ಎಲ್ಐಸಿ ಏಜೆಂಟ್,ಉದ್ಯೋಗಿಗಳಿಗೆ ಗಣೇಶ ಚತುರ್ಥಿಗೆ ಭರ್ಜರಿ ಉಡುಗೊರೆ; ಗ್ರಾಚ್ಯುಟಿ ಮಿತಿ, ಪಿಂಚಣಿ ಹೆಚ್ಚಳ
ಭಾರತೀಯ ಜೀವ ವಿಮಾ ನಿಗಮದ (ಎಲ್ ಐಸಿ) ಏಜೆಂಟರು ಹಾಗೂ ಉದ್ಯೋಗಿಗಳ ಗ್ರಾಚ್ಯುಟಿ ಮಿತಿ, ಕುಟುಂಬ ಪಿಂಚಣಿ, ವಿಮೆ ಕವರೇಜ್ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದ ಕೆಲವು ಬದಲಾವಣೆಗಳಿಗೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಏಜೆಂಟ್ ಗಳ ಗ್ರಾಚ್ಯುಟಿ ಮಿತಿಯನ್ನು 3ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.
ನವದೆಹಲಿ (ಸೆ.18): ಭಾರತೀಯ ಜೀವ ವಿಮಾ ನಿಗಮದ (ಎಲ್ ಐಸಿ) ಏಜೆಂಟರು ಹಾಗೂ ಉದ್ಯೋಗಿಗಳಿಗೆ ಶುಭಸುದ್ದಿ.ಎಲ್ ಐಸಿ ಏಜೆಂಟರು ಹಾಗೂ ಉದ್ಯೋಗಿಗಳಿಗೆ ಪ್ರಯೋಜನವಾಗುವ ಸರಣಿ ಕಲ್ಯಾಣ ಕಾರ್ಯಕ್ರಮಗಳನ್ನು ಹಣಕಾಸು ಸಚಿವಾಲಯ ಸೋಮವಾರ ಘೋಷಿಸಿದೆ. ಸೋಮವಾರ ಎಕ್ಸ್ (ಈ ಹಿಂದಿನ ಟ್ವಿಟ್ಟರ್) ಪೋಸ್ಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿರುವ ಹಣಕಾಸು ಸಚಿವಾಲಯ, ಎಲ್ಐಸಿ ಏಜೆಂಟ್ ಹಾಗೂ ಉದ್ಯೋಗಿಗಳ ಗ್ರಾಚ್ಯುಟಿ ಮಿತಿ, ಕುಟುಂಬ ಪಿಂಚಣಿ, ವಿಮೆ ಕವರೇಜ್ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದ ಕೆಲವು ಬದಲಾವಣೆಗಳಿಗೆ ಅನುಮೋದನೆ ನೀಡಿರೋದಾಗಿ ತಿಳಿಸಿದೆ. ಈ ಸುಧಾರಣೆಗಳು ಎಲ್ ಐಸಿ (ಏಜೆಂಟ್ಸ್ ) ನಿಯಮಗಳ ತಿದ್ದುಪಡಿ 2017, ಗ್ರಾಚ್ಯುಟಿ ಮಿತಿ ಹೆಚ್ಚಳ ಹಾಗೂ ಕುಟುಂಬ ಪಿಂಚಣಿ ಏಕನಮೂನೆ ದರಕ್ಕೆ ಸಂಬಂಧಿಸಿದ್ದಾಗಿವೆ ಎಂದು ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ಬದಲಾವಣೆಗಳಿಂದ ವಿಮಾ ಕಂಪನಿ ಏಜೆಂಟ್ ಗಳ ಗ್ರಾಚ್ಯುಟಿ ಮಿತಿಯನ್ನು 3ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಎಲ್ಐಸಿ ಏಜೆಂಟ್ ಗಳ ಪ್ರಯೋಜನಗಳು ಹಾಗೂ ಕೆಲಸದ ವಿಧಾನದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಈ ಬದಲಾವಣೆಗಳನ್ನು ತರಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಎಲ್ಐಸಿ ಏಜೆಂಟ್ ಗಳಿಗೆ ಹಣಕಾಸು ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಹಣಕಾಸು ಸಚಿವಾಲಯ ಅನುಮೋದನೆ ನೀಡಿರುವ ಈ ಬದಲಾವಣೆ ನೆರವು ನೀಡಲಿದೆ. ಕಮೀಷನ್ ನವೀಕರಣಕ್ಕೆ ಮರುನೇಮಕಗೊಂಡಿರುವ ಏಜೆಂಟ್ ಗಳು ಅರ್ಹರಾಗಿದ್ದಾರೆ ಎಂದು ಕೂಡ ಸಚಿವಾಲಯ ಮಾಹಿತಿ ನೀಡಿದೆ. ಪ್ರಸ್ತುತ ಎಲ್ ಐಸಿ ಏಜೆಂಟ್ ಗಳು ಹಳೆಯ ಏಜೆನ್ಸಿ ಅಡಿಯಲ್ಲಿ ಯಾವುದೇ ವ್ಯವಹಾರ ಪೂರ್ಣಗೊಳಿಸಿದರೂ ಅದಕ್ಕೆ ಕಮೀಷನ್ ಗಳನ್ನು ನವೀಕರಿಸಲು ಅನುಮತಿ ನೀಡುತ್ತಿಲ್ಲ.
