ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿದ್ದೀರಾ? ಹಾಗಿದ್ರೆ ಈ 5 ಸಮಸ್ಯೆಗಳಾಗೋ ಸಾಧ್ಯತೆ ಅಧಿಕ
ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿದ್ರೆ ಪ್ರಯೋಜನಕ್ಕಿಂತ ಸಮಸ್ಯೆಯೇ ಹೆಚ್ಚು.ಒಂದೆಡೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ. ಇನ್ನೊಂದು ಕಡೆ ದಂಡದ ಭಯ. ಹಾಗಾದ್ರೆ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿದ್ರೆ ಏನೆಲ್ಲ ಸಮಸ್ಯೆಗಳು ಎದುರಾಗಬಹುದು? ಇಲ್ಲಿದೆ ಮಾಹಿತಿ.
Business Desk: ಇಂದು ಬಹುತೇಕ ಎಲ್ಲರ ಬಳಿ ಒಂದು ಬ್ಯಾಂಕ್ ಖಾತೆಯಂತೂ ಇದ್ದೇಇರುತ್ತದೆ. ತಿಂಗಳ ವೇತನ ಪಡೆಯುವ ಉದ್ಯೋಗಿಗಳಿಗಂತೂ ಬ್ಯಾಂಕ್ ಖಾತೆ ಅತ್ಯಗತ್ಯ. ಈಗಂತೂ ಹೂಡಿಕೆ, ಉಳಿತಾಯದ ಜೊತೆಗೆ ಸರ್ಕಾರದ ಕೆಲವು ಯೋಜನೆಗಳ ಪ್ರಯೋಜನ ಪಡೆಯಲು ಕೂಡ ಬ್ಯಾಂಕ್ ಖಾತೆ ಅಗತ್ಯ. ಇನ್ನು ಕೆಲವರು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಇದಕ್ಕೆ ಹಲವಾರು ಕಾರಣಗಳೂ ಇರುತ್ತವೆ. ಹೊಸ ಕಂಪನಿಗೆ ಸೇರ್ಪಡೆಗೊಂಡ ಬಳಿಕ ಇನ್ನೊಂದು ಬ್ಯಾಂಕ್ ಖಾತೆಯನ್ನು ಕೆಲವರು ತೆರೆಯುತ್ತಾರೆ. ಇದಕ್ಕೆ ಕಾರಣ ಕೆಲವು ಕಂಪನಿಗಳು ವೇತನ ವರ್ಗಾವಣೆ ಮಾಡಲು ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲೇ ಖಾತೆ ಹೊಂದಿರೋದು ಅಗತ್ಯ ಎಂಬ ಷರತ್ತು ವಿಧಿಸುತ್ತವೆ. ಇನ್ನೂ ಕೆಲವು ಕಂಪನಿಗಳ ವೇತನ ಖಾತೆಗಳು ನಿಗದಿತ ಬ್ಯಾಂಕ್ ನಲ್ಲೇ ತೆರೆಯಬೇಕು ಎಂಬ ನಿಯಮ ಇರುತ್ತದೆ. ಇನ್ನೂ ಕೆಲವರು ಜಾಸ್ತಿ ಮೊತ್ತದ ಹಣವನ್ನು ಒಂದು ಬ್ಯಾಂಕ್ ಖಾತೆಯಲ್ಲಿ ನಿರ್ವಹಿಸಿದರೆ, ಇನ್ನೊಂದು ಬ್ಯಾಂಕ್ ಖಾತೆಯಲ್ಲಿ ಖರ್ಚಿಗೆ ಅಗತ್ಯವಿರುವಷ್ಟು ಹಣವಿಟ್ಟು ಡಿಜಿಟಲ್ ಪಾವತಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸುತ್ತಾರೆ. ಹೀಗಾಗಿ ಕೆಲವರ ಬಳಿ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳಿರುತ್ತವೆ. ಆದರೆ, ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಹೊಂದಿದ್ರೆ, ಅದರ ನಿರ್ವಹಣೆ ಕಷ್ಟವಾಗುತ್ತದೆ. ಕೆಲವೊಮ್ಮೆ ಅದರಿಂದಾಗಿ ಹೆಚ್ಚುವರಿ ಹಣ ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಕೂಡ ಎದುರಾಗಬಹುದು. ಹಾಗಾದ್ರೆ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳಿದ್ರೆ ಏನೆಲ್ಲ ಸಮಸ್ಯೆಗಳಾಗುತ್ತವೆ? ಇಲ್ಲಿದೆ ಮಾಹಿತಿ.
1.ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡ್ಬೇಕು
ಎಲ್ಲ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡೋದು ಅಗತ್ಯ. ಹೀಗಾಗಿ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳಿದ್ದಾಗ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕು. ಈ ರೀತಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡೋದಕ್ಕೇ ನಿಮಗೆ ಒಂದಿಷ್ಟು ಹಣ ಬೇಕಾಗುತ್ತದೆ. ಇನ್ನು ಚೆಕ್ ಬುಕ್ ನಿಂದ ಹಿಡಿದು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ತನಕ ವಿವಿಧ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಹೀಗೆ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಹೊಂದಿದ್ರೆ ನಿರ್ವಹಣೆಗೇ ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ.
ಮನೆ ಇರೋರು ಎಲ್ಲರೂ ಹಿಡಿ ಬಳಸ್ತಾರೆ, ವ್ಯಾಪಾರ ಆಗೋದು ಪಕ್ಕಾ
2.ದಂಡ ಬೀಳುವ ಸಾಧ್ಯತೆ
ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ರೆ ದಂಡ ವಿಧಿಸಲಾಗುತ್ತದೆ. ಈ ದಂಡದ ಮೊತ್ತ ಬ್ಯಾಂಕ್ ನಿಂದ ಬ್ಯಾಂಕಿಗೆ ವ್ಯತ್ಯಾಸವಾದ್ರೂ 500ರೂ. ನಿಂದ 10,000 ರೂ. ತನಕ ಇರುತ್ತದೆ. ಅಲ್ಲದೆ, ಈ ದಂಡ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಕೂಡ ಪರಿಣಾಮ ಬೀರುವ ಕಾರಣ ಈ ಬಗ್ಗೆ ಎಚ್ಚರ ವಹಿಸೋದು ಅಗತ್ಯ. ಹಾಗೆಯೇ ನೀವು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಹೊಂದಿದ್ರೆ ಹಾಗೂ ಬಳಸುತ್ತಿದ್ರೆ ಬಿಲ್ ಪಾವತಿ ದಿನಾಂಕ ನೆನಪಿಟ್ಟುಕೊಳ್ಳುವುದು ಕೂಡ ಕಷ್ಟವಾಗಬಹುದು. ಇದರಿಂದ ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಸಾಧ್ಯವಾಗದೆ ಹೆಚ್ಚಿನ ಹಣ ಕಳೆದುಕೊಳ್ಳಬೇಕಾಗುತ್ತದೆ. ಇನ್ನು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಸೇವಾ ಶುಲ್ಕಗಳನ್ನು ಕೂಡ ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದೆ ತೊಂದರೆಯಾಗಬಹುದು.
