ನವದೆಹಲಿ[ಆ.17]: 2018ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹೂಡುವ ಮೂಲಕ ಗಮನ ಸೆಳೆದಿದ್ದ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ (ಎಂಇಪಿ) ಸಂಸ್ಥಾಪಕಿ ಹಾಗೂ ಉದ್ಯಮಿ ನೌಹೆರಾ ಶೇಖ್‌ ಅವರಿಗೆ ಭಾರಿ ಹಿನ್ನಡೆಯಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಜಾರಿ ನಿರ್ದೇಶನಾಲಯವು ನೌಹೆರಾ, ಅವರ ಒಡೆತನದ ಹೀರಾ ಗ್ರೂಪ್‌ ಆಫ್‌ ಕಂಪನೀಸ್‌ ವಿವಿಧ ರಾಜ್ಯಗಳಲ್ಲಿ ಹೊಂದಿರುವ ಬರೋಬ್ಬರಿ 300 ಕೋಟಿ ರು. ಆಸ್ತಿಯನ್ನು ಜಪ್ತಿ ಮಾಡಿದೆ.

ಮಲ್ಟಿಲೆವೆಲ್‌ ಮಾರ್ಕೆಟಿಂಗ್‌ ಕಂಪನಿ ಇದಾಗಿದ್ದು, ಚಿಟ್‌ ಫಂಡ್‌ ನಡೆಸಿ ಅಕ್ರಮ ಹಣಕಾಸು ವ್ಯವಹಾರ ನಡೆಸಿತ್ತು. ಈ ಸಂಬಂಧ ಈಗಾಗಲೇ ನೌಹೆರಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಈ ನಡುವೆ ತೆಲಂಗಾಣ, ಕೇರಳ, ಮಹಾರಾಷ್ಟ್ರ, ದೆಹಲಿ ಹಾಗೂ ಆಂಧ್ರಪ್ರದೇಶದಲ್ಲಿರುವ 96 ಸ್ಥಿರಾಸ್ತಿಗಳು ಹಾಗೂ ಬ್ಯಾಂಕ್‌ ಖಾತೆಯಲ್ಲಿರುವ 22.69 ಕೋಟಿ ರು. ನಗದು ಸೇರಿದಂತೆ 299.99 ಕೋಟಿ ರು.ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ತಿಂಗಳಿಗೆ ಶೇ.3 ಅಥವಾ ವರ್ಷಕ್ಕೆ ಶೇ.36ರಷ್ಟುಪ್ರತಿಫಲ ನೀಡುವ ಆಸೆ ತೋರಿಸಿ ದೇಶಾದ್ಯಂತ 1.72 ಲಕ್ಷ ಹೂಡಿಕೆದಾರರಿಂದ 5600 ಕೋಟಿ ರು.ಗಳನ್ನು ಸಂಗ್ರಹಿಸಿ ವಂಚನೆ ನಡೆಸಿದ ಸಂಬಂಧ ನೌಹೆರಾ ವಿರುದ್ಧ ಸಾಕಷ್ಟುಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸಿದೆ. ಹೀರಾ ಗ್ರೂಪ್‌ ಹೆಸರಿನಲ್ಲಿ 24 ಸಂಸ್ಥೆಗಳನ್ನು ಹೊಂದಿರುವ ನೌಹೆರಾ 182 ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಕರ್ನಾಟಕ ಚುನಾವಣೆ ಟಿಕೆಟ್‌ ಕೊಟ್ಟು ಅಭ್ಯರ್ಥಿಗಳಿಗೆ ಟೋಪಿ

2018ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭ ಪಕ್ಷದ ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಚುನಾವಣೆ ಖರ್ಚಿಗೆ ಹಣ ಕೊಡುವುದಾಗಿ ನಂಬಿಸಿ, ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿದ್ದ ನೌಹೆರಾ ಚುನಾವಣೆ ಫಲಿತಾಂಶ ಬಳಿಕ ಪರಾರಿಯಾಗಿದ್ದರು. ಈ ಸಂಬಂಧ ಬೆಂಗಳೂರು, ಬಳ್ಳಾರಿ ಮತ್ತಿತರೆಡೆ ಪ್ರಕರಣ ದಾಖಲಾಗಿವೆ.