ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ; LIC, SBIಯಲ್ಲಿನ ನಿಮ್ಮ ಹೂಡಿಕೆಗೂ ಅಪಾಯ ಇದೆಯಾ?
ಅದಾನಿ ಗ್ರೂಪ್ ವಿರುದ್ಧ ಹಿಂಡೆನ್‌ಬರ್ಗ್ ವರದಿ ವಂಚನೆ ಆರೋಪ ಮಾಡಿದ ಬೆನ್ನಲ್ಲೇ ಅದಾನಿ ಸಂಸ್ಥೆಗಳ ಷೇರುಗಳು ಕುಸಿತ ಕಂಡಿವೆ. ಇನ್ನೊಂದೆಡೆ ಅದಾನಿ ಗ್ರೂಪ್ ನಲ್ಲಿ ಹೂಡಿಕೆ ಮಾಡಿರುವ ಎಲ್ಐಸಿ ಹಾಗೂ ಎಸ್ ಬಿಐ ಮೇಲೂ ಇದು ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಎಲ್ಐಸಿ, ಎಸ್ ಬಿಐಯಲ್ಲಿ ಹೂಡಿಕೆ ಮಾಡಿರುವ ಜನರ ಹಣಕ್ಕೆ ಏನಾದ್ರೂ ತೊಂದರೆ ಎದುರಾಗುತ್ತಾ? ಇಲ್ಲಿದೆ ಮಾಹಿತಿ.
ನವದೆಹಲಿ( ಜ.28): ಅದಾನಿ ಗ್ರೂಪ್ ವಂಚನೆ ಎಸಗಿದೆ ಎಂದು ಹಿಂಡೆನ್‌ಬರ್ಗ್ ವರದಿ ಆರೋಪಿಸಿದ ಬೆನ್ನಲ್ಲೇ ಶುಕ್ರವಾರ ಗೌತಮ್ ಅದಾನಿ ಒಡೆತನದ ಸಂಸ್ಥೆಗಳ ಷೇರುಗಳ ಬೆಲೆಯಲ್ಲಿ ಭಾರೀ ಕುಸಿತವಾಗಿದೆ. ಇದರಿಂದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಸ್ಥಾನ ಮೂರರಿಂದ ಏಳಕ್ಕೆ ಕುಸಿದಿದೆ. ಈ ಬೆಳವಣಿಗೆಗಳ ನಡುವೆ ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ಹೂಡಿಕೆ ಮಾಡಿರೋರಿಗೆ ಕೂಡ ಭೀತಿ ಕಾಡಲು ಪ್ರಾರಂಭವಾಗಿದೆ. ಇದಕ್ಕೆ ಕಾರಣ ಈ ಎರಡು ಸಂಸ್ಥೆಗಳು ಅದಾನಿ ಗ್ರೂಪ್ ನಲ್ಲಿ ಹೂಡಿಕೆ ಮಾಡಿವೆ. ಹೀಗಾಗಿ ಈ ಸಂಸ್ಥೆಗಳಿಗೂ ಕೂಡ ತೊಂದರೆ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರತಿಪಕ್ಷಗಳು ಕೂಡ ಹಿಂಡೆನ್‌ಬರ್ಗ್ ವರದಿ ಕುರಿತು ಸರ್ಕಾರ ಸಮಗ್ರ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿ. ಈ ವಂಚನೆ ದೇಶದ ಹಣಕಾಸು ವ್ಯವಸ್ಥೆಯನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆಯಿದೆ ಎಂದು ಪ್ರತಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಎಸ್ ಬಿಐ ಹಾಗೂ ಎಲ್ಐಸಿಯಲ್ಲಿ ಹೂಡಿಕೆ ಮಾಡಿರುವ ಕೋಟ್ಯಂತರ ಜನರ ಹಣಕ್ಕೆ ಕೂಡ ಆಪತ್ತು ಎದುರಾಗಲಿದೆ ಎಂದು ಹೇಳಿದೆ.
'ಅದಾನಿ ಗ್ರೂಪ್ ಸಾಮಾನ್ಯ ಸಂಸ್ಥೆಯಲ್ಲ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಿಂದಲೂ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದೆ' ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದಾರೆ. 'ಅದಾನಿ ಗ್ರೂಪ್ ನಲ್ಲಿ ಎಸ್ ಬಿಐ ಹಾಗೂ ಎಲ್ಐಸಿ ಹೂಡಿಕೆ ಮಾಡಿರುವ ಕಾರಣ ಈ ಎರಡೂ ಸಂಸ್ಥೆಗಳಲ್ಲಿರುವ ಕೋಟ್ಯಂತರ ಭಾರತೀಯರ ಉಳಿತಾಯ ಕೂಡ ಅಪಾಯದಲ್ಲಿದೆ' ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
'ಅದಾನಿ ಗ್ರೂಪ್ ವಿರುದ್ಧ ಹಿಂಡೆನ್‌ಬರ್ಗ್ ವರದಿಯಲ್ಲಿ ಮಾಡಿರುವ ಆರೋಪ ಸಾಬೀತಾದರೆ ಭವಿಷ್ಯಕ್ಕಾಗಿ ಎಲ್ಐಸಿ ಹಾಗೂ ಎಸ್ ಬಿಐಯಲ್ಲಿ ಉಳಿತಾಯ ಮಾಡಿರುವ ಕೋಟ್ಯಂತರ ಭಾರತೀಯರ ಜೀವನವನ್ನೇ ನಾಶಪಡಿಸಲಿದೆ' ಎಂದು ಸಿಪಿಐಎಂ ನಾಯಕ ಸೀತಾರಾಮ್ ಯೆಚ್ಯೂರಿ ಹೇಳಿದ್ದಾರೆ.