3.ವಂಚನೆ ಸಾಧ್ಯತೆ
ಒಂದಕ್ಕಿಂತ ಹೆಚ್ಚಿನ ಉಳಿತಾಯ ಖಾತೆಗಳಿದ್ದಾಗ ನಿಷ್ಕ್ರಿಯ ಖಾತೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಉದಾಹರಣೆಗೆ ಕೆಲವರು ಉದ್ಯೋಗ ಬದಲಾಯಿಸುವಾಗ ವೇತನ ಪಡೆಯುವ ಬ್ಯಾಂಕ್ ಖಾತೆಯನ್ನು ಕೂಡ ಬದಲಾಯಿಸುತ್ತಾರೆ. ಇಂಥ ಸಂದರ್ಭಗಳಲ್ಲಿ ಹಳೆಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅಷ್ಟೇ ಇಟ್ಟು, ಹೊಸ ಖಾತೆಯನ್ನು ಮಾತ್ರ ಬಳಸುತ್ತಾರೆ. ಇದರಿಂದ ಹಳೆಯ ಬ್ಯಾಂಕ್ ಖಾತೆ ನಿಷ್ಕ್ರಿಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಷ್ಕ್ರಿಯ ಖಾತೆಗಳಿಂದ ವಂಚನೆ ಸಾಧ್ಯತೆ ಹೆಚ್ಚಿರುತ್ತದೆ.
4.ಹೂಡಿಕೆ ಮೇಲೆ ಪರಿಣಾಮ
ಈಗಾಗಲೇ ಹೇಳಿದಂತೆ ನೀವು ಎಷ್ಟೇ ಬ್ಯಾಂಕ್ ಖಾತೆಗಳನ್ನು ಹೊಂದಿದ್ರೂ ಎಲ್ಲದರಲ್ಲೂ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕು. ಕೆಲವು ಖಾಸಗಿ ಬ್ಯಾಂಕ್ ಗಳಲ್ಲಿ ಕನಿಷ್ಠ 20,000ರೂ. ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕಿರುತ್ತದೆ. ಹೀಗಿರುವಾಗ ನಿಮ್ಮ ದೊಡ್ಡ ಮೊತ್ತದ ಹಣ ಬ್ಯಾಂಕ್ ಖಾತೆಗಳ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಗೆ ಖರ್ಚಾಗುತ್ತದೆ. ಇದು ನಿಮ್ಮ ಹೂಡಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಆರ್ಥಿಕ ಹಿಂಜರಿತ: ಚೀನಾಕ್ಕೆ ದೊಡ್ಡ ಗಂಡಾಂತರ ಐಎಂಎಫ್
5.ತೆರಿಗೆ ಭಾರ
ನಿಮ್ಮ ಬ್ಯಾಂಕ್ ಉಳಿತಾಯ ಖಾತೆಯ 10,000 ರೂ. ಬಡ್ಡಿ ಗಳಿಕೆ ತನಕ ತೆರಿಗೆ ವಿನಾಯ್ತಿ ಇರುತ್ತದೆ. ಹೀಗಾಗಿ ಟಿಡಿಎಸ್ ಕಡಿತವಾಗೋದಿಲ್ಲ. ಆದರೆ, ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳಿದ್ದಾಗ ಒಂದು ಖಾತೆಯ ಬಡ್ಡಿ ಗಳಿಕೆ 10,000 ರೂ.ಕ್ಕಿಂತ ಹೆಚ್ಚಿಲ್ಲದಿದ್ದರೆ ಬ್ಯಾಂಕ್ ಟಿಡಿಎಸ್ ಕಡಿತ ಮಾಡೋದಿಲ್ಲ. ಆದರೆ ನಿಮ್ಮ ಎಲ್ಲ ಬ್ಯಾಂಕ್ ಖಾತೆಗಳ ಬಡ್ಡಿದರವನ್ನು ಒಟ್ಟಾಗಿ ಸೇರಿಸಿದಾಗ ಅದು 10,000ರೂ. ಮೀರಿ ಟಿಡಿಎಸ್ ಕಡಿತಗೊಳಿಸಬೇಕಾಗಬಹುದು. ಇಂಥ ಸಂದರ್ಭಗಳಲ್ಲಿ ಐಟಿಆರ್ ಪೈಲಿಂಗ್ ಮಾಡುವಾಗ ಆದಾಯ ತೆರಿಗೆ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಇಲ್ಲವಾದ್ರೆ ನಿಮ್ಮ ಜೇಬಿನಿಂದ ಟಿಡಿಎಸ್ ಕಡಿತವಾಗೋದು ಪಕ್ಕಾ.