HDFC ಬ್ಯಾಂಕ್ 1:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ಮತ್ತು ಪ್ರತಿ ಷೇರಿಗೆ ₹5 ವಿಶೇಷ ಲಾಭಾಂಶವನ್ನು ಘೋಷಿಸಿದೆ. ಜುಲೈ 25 ವಿಶೇಷ ಲಾಭಾಂಶದ ದಾಖಲೆ ದಿನಾಂಕವಾಗಿದೆ.

DID YOU
KNOW
?
ಬೋನಸ್‌ ಷೇರು
ಎಚ್‌ಡಿಎಫ್‌ಸಿ ಬ್ಯಾಂಕ್‌ ಇದೇ ಮೊಟ್ಟ ಮೊದಲ ಬಾರಿಗೆ ತನ್ನ ಷೇರುದಾರರಿಗೆ ಬೋನಸ್‌ ಷೇರು ನೀಡುತ್ತಿದೆ. HDFC ಬ್ಯಾಂಕ್‌ 36 ಲಕ್ಷ ರಿಟೇಲ್‌ ಷೇರುದಾರರನ್ನು ಹೊಂದಿದೆ.

ಮುಂಬೈ (ಜು.19): ಭಾರತದ ಅತಿದೊಡ್ಡ ಖಾಸಗಿ ಸಾಲದಾತ HDFC ಬ್ಯಾಂಕ್ ಲಿಮಿಟೆಡ್, ಜುಲೈ 19, ಶನಿವಾರ ನಡೆದ ತನ್ನ ಮಂಡಳಿಯ ಸಭೆಯ ಕೊನೆಯಲ್ಲಿ 1:1 ಅನುಪಾತದಲ್ಲಿ ಬೋನಸ್ ಷೇರುಗಳ ವಿತರಣೆಯನ್ನು ಘೋಷಿಸಿದೆ. ಇದರರ್ಥ, ಷೇರುದಾರರು ದಾಖಲೆಯ ದಿನಾಂಕದಂದು ತಾವು ಹೊಂದಿರುವ ಪ್ರತಿ ಷೇರಿಗೆ ಒಂದು ಉಚಿತ ಷೇರನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಇದರ ರೆಕಾರ್ಡ್‌ ಡೇಟ್‌ ಯಾವಾಗ ಎನ್ನುವುದು ಬಹಿರಂಗವಾಗಿಲ್ಲ.

ಹೆಚ್ಚುವರಿಯಾಗಿ, ಮಂಡಳಿಯು ಪ್ರತಿ ಷೇರಿಗೆ ₹5 ರ ವಿಶೇಷ ಲಾಭಾಂಶವನ್ನು ಸಹ ಅನುಮೋದಿಸಿದೆ. ಈ ವಿಶೇಷ ಲಾಭಾಂಶಕ್ಕೆ ದಾಖಲೆಯ ದಿನಾಂಕವನ್ನು ಶುಕ್ರವಾರ ಜುಲೈ 25 ಎಂದು ನಿಗದಿಪಡಿಸಲಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಬ್ಯಾಂಕೇತರ ಸಾಲ ನೀಡುವ ಅಂಗವಾದ ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್‌ನ ಐಪಿಒ ಸಮಯದಲ್ಲಿ ಭಾಗಶಃ ಷೇರು ಮಾರಾಟದ ಭಾಗವಾಗಿ ₹10,000 ಕೋಟಿ ಲಾಭ ಪಡೆದ ನಂತರ ಈ ಬೋನಸ್‌ ಷೇರು ಘೋಷಣೆ ಮಾಡಲಾಗಿದೆ.

