GST ಕೌನ್ಸಿಲ್ ಸಭೆಯಲ್ಲಿ ಮೂಡದ ಒಮ್ಮತ ಪೆಟ್ರೋಲ್, ಡೀಸೆಲ್  GST ವ್ಯಾಪ್ತಿಗೆ ಒಳಪಡಿಸಲು ವಿರೋಧ ಸಮಿತಿ ಸದಸ್ಯರ ತೀವ್ರ ವಿರೋಧ, ಜನಸಾಮಾನ್ಯರಿಗೆ ಬರೆ  

ನವದೆಹಲಿ(ಸೆ.17): ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿಯಂತ್ರಣಕ್ಕೆ ಇಂದು ನಡೆದ GST ಕೌನ್ಸಿಲ್ ಸಭೆ ಉತ್ತರವಾಗಲಿದೆ ಎಂದು ನಿರೀಕ್ಷಿಸಿದ್ದ ಜನಸಾಮಾನ್ಯರಿಗೆ ನಿರಾಸೆಯಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಸಮಯ ಇದಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ತೈಲೋತ್ಪನ್ನ GST ವ್ಯಾಪ್ತಿಗೆ ಬಂದರೆ ಪೆಟ್ರೋಲ್ ದರ 60 ರೂಪಾಯಿ..?

ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರುವ ಕುರಿತು ಕೇರಳ ಹೈಕೋರ್ಟ್ ಜಿಎಸ್‌ಟಿ ಕೌನ್ಸಿಲ್‌ಗೆ ಪ್ರಶ್ನೆ ಮಾಡಿತ್ತು. ಹೀಗಾಗಿ ಇಂದಿನ ಸಭೆಯತ್ತ ಇಡೀ ದೇಶವೆ ಚಿತ್ತ ನೆಟ್ಟಿತ್ತು. ಆದರೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿನ ರಾಜ್ಯದ ಪ್ರತಿನಿದಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

ಸದ್ಯ ರಾಜ್ಯಗಳ ಪ್ರಮುಖ ಆದಾಯದ ಮೂಲ ಪೆಟ್ರೋಲ್ ಹಾಗೂ ಡೀಸೆಲ್ ಆಗಿದೆ. ಹೀಗಾಗಿ ಸಮಿತಿ ಸಭೆಯಲ್ಲಿನ ಸದಸ್ಯರು ಪೆಟ್ರೋಲ್ ಹಾಗೂ ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

GST ಸಭೆ ನಿರ್ಧಾರ ಜನಸಾಮಾನ್ಯರ ಆತಂಕ ಹೆಚ್ಚಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಿರೀಕ್ಷಿಸಿದ್ದ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಿದೆ.