ನಿಮ್ಮ ಎಲ್ ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ಮತ್ತೆ ಸಕ್ರಿಯಗೊಳಿಸಲು ಹೀಗೆ ಮಾಡಿ
ಯಾವುದೋ ಕಾರಣದಿಂದ ಎಲ್ಐಸಿ ಪಾಲಿಸಿ ಪ್ರೀಮಿಯಂಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗಿರೋದಿಲ್ಲ. ಹೀಗಾದಾಗ ಆ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಆದರೆ, ಲ್ಯಾಪ್ಸ್ ಆದ ಪಾಲಿಸಿಯನ್ನು ಪುನಶ್ಚೇತನಗೊಳಿಸಲು ಸಾಧ್ಯವಿದೆ. ಲ್ಯಾಪ್ಸ್ ಆದ ಎಲ್ಐಸಿ ಪಾಲಿಸಿಯನ್ನು ಮತ್ತೆ ಆರಂಭಿಸೋದು ಹೇಗೆ? ಇಲ್ಲಿದೆ ಮಾಹಿತಿ.
Business Desk: ಭಾರತದಲ್ಲಿ ವಿಮೆ ಎಂದ ತಕ್ಷಣ ಮೊದಲು ನೆನಪಾಗೋದು ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ). ಬಹುತೇಕ ಎಲ್ಲ ಮನೆಗಳಲ್ಲೂ ಒಬ್ಬರಾದರೂ ಎಲ್ ಐಸಿ ವಿಮೆ ಹೊಂದಿರೋರು ಇದ್ದೇ ಇರುತ್ತಾರೆ. ಎಲ್ಐಸಿಗೆ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾದ ಕಾರಣ ಕೆಲವರು ಹೂಡಿಕೆ, ನಿವೃತ್ತಿ ಬಳಿಕದ ಪಿಂಚಣಿಗೆ ಎಲ್ಐಸಿ ಯೋಜನೆಗಳನ್ನು ಆಯ್ಕೆ ಮಾಡುತ್ತಾರೆ. ಇನ್ನು ಎಲ್ಐಸಿ ಎಲ್ಲ ವಯೋಮಾನದವರಿಗೂ ಅನ್ವಯಿಸುವ ಪಾಲಿಸಿಗಳನ್ನು ಹೊಂದಿರುವ ಕಾರಣ ಇವುಗಳಲ್ಲಿ ಬಹುತೇಕರು ಹೂಡಿಕೆ ಮಾಡುತ್ತಾರೆ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಎಲ್ಐಸಿ ಪಾಲಿಸಿ ಪ್ರೀಮಿಯಂಗಳನ್ನು ಪಾವತಿಸಲು ಮರೆತೋ ಅಥವಾ ಇನ್ಯಾವುದೋ ಕಾರಣಗಳಿಂದ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಆದರೆ, ಕೆಲವರು ಎಲ್ ಐಸಿ ಪಾಲಿಸಿ ಲ್ಯಾಪ್ಸ್ ಆದ ಬಳಿಕ ಅದನ್ನು ಸರಪಡಿಸುವ ಗೋಜಿಗೆ ಹೋಗೋದಿಲ್ಲ. ಇನ್ನೂ ಕೆಲವರಿಗೆ ಪಾಲಿಸಿಯನ್ನು ಮತ್ತೆ ಪುನಶ್ಚೇತನಗೊಳಿಸೋದು ಹೇಗೆ ಎಂಬುದು ತಿಳಿದಿರೋದಿಲ್ಲ. ಎಲ್ ಐಸಿ ಪಾಲಿಸಿಯನ್ನು ಪುನಶ್ಚೇತನಗೊಳಿಸುವ ಪ್ರಕ್ರಿಯೆ ಪಾಲಿಸಿಯಿಂದ ಪಾಲಿಸಿಗೆ ವ್ಯತ್ಯಾಸವಾಗುತ್ತದೆ. ಹಾಗಾದ್ರೆ ಲ್ಯಾಪ್ಸ್ ಆದ ಎಲ್ಐಸಿ ಪಾಲಿಸಿಗಳನ್ನು ಪುನಶ್ಚೇತನಗೊಳಿಸೋದು ಹೇಗೆ? ಅದಕ್ಕಿರುವ ಷರತ್ತುಗಳೇನು? ಇಲ್ಲಿದೆ ಮಾಹಿತಿ.