ಎಲ್ಐಸಿ ಹೊಸ ಬಿಮಾ ಬಚತ್ ಪ್ಲ್ಯಾನ್; ತಿಂಗಳಿಗೆ 1,791ರೂ. ಹೂಡಿಕೆ ಮಾಡಿದ್ರೆ 5ಲಕ್ಷ ರೂ. ರಿಟರ್ನ್
ಅದಾನಿ ಗ್ರೂಪ್ ಷೇರುಗಳು ಶುಕ್ರವಾರ ಕುಸಿತ ದಾಖಲಿಸಿದ ಬೆನ್ನಲ್ಲೇ ಈ ಸಂಸ್ಥೆಗಳಿಗೆ ಸಾಲ ನೀಡಿರುವ ಎಸ್ ಬಿಐ ಹಾಗೂ ಎಲ್ಐಸಿ ಷೇರುಗಳು ಕೂಡ ಕುಸಿತ ಕಂಡಿವೆ. ಆದರೆ, ಅದಾನಿ ಗ್ರೂಪ್ ನಲ್ಲಿ ನಾವು ಮಾಡಿರುವ ಹೂಡಿಕೆ ಆರ್ ಬಿಐ ಸೂಚಿಸಿರುವ ಮಿತಿಯಲ್ಲೇ ಇದೆ ಎಂದು ಈ ಸಂಸ್ಥೆಗಳು ತಿಳಿಸಿವೆ. ಸಾಮಾನ್ಯವಾಗಿ ಯಾವುದೇ ಒಂದು ಸಂಸ್ಥೆಯಲ್ಲಿ ಅರ್ಹ ಬಂಡವಾಳದ ಶೇ.25ಕ್ಕಿಂತ ಹೆಚ್ಚಿನ ಮೊತ್ತದ ಹೂಡಿಕೆಗೆ ಆರ್ ಬಿಐ ಅನುಮತಿ ನೀಡುವುದಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ ಬಿಐ ಚೇರ್ಮನ್ ದಿನೇಶ್ ಕುಮಾರ್ ಖಾರ 'ಅದಾನಿ ಗ್ರೂಪ್ ನಲ್ಲಿ ನಾವು ಮಾಡಿರುವ ಹೂಡಿಕೆಗೆ ಸದ್ಯ ಯಾವುದೇ ಅಪಾಯವಿಲ್ಲ. ಇತ್ತೀಚಿನ ದಿನಗಳಲ್ಲಿ ಅದಾನಿ ಗ್ರೂಪ್ ನಮ್ಮಿಂದ ಯಾವುದೇ ಸಾಲ ಪಡೆದಿಲ್ಲ. ಭವಿಷ್ಯದಲ್ಲಿ ಅಂಥ ಬೇಡಿಕೆ ಬಂದಾಗ ಎಚ್ಚರಿಕೆಯಿಂದ ಪರಿಗಣಿಸುತ್ತೇವೆ' ಎಂದಿದ್ದಾರೆ.
ಇನ್ನೊಂದೆಡೆ ಎಲ್ಐಸಿ ಕೂಡ ಈ ಬೆಳವಣಿಗೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅದಾನಿ ಗ್ರೂಪ್ ಗೆ ಎಲ್ಐಸಿ 301 ಕೋಟಿ ರೂ. ನೆರವು ಒದಗಿಸುತ್ತಿದೆ. ಅದಾನಿ ಗ್ರೂಪ್ ನಲ್ಲಿ ಎಲ್ಐಸಿ ಶೇ.4.23ರಷ್ಟು ಹೂಡಿಕೆ ಹೊಂದಿದೆ.
Budget 2023:ಈ ಬಾರಿಯ ಬಜೆಟ್ ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ ಆಗುತ್ತಾ? ಜನರ ನಿರೀಕ್ಷೆಗಳು ಏನಿವೆ?
ವರದಿಯಲ್ಲಿ ಏನಿದೆ?: ಅದಾನಿ ಗ್ರೂಪ್‌ನ ಎಲ್ಲಾ 7 ಪ್ರಮುಖ ಲಿಸ್ಟೆಡ್ ಕಂಪನಿಗಳು ಭಾರಿ ಪ್ರಮಾಣದ ಸಾಲವನ್ನು ಹೊಂದಿವೆ ಎಂದು ಫೋರೆನ್ಸಿಕ್ ಹಣಕಾಸು ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ಎಲ್ಲ ಗುಂಪಿನ ಕಂಪನಿಗಳ ಷೇರುಗಳು ಸಹ 85% ಕ್ಕಿಂತ ಹೆಚ್ಚು ಮೌಲ್ಯಯುತವಾಗಿವೆ. ಅದಾನಿ ಗ್ರೂಪ್ ತನ್ನ ಷೇರುಗಳನ್ನು ಮ್ಯಾನಿಪುಲೇಟ್ ಮಾಡಿದೆ. ಲೆಕ್ಕಪತ್ರದಲ್ಲಿ ವಂಚನೆ ನಡೆದಿದೆ. ಅದಾನಿ ಗ್ರೂಪ್ ಹಲವಾರು ದಶಕಗಳಿಂದ ಮಾರುಕಟ್ಟೆ ಕುಶಲತೆ, ಲೆಕ್ಕಪತ್ರ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ತಿಳಿಸಿದೆ.