ಬಿಎಸ್‌ಇಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಷೇರುದಾರರಿಗೆ ಎಂದಿಗೂ ಬೋನಸ್ ಷೇರುಗಳನ್ನು ನೀಡಿಲ್ಲ. ಇದೇ ಮೊದಲ ಬಾರಿಗೆ ಬ್ಯಾಂಕ್‌ ಬೋನಸ್‌ ಷೇರುಗಳನ್ನು ನೀಡಲು ತೀರ್ಮಾನಿಸಿದೆ

ಎಚ್‌ಡಿಎಫ್‌ಸಿ ಬ್ಯಾಂಕ್‌ ಕೈಗೊಂಡ ಹಿಂದಿನ ಕಾರ್ಪೊರೇಟ್ ಕ್ರಮವೆಂದರೆ 2011 ರಲ್ಲಿ ಷೇರು ವಿಭಜನೆ, ಆಗ ಅದು ₹10 ರ ಒಂದು ಷೇರನ್ನು ₹2 ರ ಐದು ಷೇರುಗಳಾಗಿ ವಿಂಗಡಿಸಿತು, ನಂತರ 2019 ರಲ್ಲಿ ₹2 ರ ಆ ಒಂದು ಷೇರನ್ನು ತಲಾ ₹1 ರ ಎರಡು ಷೇರುಗಳಾಗಿ ವಿಭಜಿಸಿತು.

ಜೂನ್ ತ್ರೈಮಾಸಿಕದ ಅಂತ್ಯದ ವೇಳೆಗೆ, HDFC ಬ್ಯಾಂಕ್ 36 ಲಕ್ಷಕ್ಕೂ ಹೆಚ್ಚು ಸಣ್ಣ ಚಿಲ್ಲರೆ ಷೇರುದಾರರನ್ನು ಹೊಂದಿದ್ದು, ಅಂದರೆ ₹2 ಲಕ್ಷದವರೆಗಿನ ಅಧಿಕೃತ ಷೇರು ಬಂಡವಾಳ ಹೊಂದಿರುವವರು. ಇವರು ಎಚ್‌ಡಿಎಫ್‌ಸಿ ಸಂಸ್ಥೆಯಲ್ಲಿ 10.32% ಪಾಲನ್ನು ಹೊಂದಿದ್ದಾರೆ.

HDFC ಬ್ಯಾಂಕ್ ಕೊನೆಯದಾಗಿ ಕಳೆದ ತಿಂಗಳು ತನ್ನ ಷೇರುದಾರರಿಗೆ ಪ್ರತಿ ಷೇರಿಗೆ ₹22 ಲಾಭಾಂಶವನ್ನು ಪಾವತಿಸಿತ್ತು, ನಂತರ ಮೇ 2024 ರಲ್ಲಿ ಪ್ರತಿ ಷೇರಿಗೆ ₹19.5, ಮೇ 2023 ರಲ್ಲಿ ಪ್ರತಿ ಷೇರಿಗೆ ₹19 ಮತ್ತು ಮೇ 2022 ರಲ್ಲಿ ಪ್ರತಿ ಷೇರಿಗೆ ₹15.5 ಅಂತಿಮ ಲಾಭಾಂಶವನ್ನು ನೀಡಿತ್ತು. ಶುಕ್ರವಾರದಂದು HDFC ಬ್ಯಾಂಕ್ ಷೇರುಗಳು ದಿನದ ಅತ್ಯಂತ ಕಡಿಮೆ ಹಂತದಲ್ಲಿ ಕೊನೆಗೊಂಡು, ಶೇ.1.6 ರಷ್ಟು ಕುಸಿತ ಕಂಡು ₹1,956 ಕ್ಕೆ ತಲುಪಿದೆ. ಕಳೆದ ಒಂದು ತಿಂಗಳಲ್ಲಿ ಷೇರುಗಳು ಕೇವಲ ಶೇ.1.1 ರಷ್ಟು ಏರಿಕೆಯಾಗಿದ್ದು, 2025 ರಲ್ಲಿ ಇಲ್ಲಿಯವರೆಗೆ ಶೇ.1 ರಷ್ಟು ಏರಿಕೆಯಾಗಿದೆ.