*ಗೃಹಸಾಲದ ಮೇಲಿನ ಬಡ್ಡಿ ದರ ಶೀಘ್ರದಲ್ಲೇ ಹೆಚ್ಚಳವಾಗಲಿದೆ ಎಂದ ಎಸ್ ಬಿಐ Ecowrap ವರದಿ*ಗೃಹಸಾಲದ ಮೇಲಿನ ಬಡ್ಡಿ ದರ ಜೂನ್ ಹಾಗೂ ಆಗಸ್ಟ್ ನಲ್ಲಿ ತಲಾ 25 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳವಾಗೋ ನಿರೀಕ್ಷೆ*ಹೆಚ್ಚುತ್ತಿರೋ ಹಣದುಬ್ಬರಕ್ಕೆ ಕಡಿವಾಣ ಹಾಕಲು ರೆಪೋ ದರ ಏರಿಕೆ ಅನಿವಾರ್ಯವೆಂದ ವರದಿ  

ನವದೆಹಲಿ (ಏ.14): ಬ್ಯಾಂಕಿನಿಂದ ಸಾಲ ಪಡೆದು ಮನೆ ಖರೀದಿಸಿರೋರಿಗೆ ಶಾಕಿಂಗ್ ನ್ಯೂಸ್. ಶೀಘ್ರದಲ್ಲೇ ಗೃಹಸಾಲದ (Home loan) ಇಎಂಐ ಮೇಲಿನ ಬಡ್ಡಿದರ (Interest rate) ಹೆಚ್ಚಳವಾಗೋ ನಿರೀಕ್ಷೆಯಿದೆ.ಇದಕ್ಕೆ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ ನಲ್ಲಿ ರೆಪೋ ದರವನ್ನು ಕನಿಷ್ಠ 25 ಬೇಸಿಸ್ ಪಾಯಿಂಟ್ ಗಳಷ್ಟು(bps)ಹೆಚ್ಚಿಸೋ ಸಾಧ್ಯತೆಯಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ವರದಿ ಹೇಳಿದೆ.

ಎಸ್ ಬಿಐ Ecowrap ವರದಿ ಪ್ರಕಾರ ಗೃಹಸಾಲದ ಮೇಲಿನ ಬಡ್ಡಿ ದರ ಜೂನ್ ಹಾಗೂ ಆಗಸ್ಟ್ ನಲ್ಲಿ ತಲಾ 25 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳವಾಗೋ ನಿರೀಕ್ಷೆಯಿದೆ. ರೆಪೋ ದರವೆಂದ್ರೆ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ (Commercial banks) ಹಣದ ಅವಶ್ಯಕತೆ ಬಿದ್ದಾಗ ನೀಡೋ ಸಾಲದ (Loan) ಮೇಲೆ ವಿಧಿಸೋ ಬಡ್ಡಿದರವಾಗಿದೆ. ರೆಪೋ ದರದಲ್ಲಿ ಹೆಚ್ಚಳವಾದಾಗ ಬ್ಯಾಂಕುಗಳು ಗೃಹಸಾಲಗಳು, ವಾಹನ ಸಾಲಗಳು, ವೈಯಕ್ತಿಕ ಹಾಗೂ ಇತರ ವಿಧದ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸೋದು ಅನಿವಾರ್ಯವಾಗುತ್ತದೆ. ಹೀಗಾಗಿ ನೀವು ಫ್ಲೋಟಿಂಗ್ ಬಡ್ಡಿದರದಲ್ಲಿ ಗೃಹಸಾಲ ಪಡೆದಿದ್ರೆ ನೀವು ಅಧಿಕ ಬಡ್ಡಿದರ ಪಾವತಿಸಬೇಕಾಗುತ್ತದೆ.

Privatization of Companies: ಈ ವರ್ಷಾಂತ್ಯದೊಳಗೆ 5 ಕಂಪೆನಿಗಳ ಖಾಸಗೀಕರಣಕ್ಕೆ ಸರ್ಕಾರದ ಸಿದ್ಧತೆ!

ಕಳೆದ ವಾರ ಈ ಆರ್ಥಿಕ ಸಾಲಿನ ಮೊದಲ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್ ಬಿಐ, ರೆಪೋ ದರವನ್ನು ಬದಲಾಯಿಸದೆ ಶೇ.4ಕ್ಕೆ ನಿಗದಿಪಡಿಸಿದೆ. ಈ ಮೂಲಕ ಸತತ 11ನೇ ಬಾರಿಗೆ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಣದುಬ್ಬರ ಹೆಚ್ಚಳ ನಿಗದಿತ ಮಿತಿಗಿಂತ ಮೇಲೇರದಂತೆ ತಡೆಯೋ ಜೊತೆಗೆ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡೋ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರೋದಾಗಿ ಆರ್ ಬಿಐ ತಿಳಿಸಿದೆ.