ಯಾವಾಗ ಎಲ್ಐಸಿ ಪಾಲಿಸಿ ಲ್ಯಾಪ್ಸ್ ಆಗುತ್ತೆ?
ನೀವು ಸತತವಾಗಿ ಮೂರು ಪ್ರೀಮಿಯಂಗಳನ್ನು ಪಾವತಿಸದಿದ್ದ ಸಂದರ್ಭದಲ್ಲಿ ನಿಮ್ಮ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಆದರೆ, ಈ ನಿಯಮದಲ್ಲೂ ಕೆಲವೊಂದು ಸಡಿಲಿಕೆಗಳನ್ನು ನೀಡಲಾಗಿದೆ. ಉದಾಹರಣೆಗೆ ನೀವು ಅನಾರೋಗ್ಯ ಅಥವಾ ಅಂಗವೈಕಲ್ಯದ ಕಾರಣದಿಂದ ಪ್ರೀಮಿಯಂ ಪಾವತಿಸಲು ಸಾಧ್ಯವಾಗದ ಸಂದರ್ಭದಲ್ಲಿ ನಿಮ್ಮ ಪಾಲಿಸಿ ಲ್ಯಾಪ್ಸ್ ಆಗೋದಿಲ್ಲ. ಆದರೆ, ನಿಮ್ಮ ಅನಾರೋಗ್ಯದ ಬಗ್ಗೆ ಎಲ್ಐಸಿಗೆ ನೀವು ವೈದ್ಯರ ಪ್ರಮಾಣ ಪತ್ರ ಅಥವಾ ಇನ್ಯಾವುದಾದರೂ ಸಾಕ್ಷಿ ನೀಡೋದು ಅಗತ್ಯ.
ಎಲ್ಐಸಿ ಏಜೆಂಟ್,ಉದ್ಯೋಗಿಗಳಿಗೆ ಗಣೇಶ ಚತುರ್ಥಿಗೆ ಭರ್ಜರಿ ಉಡುಗೊರೆ; ಗ್ರಾಚ್ಯುಟಿ ಮಿತಿ, ಪಿಂಚಣಿ ಹೆಚ್ಚಳ
ಲ್ಯಾಪ್ಸ್ ಆದ ಪಾಲಿಸಿಯನ್ನು ಏಕೆ ಪುನಶ್ಚೇತನಗೊಳಿಸಬೇಕು?
ನಿಮ್ಮ ಎಲ್ಐಸಿ ಪಾಲಿಸಿ ಲ್ಯಾಪ್ಸ್ ಆದಾಗ ಮೃತಪಟ್ಟ ಸಂದರ್ಭದಲ್ಲಿ ಹಾಗೂ ಮೆಚ್ಯುರಿಟಿ ಆದಾಗ ಸಿಗುವ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀರಿ. ಹೀಗಾಗಿ ಈ ಎಲ್ಲ ಪ್ರಯೋಜನಗಳನ್ನು ಪಡೆಯಲು ಪಾಲಿಸಿಯನ್ನು ಪುನಶ್ಚೇತನಗೊಳಿಸೋದು ಅಗತ್ಯ. ಇನ್ನು ಪ್ರೀಮಿಯಂಗಳನ್ನು ಪಾವತಿಸಲು ಎಲ್ಐಸಿ ನಿಮಗೆ 30 ದಿನಗಳ ಹೆಚ್ಚುವರಿ ಅವಧಿಯನ್ನು (grace period) ಕೂಡ ನೀಡುತ್ತದೆ. ಒಂದು ವೇಳೆ ನೀವು ಈ ಅವಧಿಯೊಳಗೆ ಪಾವತಿಸದಿದ್ದರೆ ನಿಮ್ಮ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಇನ್ನು ಲ್ಯಾಪ್ಸ್ ಆದ ಪಾಲಿಸಿಗಳನ್ನು ನವೀಕರಿಸಲು ನೀವು ಮೊದಲ ಬಾರಿಗೆ ಪ್ರೀಮಿಯಂ ಮಿಸ್ ಮಾಡಿದ ದಿನಾಂಕದಿಂದ 2 ವರ್ಷಗಳ ಕಾಲ ಅವಕಾಶವಿದೆ.
ಲ್ಯಾಪ್ಸ್ ಆದ ಪಾಲಿಸಿಯನ್ನು ನವೀಕರಿಸೋದು ಹೇಗೆ?
