ರಾಜ್ಯಗಳಿಗೆ ಕೇಂದ್ರದಿಂದ 20000 ಕೋಟಿ GST ಪಾಲು!
ರಾಜ್ಯಗಳಿಗೆ ಕೇಂದ್ರದಿಂದ 20000 ಕೋಟಿ ಜಿಎಸ್ಟಿ ಪಾಲು| ನಷ್ಟ ಪರಿಹಾರ ಕುರಿತು ಒಮ್ಮತಕ್ಕೆ ಬರಲು ವಿಫಲ| ಇಸ್ರೋ, ಆ್ಯಂಟ್ರಿಕ್ಸ್‌ಗೆ ಜಿಎಸ್‌ಟಿ ವಿನಾಯಿತಿ
ನವದೆಹಲಿ(ಅ.06): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಮಹತ್ವದ ಸಭೆ ಸೋಮವಾರ ನಡೆಯಿತು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯಗಳ ನಷ್ಟಪರಿಹಾರ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬರಲು ವಿಫಲವಾದವು. ಇದೇ ವೇಳೆ, ರಾಜ್ಯಗಳ ಜಿಎಸ್‌ಟಿ ಪರಿಹಾರವಾಗಿ 20 ಸಾವಿರ ಕೋಟಿ ರು.ಗಳನ್ನು ಸೋಮವಾರ ರಾತ್ರಿಯೇ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ಸಾಲದ ಮೂಲಕ ನಷ್ಟಪರಿಹಾರಕ್ಕೆ ಕೇಂದ್ರ ಸರ್ಕಾರ 2 ಆಯ್ಕೆ ನೀಡಿತ್ತು. ಆ ಪೈಕಿ 21 ರಾಜ್ಯಗಳು ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಂಡಿವೆ. ಆದರೆ ಕೆಲವು ರಾಜ್ಯಗಳು ಯಾವುದೇ ಆಯ್ಕೆಯನ್ನೂ ಉಪಯೋಗಿಸಿಲ್ಲ. ಹೀಗಾಗಿ ಮತ್ತಷ್ಟು ಚರ್ಚೆ ನಡೆಸಲು ನಿರ್ಧರಿಸಲಾಗಿದೆ.
ಅ.12ರಂದು ಮತ್ತೆ ಸಭೆ ಸೇರುತ್ತೇವೆ ಎಂದು ತಿಳಿಸಿದರು. 2022ರ ಜೂನ್ ಬಳಿಕವೂ ರಾಜ್ಯಗಳಿಗೆ ನಷ್ಟಪರಿಹಾರ ನೀಡಲು ಜಿಎಸ್‌ಟಿ ಸೆಸ್ ಸಂಗ್ರಹ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು. ಇಸ್ರೋ, ಆ್ಯಂಟ್ರಿಕ್ಸ್ ಕಂಪನಿಗಳ ಉಪಗ್ರಹ ಉಡಾವಣೆ ಸೇವೆಗೆ ಜಿಎಸ್‌ಟಿ ವಿನಾಯಿತಿ ನೀಡಲು ಸಭೆ ನಿರ್ಧರಿಸಿತು.