ಭಾರತದ ದಾನಿಗಳ ಪಟ್ಟಿಯಲ್ಲಿ ಶಿವ ನಡಾರ್ ನಂ.1; ಎರಡನೇ ಸ್ಥಾನಕ್ಕೆ ಜಾರಿದ ಅಜೀಂ ಪ್ರೇಮ್ ಜಿ
*ಭಾರತದ ದಾನಿಗಳ 2022ನೇ ಸಾಲಿನ ಪಟ್ಟಿ ಪ್ರಕಟ
*ವಾರ್ಷಿಕ 1,161ಕೋಟಿ ರೂ. ದಾನ ಮಾಡಿರುವ ನಡಾರ್
*7ನೇ ಸ್ಥಾನದಲ್ಲಿ ಶ್ರೀಮಂತ ಉದ್ಯಮಿ ಗೌತಮ್ ಅದಾನಿ
ಬೆಂಗಳೂರು (ಅ.21): ಐಟಿ ಕಂಪನಿ ಎಚ್ ಸಿಎಲ್ ಸಂಸ್ಥಾಪಕ ಶಿವ ನಡಾರ್ ಭಾರತದ ದಾನಿಗಳ 2022ನೇ ಸಾಲಿನ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ವಾರ್ಷಿಕ 1,161ಕೋಟಿ ರೂ. ದಾನ ಮಾಡುವ ಮೂಲಕ ನಡಾರ್, ವಿಪ್ರೋ ಲಿಮಿಟೆಡ್ ಮುಖ್ಯಸ್ಥ ಅಜೀಂ ಪ್ರೇಮ್ ಜಿ ಅವರನ್ನು ಹಿಂದಿಕ್ಕಿದ್ದಾರೆ. ಭಾರತದ ಸಿರಿವಂತರು ವಾರ್ಷಿಕವಾಗಿ ನೀಡುವ ದೇಣಿಗೆಗೆ ಸಂಬಂಧಿಸಿ 'ಎಡೆಲ್‌ಗೀವ್-ಹುರುನ್ ಇಂಡಿಯಾ' ಉದಾರ ದಾನಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. 77 ವರ್ಷದ ನಡಾರ್, ದಿನಕ್ಕೆ 3 ಕೋಟಿ ರೂ. ದಾನ ಮಾಡುವ ಮೂಲಕ 'ಭಾರತದ ಅತ್ಯಂತ ಉದಾರಿ ದಾನಿ' ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಸತತ ಕಳೆದ ಎರಡು ವರ್ಷಗಳಿಂದ ಅಜೀಂ ಪ್ರೇಮ್ ಜೀ ಮೊದಲ ಸ್ಥಾನದಲ್ಲಿದ್ದು, ವಾರ್ಷಿಕ 484 ಕೋಟಿ ರೂ. ದಾನ ಮಾಡುವ ಮೂಲಕ ಈ ವರ್ಷ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಗೌತಮ್ ಅದಾನಿ 2022ನೇ ಸಾಲಿನ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಅದಾನಿ 190ಕೋಟಿ ರೂ. ದಾನ ಮಾಡಿದ್ದಾರೆ. ಭಾರತದ ಒಟ್ಟು 15 ವ್ಯಕ್ತಿಗಳು 100 ಕೋಟಿ ರೂ.ಗೂ ಅಧಿಕ ಮೊತ್ತವನ್ನು ದಾನ ಮಾಡಿದ್ದಾರೆ. ಇನ್ನು 20 ದಾನಿಗಳು 50 ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ದಾನ ಮಾಡಿದ್ರೆ, 43ಕ್ಕೂ ಹೆಚ್ಚು ಮಂದಿ 20ಕೋಟಿ ರೂ. ದಾನ ಮಾಡಿದ್ದಾರೆ.
ಭಾರತದಲ್ಲಿ ಸಮಾಜಮುಖಿ ಕೆಲಸಗಳಿಗೆ ದಾನ ಮಾಡುತ್ತಿರುವ ದಾನಿಗಳ ಪಟ್ಟಿಯನ್ನು ಹುರುನ್ ಇಂಡಿಯಾ ಸಹಯೋಗದಲ್ಲಿ ಎಡೆಲ್ ಗೀವ್ ಫೌಂಡೇಷನ್ ಸಿದ್ಧಪಡಿಸಿದೆ. 'ಹುರುನ್ ಇಂಡಿಯಾ ತಂಡದ ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡಿರೋದು ನಮಗೆ ಹೆಮ್ಮೆಯ ಸಂಗತಿ. ಎಡೆಲ್ ಗೀವ್-ಹುರುನ್ ಇಂಡಿಯಾ ದಾನಿಗಳ ಪಟ್ಟಿ-2022 ಬಿಡುಗಡೆಗೊಳಿಸಲು ಸಂತಸವಾಗುತ್ತಿದೆ' ಎಂದು ಎಡೆಲ್ ಗೀವ್ ಸಿಇಒ ನಗ್ಮಾ ಮುಲ್ಲಾ ಹೇಳಿದ್ದಾರೆ.