ಇನ್ನು ವಿಮಾ ಏಜೆಂಟ್ ಗಳಿಗೆ ಟರ್ಮ್ ಇನ್ಯುರೆನ್ಸ್ ಕವರೇಜ್ ಗೆ ಸಂಬಂಧಿಸಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಎಲ್ ಐಸಿ ಏಜೆಂಟ್ ಗಳಿಗೆ ಇನ್ಯುರೆನ್ಸ್ ಕವರ್ ಅನ್ನು ಈಗಿನ 3,000ರೂ.-10,000ರೂ.ನಿಂದ 25,000ರೂ.-1,50,000ರೂ.ಗೆ ಏರಿಕೆ ಮಾಡಲಾಗಿದೆ. ಮೃತರಾದ ಎಲ್ಐಸಿ ಏಜೆಂಟ್ ಗಳ ಕುಟುಂಬಕ್ಕೆ ಹೆಚ್ಚಿನ ಕವರೇಜ್ ಹಾಗೂ ಪ್ರಯೋಜನಗಳನ್ನು ನೀಡುವ ಸಲುವಾಗಿ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ಎಲ್ಐಸಿ ಉದ್ಯೋಗಿಗಳ ಕುಟುಂಬ ಕಲ್ಯಾಣಕ್ಕಾಗಿ ಕುಟುಂಬ ಪಿಂಚಣಿಯನ್ನು ಏಕರೂಪಗೊಳಿಸಲಾಗಿದ್ದು, ಶೇ.30ಕ್ಕೆ ನಿಗದಿಪಡಿಸಲಾಗಿದೆ. ಇನ್ನು ಈ ಕಲ್ಯಾಣ ಕ್ರಮಗಳನ್ನು ಪರಿಚಯಿಸಿದ್ದರಿಂದ 13ಲಕ್ಷಕ್ಕೂ ಅಧಿಕ ಏಜೆಂಟ್ ಗಳು ಹಾಗೂ 1ಲಕ್ಷಕ್ಕೂ ಅಧಿಕ ಉದ್ಯೋಗಿಗಳು, ಎಲ್ಐಸಿ ಜೊತೆಗೆ ಸಂಬಂಧ ಹೊಂದಿರೋರಿಗೆ ಪ್ರಯೋಜನವಾಗಿದೆ. ಇವರೆಲ್ಲರೂ ಭಾರತದ ಅತೀದೊಡ್ಡ ವಿಮಾ ಕಂಪನಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಹಾಗೂ ದೇಶದಲ್ಲಿ ವಿಮೆ ಹೆಚ್ಚು ಜನರಿಗೆ ತಲುಪಲು ನೆರವಾಗಿದ್ದಾರೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಎಲ್‌ಐಸಿ ನೂತನ ಜೀವನ್ ಕಿರಣ್ ಪಾಲಿಸಿ ಬಿಡುಗಡೆ; ಅರ್ಜಿ ಸಲ್ಲಿಸೋದು ಹೇಗೆ?
ಐಟಿ ಷೇರುಗಳಲ್ಲಿ 8 ಸಾವಿರ ಕೋಟಿ ಹೂಡಿಕೆ
ಕಳೆದ ತ್ರೈಮಾಸಿಕದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಸಂಬಂಧಿಸಿ ಎಲ್ಐಸಿ ದಿಟ್ಟ ನಿರ್ಧಾರ ಕೈಗೊಂಡಿತ್ತು. ಬಹುತೇಕರು ಹೂಡಿಕೆ ಮಾಡಲು ಹೆದರುವ ವಲಯದಲ್ಲೇ ಎಲ್ಐಸಿ ದೊಡ್ಡ ಮೊತ್ತದಲ್ಲಿ ಹೂಡಿಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಕಳೆದ ಜೂನ್ ತ್ರೈಮಾಸಿಕದಲ್ಲಿ ಎಲ್ಐಸಿ ಐಟಿ ಷೇರುಗಳಲ್ಲಿ 8,000 ಕೋಟಿ ರೂ. ಹೂಡಿಕೆ ಮಾಡಿತ್ತು. ಈ ವಲಯದಲ್ಲಿ ದೊಡ್ಡ ಪ್ರಮಾನದ ಹೂಡಿಕೆ ಅಪಾಯದ ಬಗ್ಗೆ ತಜ್ಞರು ಸಾಕಷ್ಟು ಎಚ್ಚರಿಕೆ ನೀಡಿದ್ದರೂ ದೇಶದ ಅತೀದೊಡ್ಡ ಜೀವ ವಿಮಾ ಸಂಸ್ಥೆ ಈ ವಲಯದಲ್ಲಿ ಹೂಡಿಕೆ ಮಾಡಲು ದೊಡ್ಡ ಮಟ್ಟದಲ್ಲಿ ಧೈರ್ಯ ತೋರಿತ್ತು. ಭಾರತದ ಅತೀದೊಡ್ಡ ಐಟಿ ಕಂಪನಿಗಳಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಿತ್ತು. ಎಲ್ಐಸಿ ಇನ್ಫೋಸಿಸ್ ಸಂಸ್ಥೆಯ 3,636 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದೆ. ಹಾಗೆಯೇ ಟಾಟಾ ಕನ್ಸಲ್ಟೆನ್ಸಿಯ (ಟಿಸಿಎಸ್) 1,973 ಕೋಟಿ ರೂ. ಮೌಲ್ಯದ ಷೇರುಗಳು, ಟೆಕ್ ಮಹೀಂದ್ರಾದ 1,468 ಕೋಟಿ ರೂ. ಹಾಗೂ ಎಚ್ ಸಿಎಲ್ ಟೆಕ್ನಾಲಜೀಸ್ ಕಂಪನಿಯ 979 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದೆ.