿ ದೊಡ್ಡ ಮಟ್ಟದ ಏರಿಕೆ ಮಾಡುತ್ತಿದ್ದೇವೆ. ಇದು ನಿರ್ಮಾಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೂಡಿಕೆ ಹಾಗೂ ಉದ್ಯೋಗ ಚಟುವಟಿಕೆಯ ಏರಿಕೆಗೂ ಕಾರಣವಾಗಲಿದೆ. ಗುತ್ತಿಗೆದಾರರಿಗೂ ದೊಡ್ಡ ಮಟ್ಟದ ಅವಕಾಶ ಸಿಗಲಿದೆ' ಎಂದು ಕಾಲ್ಲಿಯರ್ಸ್‌ ಇಂಡಿಯಾದ ಸಂಶೋಧನಾ ವಿಭಾಗದ ನಿರ್ದೇಶಕ ವಿಮಲ್‌ ನಾಡರ್‌ ಪ್ರತಿಕ್ರಿಯೆ ನೀಡಿದ್ದಾರೆ.

2015ರ ಜೂನ್‌ 25 ರಂದು ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಅರ್ಬನ್‌) ಆರಂಭ ಮಾಡಲಾಗಿತ್ತು. ನಗರ ಪ್ರದೇಶಗಳಲ್ಲಿ ಎಲ್ಲರಿಗೂ ಮನೆಗಳನ್ನು ದೊರಕಿಸಿಕೊಡುವುದು ಇದರ ಉದ್ದೇಶವಾಗಿತ್ತು. ಎಲ್ಲಾ ಅರ್ಹ ಕುಟುಂಬಗಳು/ಫಲಾನುಭವಿಗಳಿಗೆ ಮನೆಗಳನ್ನು ಒದಗಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು (UTs) ಮತ್ತು ಕೇಂದ್ರ ನೋಡಲ್ ಏಜೆನ್ಸಿಗಳ ಮೂಲಕ ಅನುಷ್ಠಾನಗೊಳಿಸುವ ಏಜೆನ್ಸಿಗಳಿಗೆ ಕೇಂದ್ರ ಸಹಾಯವನ್ನು ಒದಗಿಸುತ್ತದೆ.

ನಮ್ಮ ದೇಶವೀಗ ಅಮೃತ ಕಾಲದ ಕಡೆಗೆ ಹೋಗುತ್ತಿದೆ. ಸಾಮಾನ್ಯ ಜನರಿಗೆ ಸೂರು ನೀಡುವ ನಿಟ್ಟಿನಲ್ಲಿ ಆವಾಸ್‌ ಯೋಜನೆಗೆ 79 ಸಾವಿರ ಕೋಟಿ ರೂಪಾಯಿಗಳ ಅನುದಾನ ನೀಡಿದ್ದು ಧನಾತ್ಮಕ ಬೆಳವಣಿಗೆ. ಕೆಳ ಹಾಗೂ ಮಧ್ಯಮ ವರ್ಗದ ಕುಟುಂಬದೊಂದಿಗೆ ಗ್ರಾಮೀಣ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಯ ನಿಟ್ಟಿಗೆ ಇದು ಒಳ್ಳೆಯ ವಿಚಾರ ಎಂದು ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ ಎಂಡಿ ಮತ್ತು ಸಿಇಒ ಗಿರೀಶ್‌ ಕೌಸೋಗಿ ತಿಳಿಸಿದ್ದಾರೆ.

Union Budget 2023: ಮದ್ಯಮ ವರ್ಗದ ಬಯಕೆ ಈಡೇರಿಸಿದ ನಿರ್ಮಲಾ, 7 ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ

ಮ್ಯಾನ್‌ಹೋಲ್‌ಗೆ ಗುಡ್‌ಬೈ: ನಗರಗಳು ಮತ್ತು ಪಟ್ಟಣಗಳಿಗೆ ಕ್ರಾಂತಿಕಾರಿ ಬದಲಾವಣೆಯನ್ನು ಕೇಂದ್ರ ಬಜೆಟ್‌ ಘೋಷಣೆ ಮಾಡಿದೆ. ಶೇ. 100ರಷ್ಟು ಮೆಕ್ಯಾನಿಕಲ್ ಡೆಸ್ಲಡ್ಜಿಂಗ್‌ನೊಂದಿಗೆ, ಸ್ವಯಂಚಾಲಿತ ಒಳಚರಂಡಿ ನಿರ್ವಹಣೆಯ ಮೂಲಕ ದೇಶವು ಸ್ವಚ್ಛ ಮತ್ತು ಹಸಿರು ಭವಿಷ್ಯದೆಡೆಗೆ ಸಾಗುವ ಯೋಜನೆ ರೂಪಿಸಲಾಗಿದೆ. ಇನ್ನು ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯ ಅಡಿಯಲ್ಲಿ ಈವರೆಗೂ 11.7 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿರುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.

Union Budget 2023 ಕೈಗೆಟುಕುವ ದರದಲ್ಲಿ ಸಿಗಲಿದೆ ಎಲೆಕ್ಟ್ರಿಕ್ ವಾಹನ!

ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ 10 ಸಾವಿರ ಕೋಟಿ:
2023-24ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ ವಾರ್ಷಿಕ ₹ 10,000 ಕೋಟಿ ವಿನಿಯೋಗಿಸುವ ಮೂಲಕ ಎಲ್ಲರಿಗೂ ಕೈಗೆಟುಕುವ ವಸತಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿರುವುದಾಗಿ ಹೇಳಿದೆ.