ಚೀನಾ ಕಂಪನಿಯೊಂದು ಬೋನಸ್ ಗೆ ಭಿನ್ನ ಪಾಲಿಸಿ ಜಾರಿಗೆ ತಂದಿದೆ. ಉದ್ಯೋಗಿಗಳು ಬರೀ ಕೆಲ್ಸ ಮಾಡೋದಲ್ಲ ಆರೋಗ್ಯದ ಕಡೆಯೂ ಗಮನ ನೀಡ್ಬೇಕು. ನೀವು ಫಿಟ್ ಆಗಿದ್ರೆ ಸಂಪಾದನೆ ಜಾಸ್ತಿ. 

ಕಂಪನಿ (Company)ಗಳು ಉದ್ಯೋಗಿಗಳಿಗೆ ಹೈಕ್, ಬೋನಸ್ (Bonus) ಅಂತ ಕೊಡ್ತಿರುತ್ವೆ. ಇದಕ್ಕೆ ನಾನಾ ಮಾನದಂಡಗಳನ್ನು ಕಂಪನಿಗಳು ಫಾಲೋ ಮಾಡುತ್ವೆ. ಕೆಲ್ಸ ಚೆನ್ನಾಗಿ ಮಾಡುವ, ಸರಿಯಾದ ಟೈಂಗೆ ಟಾರ್ಗೆಟ್ ರೀಚ್ ಮಾಡುವ, ಓವರ್ ಟೈಂ ಡ್ಯೂಟಿ ಮಾಡುವ, ಬಾಸ್ ಹೇಳಿದಂತೆ ಕೇಳುವ ಹೀಗೆ ನಾನಾ ಎಂಗಲ್ ಇದಕ್ಕಿದೆ. ಆದ್ರೆ ಚೀನಾ ಕಂಪನಿಯೊಂದು ಇದ್ಯಾವುದನ್ನೂ ಪರಿಗಣಿಸೋದಿಲ್ಲ. ಉದ್ಯೋಗಿಗೆ ಬೋನಸ್ ನೀಡಲು ವಿಭಿನ್ನ ನಿಯಮವನ್ನು ಕಂಪನಿ ಫಾಲೋ ಮಾಡ್ತಿದೆ. ಉದ್ಯೋಗಿಗಳ ದೈಹಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಬೋನಸ್ ಗೈಡ್ಲೈನ್ಸ್ ಜಾರಿಗೆ ತಂದಿದೆ. ಇಲ್ಲಿ ನಿಮ್ಮ ಕೆಲಸಕ್ಕಿಂತ ನಿಮ್ಮ ಫಿಟ್ನೆಸ್ ಮುಖ್ಯ. ಪ್ರತಿ ದಿನ ನೀವು ಎಷ್ಟು ಓಡ್ತೀರಿ ಎಂಬುದನ್ನು ಕಂಪನಿ ಲೆಕ್ಕ ಹಾಕುತ್ತೆ. ಹೌದು, ಬೋನಸ್ ಬೇಕು ಅಂದ್ರೆ ನೀವು ಕೆಲಸದ ಜೊತೆ ರನ್ನಿಂಗ್ ಮಾಡ್ಬೇಕು. ಕಂಪನಿ ನೀಡಿದ ಟಾರ್ಗೆಟ್ ನೀವೇನಾದ್ರೂ ಕಂಪ್ಲೀಟ್ ಮಾಡಿದ್ರೆ ನಿಮ್ಮ ಸ್ಯಾಲರಿಯ ಶೇಕಡಾ 130 ರಷ್ಟು ಬೋನಸ್ ನಿಮ್ಮ ಅಕೌಂಟ್ ಗೆ ಬರೋದು ನಿಶ್ಚಿತ.

