Farmer business idea : ರೈತರ ಆಲೋಚನೆ ಬದಲಾಗ್ತಿದೆ. ಹೊಸ ಟ್ರೆಂಡ್ ಗೆ ಹಳಬರು ಅಡ್ಜಸ್ಟ್ ಆಗ್ತಿದ್ದಾರೆ. ಸೂರ್ಯಕಾಂತ ತೋಟದ ರೈತನೊಬ್ಬನ ಐಡಿಯಾ, ನೆಟ್ಟಿಗರನ್ನು ಸೆಳೆದಿದೆ.
ಕಾಲಕ್ಕೆ ತಕ್ಕಂತೆ ನಾವು ಬದಲಾಗ್ಬೇಕು. ಜೆನ್ ಜೀ (Gen Z)ಗಳು ಇಡೀ ದಿನ ಸೋಶಿಯಲ್ ಮೀಡಿಯಾದಲ್ಲಿರ್ತಾರೆ, ಫೋಟೋ, ವಿಡಿಯೋ ಮಾಡ್ತಾ ಟೈಂ ಹಾಳು ಮಾಡ್ತಾರೆ ಅಂತೆಲ್ಲ ಅವರನ್ನು ಬೈಯ್ಯೋ ಬದಲು ನಮ್ಮ ಆಲೋಚನೆಯನ್ನೇ ಬದಲಿಸಿಕೊಳ್ಳೋದು ಬೆಸ್ಟ್. ಕಾಲಕ್ಕೆ ತಕ್ಕಂತೆ ನಾವು ಹೊಸತನ್ನು ಕಲಿತಾ ಹೋದ್ರೆ ಲಾಭ ಹೆಚ್ಚು. ಕಂಪ್ಯೂಟರ್, ಎಐ, ಮೊಬೈಲ್ ಹೀಗೆ ಎಲ್ಲವನ್ನು ದೂರ್ತಾ, ನಮ್ಮ ಕಾಲ ಹಾಗಿತ್ತು, ಹೀಗಿತ್ತು ಎನ್ನುವ ಬದಲು ಈ ಕಾಲದಲ್ಲಿ ಜೆನ್ ಜೀ ಮನಸ್ಥಿತಿ ಅರಿತು ಹೇಗೆ ದುಡ್ಡು ಮಾಡೋದು ಅಂತ ಆಲೋಚನೆ ಮಾಡಿದ್ರೆ ಸಣ್ಣ ಪ್ರಮಾಣದಲ್ಲಿಯಾದ್ರೂ ಲಾಭ ಮಾಡ್ಬಹುದು.
ಈಗಿನ ಮಕ್ಕಳು ವೀಕೆಂಡ್ ಬಂದ್ರೆ ಊರು ಸುತ್ತೋಕೆ ಹೋಗ್ತಾರೆ. ಅವ್ರ ಗುರಿ ಬರೀ ಗಮ್ಯಸ್ಥಾನ ಆಗಿರೋದೇ ಇಲ್ಲ. ದಾರಿ ಮಧ್ಯೆ ಸಿಗುವ ಸುಂದರ ಪರಿಸರದಲ್ಲಿ ಫೋಟೋ ಕ್ಲಿಕ್ಕಿಸೋಕೆ ಕಾರ್, ಬೈಕ್ ನಿಂತೇ ನಿಲ್ಲುತ್ತೆ. ಸುಂದರ ತೋಟಗಳಿಗೆ ನುಗ್ಗುವ ಪ್ರವಾಸಿಗರು, ಅಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ತಾರೆ. ಅವ್ರಿಗೆ ಫೋಟೋ, ವಿಡಿಯೋ, ರೀಲ್ಸ್ ಇಂಪಾರ್ಟೆಂಟ್. ಆದ್ರೆ ಆ ಜಾಗದಲ್ಲಿ ಬೆಳೆ ಬೆಳೆದ ರೈತನಿಗೆ ಬೆಳೆ ಮುಖ್ಯ. ಮಕ್ಕಳ ಹುಡುಗಾಟಕ್ಕೆ ಬೆಳೆ ಹಾಳಾದ್ರೆ ಎನ್ನುವ ಆತಂಕ. ಅವ್ರನ್ನು ಎಷ್ಟು ಅಂತ ಓಡಿಸೋಕೆ ಸಾಧ್ಯ. ಪ್ರವಾಸಿ ತಾಣಗಳ ಹತ್ತಿರ ಸುಂದರ ತೋಟಗಳಿರುವ ಮಾಲೀಕರದ್ದು ಒಂದೇ ಗೋಳು. ಪ್ರವಾಸಿಗರಿಂದ ಬೆಳೆ ಹಾಳಾಗುತ್ತೆ ಅನ್ನೋದು. ಇಡೀ ದಿನ ಬರುವ ಪ್ರವಾಸಿಗರನ್ನು ಓಡಿಸ್ತಾ ಬೆಳೆ ಕಾಯುವ ಬದಲು ಬಂದ ಪ್ರವಾಸಿಗರನ್ನು ವೆಲ್ ಕಂ ಮಾಡಿ ಹಣ ಮಾಡ್ಕೊಳ್ಳೋದು ಬೆಸ್ಟ್. ಅದಕ್ಕೆ ಗುಂಡ್ಲಪೇಟೆ ಕೆಲ ರೈತರು ಉತ್ತಮ ನಿದರ್ಶನ.
