ಕರೂರ್ ವೈಶ್ಯ ತನ್ನ ಷೇರುದಾರರಿಗೆ ಬೋನಸ್ ಷೇರುಗಳನ್ನು ನೀಡುತ್ತಿರುವ ನಾಲ್ಕನೇ ಉದಾಹರಣೆ ಇದಾಗಿದೆ. 

ಮುಂಬೈ (ಜು.19): ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ತನ್ನ ಷೇರುದಾರರಿಗೆ ಇದೇ ಮೊದಲ ಬಾರಿಗೆ ಬೋನಸ್‌ ಷೇರು ನೀಡುವ ತೀರ್ಮಾನ ಮಾಡಿದೆ. ಇದರ ನಡುವೆ ದೇಶದ ಮತ್ತೊಂದು ಖಾಸಗಿ ಬ್ಯಾಂಕ್‌ ತನ್ನ ಷೇರುದಾರರಿಗೆ ಗಿಫ್ಟ್‌ ನೀಡಿದೆ. ಅಂದಾಜು ಏಳು ವರ್ಷಗಳ ಬಳಿಕ ಷೇರುದಾರರಿಗೆ ಬೋನಸ್‌ ಷೇರು ನೀಡುವ ತೀರ್ಮಾನ ಮಾಡಿದೆ.

ತಮಿಳುನಾಡು ಮೂಲದ ಖಾಸಗಿ ಸಾಲದಾತ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್, ಷೇರುಗಳ ಬೋನಸ್ ವಿತರಣೆಯನ್ನು ಪರಿಗಣಿಸಲು ಜುಲೈ 24ರ ಗುರುವಾರ ಮಂಡಳಿಯ ಸಭೆಯನ್ನು ನಡೆಸಲಿದೆ ಎಂದು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ. ಕಳೆದ ಏಳು ವರ್ಷಗಳಲ್ಲಿ ಕರೂರ್‌ ವೈಶ್ಯ ಬ್ಯಾಂಕ್‌ ತನ್ನ ಷೇರುದಾರರಿಗೆ ಬೋನಸ್ ವಿತರಣೆಯನ್ನು ಪರಿಗಣಿಸುತ್ತಿರುವುದು ಇದೇ ಮೊದಲು.

ಸಾಲದಾತ ಸಂಸ್ಥೆಯು ತನ್ನ ಷೇರುದಾರರಿಗೆ ಬೋನಸ್ ಷೇರುಗಳನ್ನು ನೀಡುತ್ತಿರುವ ನಾಲ್ಕನೇ ನಿದರ್ಶನ ಇದಾಗಿದೆ.ಇದಕ್ಕೂ ಮೊದಲು, ಕರೂರ್ ವೈಶ್ಯ ಬ್ಯಾಂಕ್ 2002 ರಲ್ಲಿ ಷೇರುದಾರರಿಗೆ ಬಹುಮಾನ ಘೋಷಣೆ ಮಾಡಿತ್ತು. ತನ್ನ ಷೇರು ಹೊಂದಿರುವ ಪ್ರತಿ ಒಂದು ಷೇರಿಗೆ ಒಂದು ಬೋನಸ್ ಷೇರು ನೀಡಿತ್ತು. 2010 ರಲ್ಲಿ ಅದು ಹೊಂದಿರುವ ಪ್ರತಿ ಐದು ಷೇರುಗಳಿಗೆ ಎರಡು ಬೋನಸ್ ಷೇರುಗಳನ್ನು ನೀಡಿತು (2:5), ಮತ್ತು 2018 ರಲ್ಲಿ, ಹೊಂದಿರುವ ಪ್ರತಿ ಹತ್ತು ಷೇರುಗಳಿಗೆ ಒಂದು ಬೋನಸ್ ಷೇರು ನೀಡಿತು (1:10). ಬೋನಸ್ ವಿತರಣೆಯ ದಾಖಲೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಜುಲೈ 24 ರಂದು ಕರೂರ್ ವೈಶ್ಯ ಬ್ಯಾಂಕ್ ಜೂನ್ ತ್ರೈಮಾಸಿಕದ ಫಲಿತಾಂಶಗಳನ್ನು ಪರಿಗಣಿಸಲಿದೆ. ಕರೂರ್ ವೈಶ್ಯ ಬ್ಯಾಂಕಿನ ಷೇರುಗಳು ಶುಕ್ರವಾರ ಶೇ. 0.8 ರಷ್ಟು ಕುಸಿತ ಕಂಡು ₹268.3 ಕ್ಕೆ ತಲುಪಿದೆ. ಷೇರುಗಳು 52 ವಾರಗಳ ಗರಿಷ್ಠ ₹277.5 ಕ್ಕೆ ತಲುಪಿದೆ. ಕಳೆದ ಒಂದು ತಿಂಗಳಲ್ಲಿ ಷೇರುಗಳು ಶೇ. 10 ರಷ್ಟು ಮತ್ತು ಕಳೆದ ಒಂದು ವರ್ಷದಲ್ಲಿ ಶೇ. 19 ರಷ್ಟು ಏರಿಕೆ ಕಂಡಿವೆ.