ಆದ್ರೂ ಹೆಚ್ಚುತ್ತಿರೋ ಹಣದುಬ್ಬರದ ಹಿನ್ನೆಲೆಯಲ್ಲಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಆರ್ ಬಿಐಗೆ ದೊಡ್ಡ ಸವಾಲಾಗಿ ಪರಿಣಮಿಸಿರೋದಂತೂ ನಿಜ. ಆಹಾರ ಪದಾರ್ಥಗಳ ಬೆಲೆಯೇರಿಕೆಯಿಂದ ಚಿಲ್ಲರೆ ಹಣದುಬ್ಬರ ಮಾರ್ಚ್ ನಲ್ಲಿ ಶೇ.6.95 ಕ್ಕೆ ಏರಿಕೆ ಕಂಡಿದೆ. ಸತತ ಮೂರು ತಿಂಗಳಿಂದ ಗ್ರಾಹಕ ದರ ಸೂಚ್ಯಂಕ (CPI) ಆಧಾರಿತ ಹಣದುಬ್ಬರ (Inflation) ಗರಿಷ್ಠ ಮಿತಿ ಶೇ.6ಕ್ಕಿಂತ ಹೆಚ್ಚಿನ ಮಟ್ಟ ತಲುಪಿದೆ. 2020ರ ಅಕ್ಟೋಬರ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ (Retail Inflation) ಶೇ. 7.61 ತಲುಪಿರೋದು ಈ ತನಕದ ಗರಿಷ್ಠ ಮಟ್ಟವಾಗಿದೆ. ಆಹಾರ ಹಣದುಬ್ಬರ 2022ರ ಮಾರ್ಚ್ ನಲ್ಲಿ ಶೇ.5.85ನಿಂದ ಶೇ.7.68ಕ್ಕೆ ಏರಿಕೆಯಾಗಿತ್ತು.ಅದೇ ಕಳೆದ ಸಾಲಿನ (2021) ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.5.52ರಷ್ಟಿದ್ದರೆ, ಆಹಾರ ಹಣದುಬ್ಬರ (Food Inflation) ಶೇ.4.87ರಷ್ಟಿತ್ತು.

Retail Inflation: 17 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ; ಮಾರ್ಚ್ ನಲ್ಲಿ ಶೇ.6.95ಕ್ಕೆ ಏರಿಕೆ

ರಷ್ಯಾ-ಉಕ್ರೇನ್ ಸಂಘರ್ಷ ಕೂಡ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ. ಆಹಾರ ಪದಾರ್ಥಗಳಾದ ಗೋಧಿ, ಮಾಂಸ, ಹಾಲು, ಆಲೂಗಡ್ಡೆ, ಅಡುಗೆ ಎಣ್ಣೆ, ಚಿನ್ನ ಹಾಗೂ ಎಲ್ ಪಿಜಿ ಮುಂತಾದ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಉಕ್ರೇನ್ ಸೂರ್ಯಕಾಂತಿ ಎಣ್ಣೆ ಪೂರೈಕೆಯ ಪ್ರಮುಖ ರಾಷ್ಟ್ರವಾಗಿದೆ. ಯುದ್ಧದ ಕಾರಣದಿಂದ ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಬೆಲೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಇನ್ನು ಕಚ್ಚಾ ತೈಲ ಬೆಲೆಯೇರಿಕೆ ಕೂಡ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ದೇಶದಲ್ಲಿ ಹಣದುಬ್ಬರ ಏರಿಕೆ ಓಟಕ್ಕೆ ಬ್ರೇಕ್ ಹಾಕಲು ರೆಪೋ ದರ ಹೆಚ್ಚಳ ಮಾಡೋದು ಮುಂದಿನ ದಿನಗಳಲ್ಲಿ ಆರ್ ಬಿಐಗೆ ಅನಿವಾರ್ಯವಾಗಲಿದೆ. ಇದು ಬ್ಯಾಂಕಿನಿಂದ ಸಾಲ ಪಡೆದ ಗ್ರಾಹಕರ ಮೇಲಿನ ಹೊರೆಯನ್ನು ಇನ್ನಷ್ಟು ಹೆಚ್ಚಿಸಲಿದೆ.