ಇಂದಿನ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಓದುವುದು ಕಷ್ಟ ಅಲ್ಲ. ಆದರೆ ಆ ಕೋರ್ಸ್‌ಗೆ ಹಣ ಹೊಂಚುವುದೇ ಚಾಲೆಂಜಿಂಗ್. ಸಾಲ ಕೊಡಲು ಬ್ಯಾಂಕ್‌ಗಳೇನೋ ತುದಿಗಾಲಲ್ಲಿ ನಿಂತಿರುತ್ತವೆ,
ಆದರೆ ಬ್ಯಾಂಕ್‌ಅನ್ನು ಆಯ್ಕೆ ಮಾಡಿಕೊಳ್ಳೋದು ಹೇಗೆ, ಅಲ್ಲಿ ಎಷ್ಟು ಸಾಲ ಸಿಗುತ್ತೆ, ಬಡ್ಡಿ ಎಷ್ಟಿರುತ್ತೆ ಇತ್ಯಾದಿ ವಿವರಗಳ ಬಗ್ಗೆ ತಿಳಿದಿರಲ್ಲ.

ಮಧ್ಯಮವರ್ಗದ ಕುಟುಂಬದ ಮಕ್ಕಳು ಈಗ ವಿದೇಶದಲ್ಲಿ ಓದಲು ಹೋಗುವುದು ತುಂಬಾ ಮಾಮೂಲಿಯಾಗಿದೆ. ವಿದೇಶದಲ್ಲಿ ಓದಲು ತುಂಬಾ ದುಡ್ಡು ಕೂಡಿಟ್ಟುಕೊಂಡಿರಬೇಕು ಎನ್ನುವ ಕಾಲ ಈಗ ಇಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಸೇರಿದಂತೆ ಈಗ ಎಲ್ಲಾ ಬ್ಯಾಂಕುಗಳೂ ಶಿಕ್ಷಣ ಸಾಲಗಳನ್ನು ನೀಡುತ್ತವೆ. 

ಆದರೆ ಇವೆರಡು ಬ್ಯಾಂಕುಗಳ ಮಧ್ಯೆ ಕೆಲವು ವ್ಯತ್ಯಾಸಗಳಿವೆ. ಶಿಕ್ಷಣ ಸಾಲಗಳನ್ನು ತಕ್ಷಣ ಪಡೆದುಕೊಳ್ಳುವುದು ಕಷ್ಟ. ಮೊದಲೇ ಪ್ಲಾನ್ ಮಾಡಿಟ್ಟುಕೊಂಡಿರಬೇಕು. ಈಗಿನ್ನೂ
ಮಾರ್ಚ್ ಮಾಸಾಂತ್ಯ. ಮುಂದೆ ಶಿಕ್ಷಣ ಸಾಲ ತೆಗೆದುಕೊಳ್ಳುವವರು ಆ ಕುರಿತು ಯೋಚಿಸಲು ಇದು ಸಕಾಲ. ಯೋಚಿಸುವುದಷ್ಟೇ ಅಲ್ಲ, ಈಗಲೇ ಯೋಜನೆ ರೂಪಿಸಿಕೊಳ್ಳಬೇಕು.

ಕೋರ್ಸು ಮುಗಿದ ಮೇಲೆ ಬಡ್ಡಿ ಸಾಮಾನ್ಯವಾಗಿ ಕೋರ್ಸು ಮುಗಿಯುವವರೆಗೆ ಶಿಕ್ಷಣ ಸಾಲಕ್ಕೆ ಬಡ್ಡಿ ಬೀಳುವುದಿಲ್ಲ. ಕೆಲವು ಬ್ಯಾಂಕುಗಳು ಸುಮಾರು ಆರು ತಿಂಗಳಿಂದ ಒಂದು ವರ್ಷದವರೆಗೆ ಬಡ್ಡಿ ಹಾಕುವುದಿಲ್ಲ. ಅದರ ನಂತರ ಬಡ್ಡಿ ಬೀಳುತ್ತದೆ.

