ಬೆಂಗಳೂರು(ಜ.16): ಹೆಣ್ಣುಮಕ್ಕಳ ಸುರಕ್ಷತೆ, ಉಜ್ವಲ ಭವಿಷ್ಯ, ಉತ್ತಮ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಅಂತ ಯೋಜನೆಗಳಲ್ಲಿ ಅತ್ಯಂತ ಪ್ರಮುಖವಾದುದ್ದು.

ಅದರಂತೆ ಕೇಂದ್ರ ಸರ್ಕಾರ ಕಳೆದ ವರ್ಷ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆರಂಭಿಸಿದೆ. ಇದು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆ ಆಗಿದೆ. ಈ ಯೋಜನೆ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಖಾತೆ ಸೌಲಭ್ಯ ನೀಡುತ್ತದೆ.

ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಂದರ್ಭದಲ್ಲಿ ನೆರವಾಗುವುದು ಈ ಉಳಿತಾಯ ಖಾತೆಯ ಪ್ರಮುಖ ಉದ್ದೇಶ. ಸುಕನ್ಯಾ ಸಮೃದ್ಧಿ ಖಾತೆಯನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ತೆರೆಯಬಹುದಾಗಿದೆ. 

ಅದರಂತೆ ಸುಕನ್ಯಾ ಸಮೃದ್ಧಿ ಖಾತೆ ಸಂದರ್ಭದಲ್ಲಿ ಪಾಲಿಸಬೇಕಾದ ಹೊಸ ನಿಯಮಗಳ ವಿವರ ಇಲ್ಲಿದೆ.

1.ಗರಿಷ್ಠ ಮೊತ್ತ: ಒಂದು ಹಣಕಾಸು ವರ್ಷದ ಅವಧಿಯಲ್ಲಿ ಖಾತೆಯ ಒಟ್ಟು ಠೇವಣಿ ಮೊತ್ತ 1.5 ಲಕ್ಷ ದಾಟಬಾರದು. ಇದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಯಾವುದೆ ಬಡ್ಡಿ ಇರುವುದಿಲ್ಲ. 1.5 ಲಕ್ಷಕ್ಕಿಂತ ಹೆಚ್ಚು ಇಟ್ಟಿರುವ ಮೊತ್ತವನ್ನು ಖಾತೆದಾರರು ಯಾವಾಗ ಬೇಕಾದರೂ ಹಿಂಪಡೆಯಬಹುದು.

2.ಬಡ್ಡಿದರ: ಸರ್ಕಾರ ಈ ಖಾತೆಯ ಬಡ್ಡಿದರವನ್ನು ಕಾಲ ಕಾಲಕ್ಕೆ ನಿರ್ಧರಿಸಲಿದೆ ಹಾಗೂ ವಾರ್ಷಿಕವಾಗಿ ಇದನ್ನು ಪರಿಷ್ಕರಿಸಲಿದೆ. ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿಯನ್ನು ಘೋಷಿಸಲಿದೆ. ಪ್ರಸ್ತುತ ತ್ರೈಮಾಸಿಕದ ಬಡ್ಡಿದರ ಶೇ. 8.3ರಷ್ಟು ಇದೆ.

3.ಖಾತೆ ವರ್ಗಾವಣೆ: ಮೂಲ ವಾಸ್ತವ್ಯ ವಿಳಾಸದೊಂದಿಗೆ ಖಾತೆಯನ್ನು ಅಂಚೆ ಕಚೇರಿಯಿಂದ ಬ್ಯಾಂಕ್‌ಗೆ ಅಥವಾ ಬ್ಯಾಂಕ್‌ನಿಂದ ಅಂಚೆ ಕಚೇರಿಗೆ ವರ್ಗಾಯಿಸಲಾಗುವುದು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.

4.ಠೇವಣಿ ವಯಸ್ಸು: ಈ ಹಿಂದೆ ಠೇವಣಿ ಮಾಡಿಸಲು ನಿಮ್ಮ ಮಗಳಿಗೆ ಕನಿಷ್ಟ 15 ವರ್ಷ ವಯಸ್ಸಾಗಿರಬೇಕು. 

5. ಕನಿಷ್ಟ ಠೇವಣಿ: ಮೊದಲಿಗೆ ವಾರ್ಷಿಕವಾಗಿ ಕನಿಷ್ಟ ಠೇವಣಿ 1000 ರೂ. ಇತ್ತು. ಪ್ರಸ್ತುತ ಯಾವುದೇ ಕನಿಷ್ಟ ಠೇವಣಿ ಇಟ್ಟಿಲ್ಲ. ಆದರೆ ಸಾಮಾನ್ಯ ಉಳಿತಾಯ ಖಾತೆದಾರರು ಶೇ. 4ರಷ್ಟು ಬಡ್ಡಿ ಪಡೆಯಲು ಅರ್ಹರಾಗಿರುತ್ತಾರೆ.

6.ಮೆಚುರಿಟಿ ಅವಧಿ: ಖಾತೆ ತೆರೆದ ದಿನದಿಂದ 21ನೇ ವಯಸ್ಸು ಪೂರೈಸಿದ ನಂತರ ಈ ಖಾತೆಯ ಮೆಚುರಿಟಿ ಅವಧಿ ಮುಗಿಯುತ್ತದೆ. 21 ವರ್ಷಗಳ ಅವಧಿ ಮುಗಿದ ನಂತರ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ.

7.ಪೌರತ್ವ: ಸುಕನ್ಯಾ ಸಮೃದ್ಧಿ ಖಾತೆದಾರರ ಪೌರತ್ವದಲ್ಲಿ ಬದಲಾವಣೆಗಳಾದಲ್ಲಿ ಖಾತೆಯನ್ನು ಮುಚ್ಚಲಾಗುವುದು. ಅಂದರೆ ವಿದೇಶದಲ್ಲಿ ಹೋಗಿ ವಾಸವಾದರೆ ಖಾತೆಯನ್ನು ಅಕಾಲಿಕವಾಗಿ ಮುಚ್ಚಲಾಗುವುದು.