ವಿಶ್ವದ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಗೌತಮ್ ಅದಾನಿ!
ಶಾರ್ಟ್ ಸೆಲ್ಲರ್ ಹಾಗೂ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಅದಾನಿ ಸಮೂಹದ ಕಂಪನಿಗಳ ಮೇಲೆ ನೀಡಿದ ವರದಿಯ ಪರಿಣಾಮ ನೇರವಾಗಿ ಕಾಣುತ್ತಿದ್ದು, ಬ್ಲೂಮ್‌ಬರ್ಗ್ ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿಯಿದ ಗೌತಮ್ ಅದಾನಿ ಹೊರಬಿದ್ದಿದ್ದಾರೆ.
ನವದೆಹಲಿ (ಜ.31): ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಗೌತಮ್ ಅದಾನಿ ಹೊರಬಿದ್ದಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಉದ್ಯಮಿ ಈ ಹಿಂದೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು. ಮಂಗಳವಾರ ಬೆಳಗ್ಗೆ, ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯ ಬಳಿಕ, ಹೆಚ್ಚಿನ ಅದಾನಿ ಗ್ರೂಪ್ ಸಂಸ್ಥೆಗಳ ಷೇರುಗಳು ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿತ್ತು. ಇಂದಿಗೂ ಕೂಡ ನೆಗೆಟಿವ್‌ನಲ್ಲಿ ವಹಿವಾಟು ನಡೆಸುತ್ತಿದ್ದು, ಸತತ ನಾಲ್ಕನೇ ದಿನವೂ ಅದಾನು ಗ್ರೂಪ್ ಕಂಪನಿಗಳ ಷೇರುಗಳು ಕುಸಿತ ಕಂಡಂತಾಗಿದೆ. ಹೂಡಿಕೆದಾರರಿಗೆ ಅದಾನಿ ಎಂಟರ್‌ಪ್ರೈಸಸ್‌ನ ರೂ 20,000-ಕೋಟಿ ಫಾಲೋ-ಆನ್ ಷೇರು ಮಾರಾಟವನ್ನು ತೆರೆದ ದಿನವೇ ಜನವರಿ 24 ರಂದು ಹಿಂಡೆನ್‌ಬರ್ಗ್ ತನ್ನ ಆಘಾತಕಾರಿ ವರದಿಯನ್ನು ಬಿಡುಗಡೆ ಮಾಡಿತ್ತು. ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಗೌತಮ್ ಅದಾನಿ ನೇತೃತ್ವದ ಕಂಪನಿಗಳ ವಿರುದ್ಧ ಮೋಸದ ವಹಿವಾಟುಗಳು ಮತ್ತು ಷೇರು ಬೆಲೆಯನ್ನು ಏರಿಕೆ ಮಾಡುವ ಆರೋಪ ಸೇರಿದಂತೆ ಹಲವು ದೋಷಾರೋಪಣೆಗಳನ್ನು ಮಾಡಿದ ನಂತರ ಅದಾನಿ ಗ್ರೂಪ್ ಷೇರುಗಳು ಷೇರುಪೇಟೆಯಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿದ್ದವು. ಆದರೆ, ಅದಾನಿ ಗ್ರೂಪ್ ಈ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ದೈನಂದಿನ ಶ್ರೇಯಾಂಕವನ್ನು ಪ್ರಕಟ ಮಾಡುವ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಇನ್ನೂ ಏಷ್ಯಾದ ಶ್ರೀಮಂತ ವ್ಯಕ್ತಿ ಟ್ಯಾಗ್ ಅನ್ನು ಹೊಂದಿರುವ ಅದಾನಿ ಸಂಪತ್ತು ಕಳೆದ 24 ಗಂಟೆಗಳಲ್ಲಿ $ 8.21 ಶತಕೋಟಿಯಿಂದ $ 84.4 ಶತಕೋಟಿಗೆ ಕುಸಿದಿದೆ. ಬ್ಲೂಮ್‌ಬರ್ಗ್ ಡೇಟಾ ಪ್ರಕಾರ ಅವರು ವರ್ಷದಿಂದ ಇಲ್ಲಿಯವರೆಗೆ $36.1 ಬಿಲಿಯನ್ ಕಳೆದುಕೊಂಡಿದ್ದಾರೆ. ಈ ಕುಸಿತದೊಂದಿಗೆ, ಬ್ಲೂಮ್‌ಬರ್ಗ್ ಪ್ರಕಾರ, ಅದಾನಿ ಈಗ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದ್ದು, ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ. ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪ್ರಸ್ತುತ ನಿವ್ವಳ ಮೌಲ್ಯವನ್ನು $82.2 ಬಿಲಿಯನ್ ಎಂದು ಅಂದಾಜಿಸಲಾಗಿದ್ದು, 12ನೇ ಸ್ಥಾನದಲ್ಲಿದ್ದಾರೆ.
ಅದಾನಿ ಗ್ರೂಪ್ ಮೇಲೆ ಆರೋಪ ಮಾಡಿದ ಹಿಂಡೆನ್‌ಬರ್ಗ್ ಶಾರ್ಟ್ ಸೆಲ್ಲರ್, ಏನಿದು ಶಾರ್ಟ್ ಸೆಲ್ಲಿಂಗ್?
ಸತತ ನಾಲ್ಕನೇ ದಿನವೂ ಅದಾನಿ ಟೋಟಲ್ ಗ್ಯಾಸ್ ಷೇರುಗಳು ಶೇಕಡಾ 10 ರಷ್ಟು ಕುಸಿದವು, ಅದಾನಿ ಗ್ರೀನ್ ಎನರ್ಜಿ ಶೇಕಡಾ 9.60 ರಷ್ಟು ಕುಸಿದಿದೆ, ಅದಾನಿ ಟ್ರಾನ್ಸ್‌ಮಿಷನ್ ಶೇಕಡಾ 8.62, ಅದಾನಿ ವಿಲ್ಮರ್ (ಶೇ 5), ಅದಾನಿ ಪವರ್ (ಶೇ 4.98), ಎನ್‌ಡಿಟಿವಿ (4.98) ಬಿಎಸ್‌ಇಯಲ್ಲಿ ಶೇ.) ಮತ್ತು ಅದಾನಿ ಪೋರ್ಟ್ಸ್ (ಶೇ. 1.45) ಷೇರುಗಳೂ ಕೂಡ ಕುಸಿತ ಕಂಡಿದೆ. ಈ ಎಲ್ಲದರ ನಡುವೆ ಅದಾನಿ ಎಂಟರ್‌ಪ್ರೈಸಸ್ ಶೇಕಡಾ 5.26, ಅಂಬುಜಾ ಸಿಮೆಂಟ್ಸ್ ಶೇಕಡಾ 5.25 ಮತ್ತು ಎಸಿಸಿ ಶೇಕಡಾ 2.91 ರಷ್ಟು ಏರಿಕೆ ಕಂಡಿದೆ. ಅದಾನಿ ಗ್ರೂಪ್‌ನ ಬಹುತೇಕ ಕಂಪನಿಗಳ ಷೇರುಗಳು ಸೋಮವಾರವೂ ಕುಸಿತ ಕಂಡಿದ್ದವು. ಮಂಗಳವಾರ ಬೆಳಗ್ಗೆ ಎಲ್‌ಐಸಿ ಷೇರು ಶೇ.0.82ರಷ್ಟು ಕುಸಿದಿದ್ದರೆ, ಪಿಎನ್‌ಬಿ ಶೇ.3.74ರಷ್ಟು ಏರಿದೆ.
413 ಪುಟದ ಅದಾನಿ ಗ್ರೂಪ್ ತಿರುಗೇಟಿಗೆ ಹಿಂಡೆನ್‌ಬರ್ಗ್ ಪ್ರತಿಕ್ರಿಯೆ 'ಮೋಸವನ್ನು ರಾಷ್ಟ್ರೀಯತೆಯಿಂದ ಮರೆಮಾಚಲಾಗದು'!
"ಮಾರುಕಟ್ಟೆಗಳು ಅದಾನಿ ಎಂಟರ್‌ಪ್ರೈಸಸ್‌ನ ರೂ. 20,000 ಕೋಟಿ ಫಾಲೋ-ಆನ್ ಷೇರು ಮಾರಾಟದ ಮೇಲೆ ಕಣ್ಣಿಡುತ್ತವೆ ಮತ್ತು ಅದು ಉತ್ತಮ ಪ್ರತಿಕ್ರಿಯೆ ಪಡೆಯುತ್ತದೆಯೇ ಎಂದು ತಿಳಿಯಲು ವ್ಯಾಪಾರಿಗಳು ಉತ್ಸುಕರಾಗಿದ್ದಾರೆ" ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್ ಕಂಪನಿಯ ಹಿರಿಯ ವಿಪಿ (ಸಂಶೋಧನೆ)ರಿಸರ್ಚ್ ವಿಶ್ಲೇಷಕ ಪ್ರಶಾಂತ್ ತಾಪ್ಸೆ ಹೇಳಿದ್ದಾರೆ. ಷೇರು ಮಾರುಕಟ್ಟೆಯಲ್ಲಿ, 30-ಷೇರು BSE ಬೆಂಚ್‌ಮಾರ್ಕ್ 198.15 ಪಾಯಿಂಟ್‌ಗಳನ್ನು ಅಥವಾ 0.33 ಶೇಕಡಾ ಕಡಿಮೆಯಾಗಿ 59,302.26 ಕ್ಕೆ ತಲುಪಿದೆ.