ಎಲ್ಐಸಿಯನ್ನು ಸಂಪರ್ಕಿಸಿ: ಕಸ್ಟಮರ್ ಕೇರ್ ಸಂಖ್ಯೆ, ಇ-ಮೇಲ್ ಅಥವಾ ನಿಮ್ಮ ಸಮೀಪದ ಎಲ್ಐಸಿ ಶಾಖೆಗೆ ಭೇಟಿ ನೀಡುವ ಮೂಲಕ ನೀವು ಎಲ್ಐಸಿಯನ್ನು ಸಂಪರ್ಕಿಸಬಹುದು.
ಪುನಶ್ಚೇತನ ಅರ್ಜಿ ಕೋರಿ: ಲ್ಯಾಪ್ಸ್ ಆದ ಪಾಲಿಸಿಯನ್ನು ಮತ್ತೆ ಸಕ್ರಿಯಗೊಳಿಸಲು ಪುನಶ್ಚೇತನ ಅರ್ಜಿ ನಮೂನೆಯನ್ನು ಭರ್ತಿಗೊಳಿಸಿ ಎಲ್ಐಸಿಗೆ ಸಲ್ಲಿಕೆ ಮಾಡೋದು ಅಗತ್ಯ.
ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ: ದೀರ್ಘ ಸಮಯದಿಂದ ನಿಮ್ಮ ಎಲ್ಐಸಿ ಪಾಲಿಸಿ ಲ್ಯಾಪ್ಸ್ ಆಗಿದ್ದರೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಕೆ ಮಾಡೋದು ಅಗತ್ಯ. ಅಗತ್ಯವಿರುವ ಎಲ್ಲ ದಾಖಲೆಗಳು ಹಾಗೂ ಪಾವತಿಗಳು ಬಂದ ಬಳಿಕ ಎಲ್ ಐಸಿ ನಿಮ್ಮ ಮನವಿಯನ್ನು ಪರಿಶೀಲಿಸುತ್ತದೆ. ಒಂದು ವೇಳೆ ನಿಮ್ಮ ಮನವಿಯನ್ನು ಅನುಮೋದಿಸಿದರೆ, ಎಲ್ಐಸಿ ನಿಮ್ಮ ಪಾಲಿಸಿಯನ್ನು ಪುನಶ್ಚೇತನಗೊಳಿಸಿ, ಹೊಸ ಪಾಲಿಸಿ ದಾಖಲೆಯನ್ನು ನೀಡುತ್ತದೆ.
ಎಲ್‌ಐಸಿ ನೂತನ ಜೀವನ್ ಕಿರಣ್ ಪಾಲಿಸಿ ಬಿಡುಗಡೆ; ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ
ಎಲ್ಐಸಿ ವಾಟ್ಸ್ ಆ್ಯಪ್ ಸೇವೆ
ಪಾಲಿಸಿದಾರರು ವಾಟ್ಸ್ಆ್ಯಪ್ ನಲ್ಲಿ 'ಹಾಯ್' ಎಂದು 8976862090 ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡುವ ಮೂಲಕ ಎಲ್ಐಸಿಯ ಕೆಲವು ಸೇವೆಗಳನ್ನು ಪಡೆಯಬಹುದು. ಎಲ್ಐಸಿ ಪೋರ್ಟಲ್ ನಲ್ಲಿ ತಮ್ಮ ಪಾಲಿಸಿಗಳನ್ನು ನೋಂದಣಿ ಮಾಡಿಸಿರೋರು ವಾಟ್ಸ್ಆ್ಯಪ್ ನಲ್ಲಿ ನಿಗದಿತ ಸೇವೆಗಳನ್ನು ಮನೆಯಲ್ಲೇ ಕುಳಿತು ಪಡೆಯಬಹುದು. ಪ್ರೀಮಿಯಂ ಬಾಕಿ, ಬೋನಸ್ ಮಾಹಿತಿ, ಪಾಲಿಸಿ ವಿವರ, ಸಾಲದ ಮರುಪಾವತಿ, ಸಾಲದ ಬಡ್ಡಿ ಸೇರಿದಂತೆ ಅನೆಕ ಮಾಹಿತಿಗಳನ್ನು ಪಾಲಿಸಿದಾರ ವಾಟ್ಸ್ಆ್ಯಪ್ ಮೂಲಕ ಪಡೆದುಕೊಳ್ಳಬಹುದು.