ಈಗ ಚಾಮರಾಚನಗರದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ (Himavad Gopalaswamy hill) ಏರೋರ ಸಂಖ್ಯೆ ಹೆಚ್ಚು. ಅದು ಪ್ರಸಿದ್ಧ ಪ್ರವಾಸಿ ತಾಣ (tourist spot) ಮೈಸೂರಿನಿಂದ ಕೇವಲ 80 ಕಿಲೋಮೀಟರ್ ದೂರದಲ್ಲಿರುವ ಈ ಬೆಟ್ಟ ಊಟಿ ರಸ್ತೆಯಲ್ಲಿದೆ. ವೀಕೆಂಡ್ ಬಂದ್ರೆ ಸಾಲು ಸಾಲು ವಾಹನ ಈ ರಸ್ತೆಯಲ್ಲಿ ಓಡಾಡುತ್ತೆ. ಗುಂಡ್ಲಪೇಟೆ ಬಳಿ ಇರುವ ಈ ಪ್ರವಾಸಿ ತಾಣಕ್ಕೆ ಬರುವವರ ಕಣ್ಣು, ಗುಂಡ್ಲಪೇಟೆ ರೈತರು ಬೆಳೆದ ಸುಂದರ ಹೂಗಳ ಮೇಲಿರುತ್ತೆ. ತರಕಾರಿ, ಹೂ ನೋಡ್ತಿದ್ದಂತೆ ವಾಹನ ನಿಲ್ಲಿಸಿ, ಫೋಟೋ ಕ್ಲಿಕ್ಕಿಸಿಕೊಳ್ಳೋಕೆ ತೋಟಕ್ಕೆ ನುಗ್ತಾರೆ. ಸದ್ಯ ಸೂರ್ಯಕಾಂತಿ ತೋಟದ ಎಲ್ಲರನ್ನು ಸೆಳೆಯುತ್ತಿದೆ. ಅರಳಿದ ಸೂರ್ಯಕಾಂತಿ ಹೂಗಳ ಮಧ್ಯೆ ಫೋಟೋ, ವಿಡಿಯೋ ಮಾಡುವ ಪ್ರವಾಸಿಗರಿಂದ ಅದೆಷ್ಟೋ ಗಿಡ ಹಾಳಾಗ್ತಿದೆ. ಇದನ್ನು ಗಮನಿಸಿದ ಸೂರ್ಯಕಾಂತಿ ತೋಟದ ಮಾಲೀಕರು ಹೊಸ ಪ್ಲಾನ್ ಮಾಡಿದ್ದಾರೆ.
ಒಬ್ಬ ವ್ಯಕ್ತಿ 20 ರೂಪಾಯಿ ಚಾರ್ಜ್ : ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದೆ. ಅದ್ರ ಪ್ರಕಾರ, ಗುಂಡ್ಲಪೇಟೆ ಸೂರ್ಯಕಾಂತಿ ತೋಟಕ್ಕೆ (Gundlapet Sunflower Garden) ಬರುವ ಪ್ರವಾಸಿಗರಿಗೆ ತೋಟದ ಮಾಲೀಕ ಚಾರ್ಜ್ ಮಾಡ್ತಿದ್ದಾರೆ. ಒಬ್ಬರು 20 ರೂಪಾಯಿ ನೀಡಿ ತೋಟಕ್ಕೆ ಹೋಗ್ಬಹುದು. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಕಮೆಂಟ್ ಮೇಲೆ ಕಮೆಂಟ್ ಮಾಡಿದ್ದಾರೆ. ಇದು ಒಳ್ಳೆಯ ಐಡಿಯಾ, ಪ್ರವಾಸಿಗರಿಂದ ಬೆಳೆ ಹಾಳಾಗುತ್ತದೆ. ಅದನ್ನು ಕೇಳೋರಿಲ್ಲ. ರೈತ ತನ್ನ ಬೆಳೆ ರಕ್ಷಣೆಗೆ ಹಣ ಪಡೆದ್ರೆ ಬೇಸರವಿಲ್ಲ ಎನ್ನುವ ಕಮೆಂಟ್ ಬಂದಿದೆ. ಬಹುತೇಕರು 20 ರೂಪಾಯಿ ಬಹಳ ಕಡಿಮೆ, 50 -100 ರೂಪಾಯಿ ಚಾರ್ಜ್ ಮಾಡಿ ಅಂತ ಸಲಹೆ ಕೂಡ ನೀಡಿದ್ದಾರೆ. ತಲೆ ಅಂದ್ರ ಇದು, ಈಗಿನ ಜನರೇಷನ್ ದೂರುವ ಬದಲು ಅದನ್ನೇ ಬ್ಯುಸಿನೆಸ್ ಮಾಡ್ಕೊಂಡಿದ್ದಾರೆ ಅಂತ ಬಳಕೆದಾರರು ರೈತನ ಬೆನ್ನುತಟ್ಟಿದ್ದಾರೆ.