ಎಲ್ಲಿ ಕಡಿಮೆ ಬಡ್ಡಿ? ಎಲ್ಲಿ ಸುಲಭ?:

ರಾಷ್ಟ್ರೀಕೃತ ಬ್ಯಾಂಕು ಮತ್ತು ಖಾಸಗಿ ಬ್ಯಾಂಕುಗಳಿಗೆ ಹೋಲಿಸಿದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ. ಅದರಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೇ.10 ಬಡ್ಡಿ ಇದ್ದರೆ ಖಾಸಗಿ ಬ್ಯಾಂಕುಗಳಲ್ಲಿ ಶೇ.12.5 ಬಡ್ಡಿ ಹಾಕುತ್ತಾರೆ. ಆದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆಯುವುದು ಸ್ವಲ್ಪ ಕಷ್ಟದಾಯಕ. 

ಸುಮಾರು ಏಳೂವರೆ ಲಕ್ಷದ ವರೆಗೆ ಯಾವುದೇ ಸೆಕ್ಯುರಿಟಿ ಇಲ್ಲದೆ ಸಾಲ ನೀಡುತ್ತಾರೆ. ಅದಕ್ಕಿಂತ ಜಾಸ್ತಿ ಸಾಲ ಬೇಕಿದ್ದರೆ ಮನೆ ದಾಖಲೆ ಅಥವಾ ಮತ್ತಿತರ ದಾಖಲೆ ನೀಡಬೇಕು. ಖಾಸಗಿ ಬ್ಯಾಂಕುಗಳು ಸುಮಾರು 35ರಿಂದ 40 ಲಕ್ಷದವರೆಗೂ ಯಾವುದೇ ದಾಖಲೆ ಇಲ್ಲದೆ ಸಾಲ ನೀಡುತ್ತವೆ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಾಸಾಗುವುದು ತಡವಾಗುತ್ತದೆ. ಬ್ಯಾಂಕು ಸಾಲ ಕೊಡಲು ನಿರ್ಧರಿಸಿ ಕೈಗೆ ದುಡ್ಡು ಬರುವಷ್ಟರಲ್ಲಿ ಮೂರು ತಿಂಗಳು ಕಳೆಯಬಹುದು. ಹಾಗೆ ನೋಡಿದರೆ ಪ್ರೊಸೆಸಿಂಗ್ ಫೀ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕಡಿಮೆ. ಖಾಸಗಿಯಲ್ಲಿ ನೀವು ಪಡೆದುಕೊಳ್ಳುವ ಸಾಲದ ಒಂದು ಪರ್ಸೆಂಟ್ ನೀಡಬೇಕು. 35 ಲಕ್ಷ ಸಾಲ ಪಡೆದರೆ 35,000 ರೂ. ಕಟ್ಟಬೇಕು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಮೆರಿಕಕ್ಕೆ ಮನ್ನಣೆ:
ರಾಷ್ಟ್ರೀಕೃತ ಬ್ಯಾಂಕುಗಳು ಕಾಲೇಜು, ಯುನಿವರ್ಸಿಟಿ ಮತ್ತು ಕೋರ್ಸು ಎಲ್ಲವನ್ನೂ ನೋಡಿ ಸಾಲ ಕೊಡಬೇಕೋ ಬೇಡವೋ ಅಂತ ನಿರ್ಧರಿಸುತ್ತದೆ. ಅದರಲ್ಲೂ ಅವುಗಳು ಹೆಚ್ಚು ಪ್ರಾಮುಖ್ಯತೆ ನೀಡುವುದು ಅಮೆರಿಕದ ಯುನಿವರ್ಸಿಟಿಗಳಿಗೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ ವಿಷಯಗಳಲ್ಲಿ ಕೋರ್ಸು ಮಾಡಲು ಹೋಗುವವರಿಗೆ ಆದ್ಯತೆ ಹೆಚ್ಚಿರುತ್ತದೆ. ಬೇರೆ
ದೇಶಗಳಲ್ಲಿ ಕಲಿಯುವುದಕ್ಕೆ ಹೋಗುವವರಿಗೆ, ಬೇರೆ ಕೋರ್ಸು ಕಲಿಯಲು ಹೋಗುವವರಿಗೆ ನಿರಾಸೆ ಕಾದಿರಲೂಬಹುದು.