ನಿಮ್ಮ ಬಳಿ ಡಿಜಿಟಲ್ ಗೋಲ್ಡ್ ಇದೆಯಾ? ಹಾಗಾದ್ರೆ ಲೀಸ್ ಗೆ ನೀಡಿ ಹಣ ಗಳಿಸಬಹುದು!
'ಭಾರತೀಯರ ಪರೋಪಕಾರಿ ಮನೋಭಾವವನ್ನು ವಿಶ್ವಕ್ಕೆ ತೋರಿಸುವ ಗುರಿಯನ್ನು ಈ ದಾನಿಗಳ ಪಟ್ಟಿ ಹೊಂದಿದೆ. ಕಳೆದ ಐದು ವರ್ಷಗಳಲ್ಲಿ 100 ಕೋಟಿ ರೂ.ಗೂ ಅಧಿಕ ಮೊತ್ತವನ್ನು ದಾನ ಮಾಡುತ್ತಿರೋರ ಸಂಖ್ಯೆ 2ರಿಂದ 15ಕ್ಕೆ ಏರಿಕೆಯಾಗಿದೆ. ಹಾಗೆಯೇ 50 ಕೋಟಿ ರೂ.ಗೂ ಅಧಿಕ ಮೊತ್ತದ ಹಣದ ನೆರವು ನೀಡುವವರ ಸಂಖ್ಯೆ 5ರಿಂದ 20ಕ್ಕೆ ಹೆಚ್ಚಳವಾಗಿದೆ' ಎಂದು ಹುರುನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನಾಸ್ ರೆಹಮಾನ್ ತಿಳಿಸಿದ್ದಾರೆ.
ಝೆರೋಧದ ನಿತಿನ್ ಕಾಮತ್ ಹಾಗೂ ನಿಖಿಲ್ ಕಾಮತ್ ಅವರು ತಮ್ಮ ದಾನವನ್ನು ಶೇ.300ರಷ್ಟು ಹೆಚ್ಚಿಸಿಕೊಂಡಿದ್ದು, 100 ಕೋಟಿ ರೂ. ತಲುಪಿದೆ. 213ಕೋಟಿ ರೂ. ಮೈಂಡ್ ಟ್ರೀಯ ಸಹ ಸಂಸ್ಥಾಪಕರಾದ ಸುಬ್ರತೋ ಬಾಗ್ಚಿ ಹಾಗೂ ಎನ್.ಎಸ್. ಪಾರ್ಥಸಾರಥಿ ಅವರು ತಲಾ 213 ಕೋಟಿ ರೂ. ದಾನ ಮಾಡಿದ್ದು, ಪಟ್ಟಿಯಲ್ಲಿ ಟಾಪ್ 10ರಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯೂಸ್ ಕಾಪರ್ ಮುಖ್ಯಸ್ಥ ಅಜಿತ್ ಐಸಾಕ್ 105 ಕೋಟಿ ರೂ. ದಾನ ಮಾಡುವ ಮೂಲಕ ಎಡೆಲ್‌ಗೀವ್-ಹುರುನ್ ಇಂಡಿಯಾ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ. ಇಂಡಿಗೋ ಏರ್ ಲೈನ್ಸ್ ಸಹಪ್ರವರ್ತಕ ರಾಕೇಶ್ ಗಂಗ್ವಾಲ್ ಐಐಟಿ ಕಾನ್ಪುರದ ವೈದ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಕೂಲ್‌ಗೆ 115 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಡಾಲರ್ ಎದುರು 83.08 ರೂಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ!
ಈ ಬಾರಿಯ ದಾನಿಗಳ ಪಟ್ಟಿಯಲ್ಲಿ ಆರು ಮಹಿಳೆಯರು ಕೂಡ ಸೇರಿದ್ದಾರೆ. 120 ಕೋಟಿ ರೂ. ದೇಣಿಗೆ ನೀಡಿರುವ 63 ವರ್ಷದ ರೋಹಿಣಿ ನಿಲೇಕಣಿ ದೇಶದ ಅತ್ಯಂತ ಉದಾರಿ ಮಹಿಳಾ ದಾನಿ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಕ್ರಮವಾಗಿ 21 ಕೋಟಿ ರೂ. ಹಾಗೂ 20ಕೋಟಿ ರೂ. ದಾನ ಮಾಡಿರುವ ಲೀನಾ ಗಾಂಧಿ ತಿವಾರಿ ಹಾಗೂ ಅನು ಅಗ ಇದ್ದಾರೆ.