ಗುವಾಂಗ್ಡಾಂಗ್( Guangdong) ಪ್ರಾಂತ್ಯದ ದಕ್ಷಿಣ ಕೈಗಾರಿಕಾ ಕೇಂದ್ರದಲ್ಲಿರುವ ಗುವಾಂಗ್ಡಾಂಗ್ ಡಾಂಗ್ಪೊ ಪೇಪರ್ ಕಂಪನಿ, ಈ ರೂಲ್ಸ್ ಫಾಲೋ ಮಾಡ್ತಿದೆ. ಕಂಪನಿ ಪ್ರತಿ ಉದ್ಯೋಗಿಯ ವಾರ್ಷಿಕ ಬೋನಸ್ ಅನ್ನು ಅವರು ಪ್ರತಿ ತಿಂಗಳು ಓಡುವ ಮೈಲುಗಳ ಸಂಖ್ಯೆಯನ್ನು ಆಧರಿಸಿ ನಿರ್ಧರಿಸುತ್ತೆ. ಪ್ರತಿಯೊಬ್ಬ ಉದ್ಯೋಗಿ ತಿಂಗಳಿಗೆ 62 ಮೈಲಿ ಓಡ್ಬೇಕು. ಯಾವ ಉದ್ಯೋಗಿ ಪ್ರತಿ ತಿಂಗಳು 62 ಮೈಲಿ ಓಡ್ತಾನೋ ಆತನಿಗೆ ವರ್ಷದ ಕೊನೆಯಲ್ಲಿ ಅವನ ತಿಂಗಳ ಸಂಬಳದ ಶೇಕಡಾ 130 ರಷ್ಟು ಬೋನಸ್ ಸಿಗುತ್ತೆ. ಅದೇ ಉದ್ಯೋಗಿ ತಿಂಗಳಿಗೆ ಕನಿಷ್ಠ 31 ಮೈಲಿ ಓಡಿದ್ರೆ, ಕಂಪನಿ ಅವನ ಪ್ರತಿ ತಿಂಗಳ ಸಂಬಳದ ಶೇಕಡಾ 100ರಷ್ಟು ಬೋನಸ್ ನೀಡುತ್ತದೆ. ಪ್ರತಿ ತಿಂಗಳು 25 ಮೈಲಿಗಿಂತ ಕಡಿಮೆ ಓಡುವ ಉದ್ಯೋಗಿಗಳು ತಮ್ಮ ಒಟ್ಟು ವಾರ್ಷಿಕ ಬೋನಸ್ನಲ್ಲಿ ಶೇಕಡಾ 60ರಷ್ಟು ಇಳಿಕೆ ಕಾಣುತ್ತಾರೆ. ತಿಂಗಳಿಗೆ ಕೇವಲ 12 ಮೈಲು ಓಡುವ ಉದ್ಯೋಗಿಗಳು ತಮ್ಮ ಬೋನಸ್ನ ಶೇಕಡಾ 30ರಷ್ಟನ್ನು ಮಾತ್ರ ಪಡೆಯುತ್ತಾರೆ. ವಯಸ್ಸಾದ, ದೀರ್ಘಕಾಲದಿಂದ ಅನಾರೋಗ್ಯ ಸಮಸ್ಯೆಗೆ ಒಳಗಾದ ಉದ್ಯೋಗಿಗಳಿಗೆ ಅವರ ಕೆಲಸವನ್ನು ಪರಿಗಣಿಸಿ ಕಂಪನಿ ಬೋನಸ್ ನೀಡುತ್ತದೆ.

ಕಂಪನಿ ಈ ಪಾಲಿಸಿ ತರಲು ಕಾರಣ ಏನು? : ಈ ಕಂಪನಿಯ ಅಧ್ಯಕ್ಷ ಲಿನ್ ಝಿಯಾಂಗ್. ಅವರು ಫಿಟ್ನೆಸ್ ಪ್ರೇಮಿ. ತಾನು ಮಾತ್ರವಲ್ಲ ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿ ಆರೋಗ್ಯವಾಗಿರಬೇಕೆಂದು ಅವರು ಬಯಸ್ತಾರೆ. ಮೌಂಟ್ ಎವರೆಸ್ಟ್ನ ಉತ್ತರ ಮತ್ತು ದಕ್ಷಿಣ ಇಳಿಜಾರುಗಳನ್ನು ಏರಿದ ಡೊಂಗ್ಗುವಾನ್ ನ ಮೊದಲ ವ್ಯಕ್ತಿ ಝಿಯಾಂಗ್. ಉದ್ಯೋಗಿಗಳು ಹೇಗೆ ಅವರ ಫಿಟ್ನೆಸ್ ಕಾಪಾಡಿಕೊಳ್ಬಹುದು ಎನ್ನುವ ಬಗ್ಗೆ ಮೂರು ವರ್ಷಗಳ ಕಾಲ ಆಲೋಚನೆ ಮಾಡಿದ ನಂತ್ರ ಅವರಿಗೆ ಈ ರನ್ನಿಂಗ್ ಪ್ಲಾನ್ ತಲೆಯಲ್ಲಿ ಬಂತು.

ಈ ಕಂಪನಿ 100 ಉದ್ಯೋಗಿಗಳನ್ನು ಒಳಗೊಂಡಿದೆ. ಕಂಪನಿ, ಉದ್ಯೋಗಿಗಳ ಓಟವನ್ನು ಟ್ರ್ಯಾಕ್ ಮಾಡುತ್ತದೆ. ಇದಕ್ಕೆ ಸಂಬಂಧಿಸಿದ ಅಪ್ಲಿಕೇಷನ್ ಇದ್ದು, ಅದನ್ನು ಲಾಗಿನ್ ಮಾಡ್ಬೇಕು. ಓಟದ ಜೊತೆ ಹಣವೂ ಸಿಗುತ್ತದೆ. ಇದು ನಮಗೆ ಖುಷಿ ವಿಷ್ಯ ಅಂತ ಉದ್ಯೋಗಿಗಳು ಹೇಳ್ತಿದ್ದಾರೆ. ಕಂಪನಿ ಈ ನಿಯಮದಿಂದ ಉತ್ತಮ ಕೆಲಸಗಾರನಿಗೆ ಹೆಚ್ಚಿನ ಸಂಭಾವನೆ ಜೊತೆ ಆರೋಗ್ಯವೂ ಸಿಗ್ತಿದೆ.