ಮೊದಲೆಲ್ಲಾ ವಿಜ್ಞಾನ, ತಂತ್ರಜ್ಞಾನ ಕಲಿಯಲು ಬೇರೆ ದೇಶಕ್ಕೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಜರ್ಮನಿ, ಕೆನಡಾ ಹೀಗೆ ಬೇರೆ ದೇಶಗಳಿಗೆ ಬೇರೆ ಬೇರೆ ತರದ ಕೋರ್ಸು ಕಲಿಯಲು ಹೋಗುತ್ತಾರೆ. ಅಂಥವರಿಗೆ ಖಾಸಗಿ ಬ್ಯಾಂಕುಗಳೇ ಆಸರೆ. ಖಾಸಗಿ ಬ್ಯಾಂಕುಗಳು ಎಲ್ಲರಿಗೂ ಸಾಲ ಕೊಡುವಷ್ಟು ಉದಾರವಾಗಿ ಸಾಲ ಪಡೆಯುವಾಗ
ಸ್ವಲ್ಪ ಲೆಕ್ಕಾಚಾರ ಬೇಕು.

ವಿದೇಶದಲ್ಲಿ ಕಲಿಯಲು ಹೋಗುವವರು ಮೊದಲೇ ಎಲ್ಲಾ ಲೆಕ್ಕಾಚಾರ ಮಾಡಿರಬೇಕು. ಕೋರ್ಸಿಗೆ ಫೀಸು ಎಷ್ಟು ಮತ್ತು ಅಲ್ಲಿ ಬದುಕುವುದಕ್ಕೆ ಎಷ್ಟು ದುಡ್ಡು ಬೇಕು ಎಂಬುದು ಗೊತ್ತಿರಬೇಕು. ಸಾಮಾನ್ಯವಾಗಿ ಬ್ಯಾಂಕುಗಳು ಕೋರ್ಸಿಗೆ ತಗುಲುವ ಫೀಸ್‌ಗಿಂತ ಸುಮಾರು ಶೇ.15ರಿಂದ 20 ಜಾಸ್ತಿ ಸಾಲ ನೀಡುತ್ತವೆ. 40 ಲಕ್ಷ ರೂ. ಕೋರ್ಸ್ ಫೀಸ್ ಇದ್ದರೆ ಜೊತೆಗೆ ಖರ್ಚಿಗೆ ಅಂತ ಸುಮಾರು 8 ಲಕ್ಷ ರೂ. ನೀಡುತ್ತವೆ. 

ಅದನ್ನೆಲ್ಲಾ ಮೊದಲೇ ಆಲೋಚಿಸಿ ಪ್ಲಾನ್ ಮಾಡಿರಬೇಕು. ಬಹಳಷ್ಟು ವಿದ್ಯಾರ್ಥಿಗಳು ಅಲ್ಲಿ ಓದುತ್ತಲೇ ಪಾರ್ಟ್ ಟೈಮ್ ಕೆಲಸ ಮಾಡುವುದೂ ಇದೆ. ಫೀಸ್‌ಗೆ ಸಾಲದ ಹಣ ನೀಡಿ ತಮ್ಮ ಖರ್ಚಿಗೆ ತಾವು ದುಡಿದು ಗಳಿಸಿದ ಹಣ ಬಳಸುತ್ತಾರೆ. ವಿದೇಶಕ್ಕೆ ಹೋಗಿ ಓದಬೇಕು ಅಂತ ಬಯಸುವ ವಿದ್ಯಾರ್ಥಿಗಳು, ಪೋಷಕರು ಇವೆಲ್ಲಾ ಮಾಹಿತಿ ತಿಳಿದುಕೊಂಡಿದ್ದರೆ ಚೆಂದ.