ಅಹಮದಾಬಾದ್(ಅ.26): ಹೇಳಿ ಕೇಳಿ ಗುಜರಾತ್ ವ್ಯಾಪಾರಸ್ಥರ ತವರೂರು. ಮೇಲಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಂತ ರಾಜ್ಯ. ಉದ್ಯಮಶೀಲತೆ ಮತ್ತು ಕೈಗಾರಿಕಾ ಅಭಿವೃದ್ಧಿ ಗುಜರಾತ್‌ ರಾಜ್ಯದ ಮೂಲ ಗುಣ.

ಅದರಂತೆ ವ್ಯಾಪಾರಸ್ಥರ ಸ್ವರ್ಗ ಗುಜರಾತ್ ರಾಜ್ಯದಲ್ಲಿ ಬರೋಬ್ಬರಿ 58 ಜನ ಕುಬೇರರಿದ್ದಾರೆ. ಇವರ ಬಳಿ ಸಾವಿರ ಕೋಟಿಗೂ ಅಧಿಕ ನಿವ್ವಳ ಆಸ್ತಿ ಇದೆ. ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ರಿಚ್ 2018ರ ವರದಿ ಪ್ರಕಾರ ಅತಿಹೆಚ್ಚು ಶತಕೋಟ್ಯಾಧಿಪತಿಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ನಾಲ್ಕನೇ ಸ್ಥಾನ ಪಡೆದಿದೆ.

ಮಹಾರಾಷ್ಟ್ರದಲ್ಲಿ 272, ನವದೆಹಲಿಯಲ್ಲಿ 163, ಕರ್ನಾಟಕದಲ್ಲಿ 72 ಜನ ಶತಕೋಟ್ಯಾಧಿಪತಿಗಳಿದ್ದು, ಭಾರತದಲ್ಲಿ ಒಟ್ಟು 831 ಜನರು ತಲಾ ಸಾವಿರ ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ ಎಂದು ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ರಿಚ್ 2018ರ ವರದಿ ತಿಳಿಸಿದೆ.

ಪ್ರಸಕ್ತ ಸಾಲಿನಲ್ಲಿ ಗುಜರಾತ್‌ನ 22 ಜನ ಅತಿ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ರಾಜ್ಯದ 36 ಆಗರ್ಭ ಶ್ರೀಮಂತರು ಒಟ್ಟು 2.40 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದರು ಎಂದು ವರದಿ ಉಲ್ಲೇಖಿಸಿದೆ.

ಯಾರ ಬಳಿ ಎಷ್ಟು ಹಣ?:

ಗುಜರಾತ್‌ನ ಅದಾನಿ ಗ್ರೂಪ್ ಮಾಲೀಕ ಗೌತಮ ಅದಾನಿ ಒಟ್ಟು 71,200 ಕೋಟಿ ರೂ. ನಿವ್ವಳ ಆಸ್ತಿ ಹೊಂದಿದ್ದರೆ, ಜಿಯಾಡಸ್ ಸಮೂಹದ ಪಂಕಜ್ ಪಟೇಲ್ 32,100 ಕೋಟಿ ರೂ, ಎಐಎ ಎಂಜನಿಯರಿಂಗ್ ಭದ್ರೇಶ್ ಶಾ 9,700 ಕೋಟಿ ರೂ, ಕರ್ನಾನ್ ಭಾಯ್ ಪಟೇಲ್ 9,600 ಕೋಟಿ ರೂ ಹಾಗೂ ಟೊರೆಂಟ್ ಗ್ರೂಪ್‌ನ ಪ್ರವರ್ತಕರಾದ ಸಮೀರ್ ಮತ್ತು ಸುಧೀರ್ ಮೆಹ್ತಾ ತಲಾ 8,300 ಕೋಟಿ ರೂ. ನಿವ್ವಳ ಆಸ್ತಿ ಹೊಂದಿದ್ದಾರೆ. 

ಅಹಮದಾಬಾದ್ ನಗರವೊಂದರಲ್ಲೇ ೪೯ ಶತಕೋಟ್ಯಾಧಿಪತಿಗಳಿದ್ದರೆ, ರಾಜಕೋಟ್ ನಲ್ಲಿ ಐವರು, ಸೂರತ್‌ನಲ್ಲಿ ಮೂವರು ಹಾಗೂ ವಡೋದರಾದಲ್ಲಿ ಒಬ್ಬರು ಆಗರ್ಭ ಶ್ರೀಮಂತರ ಪಟ್ಟಿಯಲ್ಲಿದ್ದಾರೆ.

ಆದರೂ, ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ಗುಜರಾತ್‌ಗಿಂತ ಕರ್ನಾಟಕ ಉನ್ನತ ಸ್ಥಾನದಲ್ಲಿರುವುದು ಕೂಡ ಗಮನಾರ್ಹ ಅಂಶ ಎಂಬುದನ್ನು ಅಲ್ಲಗಳೆಯುವಂತಿಲ್ಲ.